ಬೆಂಗಳೂರು: ಚಾಮರಾಜಪೇಟೆ ಈದ್ಗಾ ಮೈದಾನದ ಕಿಚ್ಚು ಯಾಕೋ ಏನೋ ತಣ್ಣಗಾಗುವ ಲಕ್ಷಣವೇ ಕಾಣುತ್ತಿಲ್ಲ. ನಿನ್ನೆಯಷ್ಟೇ ಹಿಂದೂ ಮುಖಂಡರ ಶಾಂತಿ ಸಭೆ ಮಾಡಿದ್ದ ಪೊಲೀಸರು ಬುಧವಾರ ಮುಸ್ಲಿಂ ಮುಖಂಡರ ಜೊತೆ ಸಭೆ ಮಾಡಿದರು.
ಚಾಮರಾಜಪೇಟೆ ಪೊಲೀಸ್ ಠಾಣೆಯ ಸಭಾಂಗಣದಲ್ಲಿ ಡಿಸಿಪಿ ಲಕ್ಷ್ಮಣ್ ನಿಂಬರಗಿ ಮತ್ತು ಇಬ್ಬರು ಎಸಿಪಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ 80ಕ್ಕೂ ಹೆಚ್ಚು ಮುಸ್ಲೀಂ ಮುಖಂಡರು ಭಾಗಿಯಾಗಿದ್ದರು. ಕಳೆದ ಹಲವು ದಿನಗಳಿಂದ ನಡೆಯುತ್ತಿರುವ ವಿವಾದದ ವಿಚಾರವಾಗಿ ಪರ-ವಿರೋಧ ಹೇಳಿಕೆಗಳ ಕುರಿತು ಚರ್ಚೆ ನಡೆಸಲಾಯ್ತು. ವಿವಾದದ ವಿಚಾರವಾಗಿ ಯಾವುದೇ ಕಾರಣಕ್ಕೂ ಯಾರು ಪ್ರಚೋದನಕಾರಿ ಹೇಳಿಕೆ ನೀಡದಂತೆ ಎಚ್ಚರಿಸಿದರು.ಸಭೆಯಲ್ಲಿ ಕಂದಾಯ ಇಲಾಖೆ ಅಥವ ಹಿಂದೂ ಪರ ಸಂಘಟನೆಗಳಿಗೆ ಧ್ವಜಾರೋಹಣಕ್ಕೆ ಅವಕಾಶ ನೀಡಬಾರದೆಂಬ ಆಗ್ರಹವನ್ನು ಮುಸ್ಲಿಂ ಮುಖಂಡರು ಮಾಡಿದರು.
ಸರ್ಕಾರದ ಅಣತಿಯಂತೆ ಪೊಲೀಸ್ ಇಲಾಖೆ ಕಾರ್ಯನಿರ್ವಹಿಸಲಿದೆ:
ಈ ವಿಚಾರಕ್ಕೆ ಸಂಬಂಧಪಟ್ಟಂತೆ ಸರ್ಕಾರ ಏನು ನಿರ್ದೇಶನ ನೀಡಲಿದೆಯೋ ಆ ಪ್ರಕಾರ ಪೊಲೀಸ್ ಇಲಾಖೆ ಕಾರ್ಯನಿರ್ವಹಿಸಲಿದೆ. ಸರ್ಕಾರದ ನಿರ್ಧಾರಕ್ಕೆ ನಾವು ಬದ್ಧವಾಗಿರಬೇಕು ಇಲ್ಲವಾದಲ್ಲಿ ಕಾನೂನಡಿ ಕ್ರಮ ಕೈಗೊಳ್ಳುವುದಾಗಿ ಡಿಸಿಪಿ ಲಕ್ಷ್ಮಣ ನಿಂಬರಗಿ ಸಭೆಯಲ್ಲಿ ಮುಖಂಡರಿಗೆ ಎಚ್ಚರಿಕೆ ನೀಡಿದರು.
40 ವರ್ಷದಿಂದ ಅಣ್ಣ ತಮ್ಮಂದಿರ ಹಾಗೇ ಬದುಕಿದ್ದೇವೆ:
ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸೆಂಟ್ರಲ್ ಮುಸ್ಲಿಂ ಅಸೋಸಿಯೇಷನ್ ಜನರಲ್ ಸೆಕರೆಟರಿ ಮೈನುದ್ದೀನ್, ನಾವು ಶಾಂತಿ ಕಾಪಾಡುವುದಾಗಿ ಹೇಳಿದ್ದೇವೆ. ಪೊಲೀಸರಿಗೆ ನಾವು ಸಹಕಾರ ನೀಡುತ್ತೇವೆ. ಚಾಮರಾಜಪೇಟೆಯಲ್ಲಿ ನಾವೆಲ್ಲ 40ವರ್ಷದಿಂದ ಅಣ್ಣ ತಮ್ಮಂದಿರ ಹಾಗೇ ಇದ್ದೇವೆ. ನಾವು ಯಾರಿಗೂ ತೊಂದರೆ ಕೊಟ್ಟಿಲ್ಲ, ಶಾಂತಿ ಭಂಗ ಮಾಡುವವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದೇವೆ. ಕಂದಾಯ ಇಲಾಖೆ ಸ್ಪಷ್ಟನೆ ನೀಡಿದ ಬಳಿಕ ಸ್ವಾತಂತ್ರೋತ್ಸವ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದರು.
ಧ್ವಜಾರೋಹಣ ನಾವೇ ನಡೆಸುತ್ತೇವೆ:
ಸಭೆಯಲ್ಲಿ ಭಾಗಿಯಾಗಿದ್ದ ಮತ್ತೊಬ್ಬ ಮುಖಂಡ ಅಬ್ದುಲ್ ರಜಾಕ್ ಮಾತನಾಡಿ, ಶಾಂತಿ ಸಭೆ ಆಗಿದೆ. ಪೊಲೀಸರು ಶಾಂತಿ ಕಾಪಾಡುವಂತೆ ಹೇಳಿದ್ದಾರೆ. ಪ್ರಚೋದನಕಾರಿ ಹೇಳಿಕೆ ನೀಡಬೇಡಿ ಎಂದು ತಿಳಿಸಿದ್ದಾರೆ. ಮೈದಾನದಲ್ಲಿ ನಾವೇ ಧ್ವಜಾರೋಹಣ ಮಾಡುತ್ತೇವೆ. ನಾವು ಬಿಬಿಎಂಪಿ ಆದೇಶ ಒಪ್ಪುವುದಿಲ್ಲ. ಇಲ್ಲಿಯೇ ಧ್ವಜಾರೋಹಣ ಮಾಡುತ್ತೇವೆ. ಕಂದಾಯ ಇಲಾಖೆಯ ಸಚಿವರಿಗೆ ಬುದ್ದಿ ಇದೆ. ಸುಪ್ರೀಂ ಆದೇಶ ಉಲ್ಲಂಘಿಸಿ ಕಂದಾಯ ಇಲಾಖೆ ಧ್ವಜಾರೋಹಣ ಮಾಡಲು ಸಾಧ್ಯವಿಲ್ಲ. ಆಸ್ತಿ ಕಂದಾಯ ಇಲಾಖೆಗೆ ಸಂಬಂಧಪಟ್ಟದ್ದು ಎಂಬುದಕ್ಕೆ ಇಲಾಖೆಯಲ್ಲಿ ಒಂದು ತುಂಡು ಪೇಪರ್ ಸಾಕ್ಷಿ ಇಲ್ಲ. ಇದ್ದರೆ ತೋರಿಸಲಿ ಸಾರ್ವಜನಿಕರ ಮುಂದೆಯೇ ಇಡಲಿ ನಮ್ಮ ಕಡೆಯಿಂದ ಯಾವುದೇ ಒತ್ತಡ ಇಲ್ಲ, ಹಿಂದೂ ಮುಸ್ಲಿಂ ಭಾಯ್ ಭಾಯ್ ಎನ್ನುವ ಮೂಲಕ ನಡೆಯುತ್ತಿರುವ ಗೊಂದಲಕ್ಕೆ ಬ್ರೇಕ್ ಬೀಳಲಿ ಎಂಬಂತೆ ಯತ್ನಿಸಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ