ರಾಷ್ಟ್ರಪತಿ ಚುನಾವಣೆ 2022: ದ್ರೌಪದಿ ಮುರ್ಮು ಅವರಿಗೆ ಜೆಡಿಎಸ್‌ ಬೆಂಬಲ

ರಾಷ್ಟ್ರಪತಿ ಚುನಾವಣೆಯಲ್ಲಿ ಸ್ಪರ್ಧಿಸಿರುವ ಶ್ರೀಮತಿ ದ್ರೌಪದಿ ಮುರ್ಮು ಅವರಿಗೆ ಪಕ್ಷ ರಾಜಕಾರಣವನ್ನು ಮೀರಿ ಬೆಂಬಲ ನೀಡಲು ಜಾತ್ಯತೀತ ಜನತಾದಳ ಸರ್ವಾನುಮತದ ನಿರ್ಣಯ ಕೈಗೊಂಡಿದೆ.

Written by - Zee Kannada News Desk | Last Updated : Jul 15, 2022, 08:46 PM IST
  • ಹೆಚ್.ಡಿ.ದೇವೇಗೌಡರು ಪ್ರಧಾನಿಯಾಗಿದ್ದಾಗ ಮಹಿಳೆಯರಿಗೆ ಮೀಸಲು ಸೌಲಭ್ಯ ಕಲ್ಪಿಸಿ ಮಹಿಳಾ ಸಬಲೀಕರಣಕ್ಕೆ ಐತಿಹಾಸಿಕ ಒತ್ತು ನೀಡಿದ್ದರು.
ರಾಷ್ಟ್ರಪತಿ ಚುನಾವಣೆ 2022: ದ್ರೌಪದಿ ಮುರ್ಮು ಅವರಿಗೆ ಜೆಡಿಎಸ್‌ ಬೆಂಬಲ  title=
file photo

ಬೆಂಗಳೂರು: ರಾಷ್ಟ್ರಪತಿ ಚುನಾವಣೆಯಲ್ಲಿ ಸ್ಪರ್ಧಿಸಿರುವ ಶ್ರೀಮತಿ ದ್ರೌಪದಿ ಮುರ್ಮು ಅವರಿಗೆ ಪಕ್ಷ ರಾಜಕಾರಣವನ್ನು ಮೀರಿ ಬೆಂಬಲ ನೀಡಲು ಜಾತ್ಯತೀತ ಜನತಾದಳ ಸರ್ವಾನುಮತದ ನಿರ್ಣಯ ಕೈಗೊಂಡಿದೆ.

ವಿಧಾನಸೌಧದಲ್ಲಿ ಇಂದು ಸಂಜೆ ನಡೆದ ಜೆಡಿಎಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಶಾಸಕಾಂಗ ಪಕ್ಷದ ಉಪ ನಾಯಕ ಬಂಡೆಪ್ಪ ಕಾಶೆಂಪೂರ್ ಅವರು ಮಾಧ್ಯಮಗಳಿಗೆ ತಿಳಿಸಿದರು.

ಕೋವಿಡ್ ಪಾಸಿಟಿವ್ ಕಾರಣಕ್ಕೆ ಹೊಮ್ ಐಸೋಲೇಷನ್ ಆಗಿರುವ ಶಾಸಕಾಂಗ ಪಕ್ಷದ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರು ಹಾಗೂ ತಮ್ಮ ಪುತ್ರಿಯ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹಾಗೂ ಮಳೆ, ನೆರೆ ಕಾರಣಕ್ಕೆ ತಮ್ಮ ಕ್ಷೇತ್ರಗಳಲ್ಲಿಯೇ ಬೀಡುಬಿಟ್ಟಿರುವ ಪಕ್ಷದ ಎಲ್ಲ ಶಾಸಕರು ವರ್ಚುಯಲ್ ವೇದಿಕೆ ಮೂಲಕ ಸಭೆಯಲ್ಲಿ ಭಾಗಿಯಾಗಿದ್ದರು ಎಂದು ಅವರು ಮಾಹಿತಿ ನೀಡಿದರು.

ಹೆಚ್.ಡಿ.ದೇವೇಗೌಡರು ಪ್ರಧಾನಿಯಾಗಿದ್ದಾಗ ಮಹಿಳೆಯರಿಗೆ ಮೀಸಲು ಸೌಲಭ್ಯ ಕಲ್ಪಿಸಿ ಮಹಿಳಾ ಸಬಲೀಕರಣಕ್ಕೆ ಐತಿಹಾಸಿಕ ಒತ್ತು ನೀಡಿದ್ದರು. ಮೊತ್ತ ಮೊದಲ ಬಾರಿಗೆ ಆದಿವಾಸಿ ಮಹಿಳೆಯೊಬ್ಬರು ರಾಷ್ಟ್ರಪತಿ ಆಗುತ್ತಿರುವುದು ಹೆಮ್ಮೆಯ ಸಂಗತಿ. ಇದು ದೇವೇಗೌಡರ ಆಶಯಕ್ಕೆ ಅನುಗುಣವಾಗಿದೆ. ಶ್ರೀಮತಿ ಮುರ್ಮು ಅವರ ಹಿನ್ನೆಲೆ, ಅವರು ಪ್ರತಿನಿಧಿಸುವ ಸಮುದಾಯವನ್ನು ಗಮನದಲ್ಲಿ ಇಟ್ಟುಕೊಂಡು ಅವರಿಗೆ ಬೆಂಬಲ ನೀಡಲಾಗುತ್ತಿದೆ. ಇದರಲ್ಲಿ ಆ ಪಕ್ಷ ಈ ಪಕ್ಷ ಎನ್ನುವ ಮಾತಿಲ್ಲ. ಅಭ್ಯರ್ಥಿಯನ್ನು ಮಾನದಂಡವಾಗಿಟ್ಟುಕೊಂಡು ಬೆಂಬಲ ಘೋಷಣೆ ಮಾಡಲಾಗಿದೆ ಎಂದು ಅವರು ತಿಳಿಸಿದರು. 

ಇದನ್ನೂ ಓದಿ: 'ನಿಮ್ಮ ತಲೆಗೆ ಹಗರಣಗಳು ಸುತ್ತಿಕೊಂಡ ಕೂಡಲೇ ನಮ್ಮ ಕಾಲದ ಹಗರಣಗಳು ನೆನಪಾಯಿತೇ?'

ಶ್ರೀಮತಿ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆಯಾದ ಮರುದಿನವೇ ನಮ್ಮ ಪಕ್ಷದ ವರಿಷ್ಠ ನಾಯಕರಾದ ಹೆಚ್.ಡಿ.ದೇವೇಗೌಡರಿಗೆ ದೂರವಾಣಿ ಕರೆ ಮಾಡಿ ಬೆಂಬಲ ಯಾಚಿಸಿದ್ದರು. ತದ ನಂತರ ಬೆಂಗಳೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಖುದ್ದು ಅವರೇ ತೆರಳಿ ದೇವೇಗೌಡರು ಹಾಗೂ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮತ ಕೇಳಿದ್ದರು. ಈ ಹಿನ್ನೆಲೆಯಲ್ಲಿ ನಮ್ಮ ಪಕ್ಷ ಶ್ರೀಮತಿ ದ್ರೌಪದಿ ಮುರ್ಮು ಅವರಿಗೆ ಬೆಂಬಲ ನೀಡಲು ತೀರ್ಮಾನ ಕೈಗೊಂಡಿದೆ ಎಂದು ಬಂಡೆಪ್ಪ ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

ಜುಲೈ 18ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಯಲ್ಲಿ ಶ್ರೀಮತಿ ದ್ರೌಪದಿ ಮುರ್ಮು ಅವರಿಗೇ ಮತ ಹಾಕುತ್ತೇವೆ ಎಂದು ಅವರು ತಿಳಿಸಿದರು.

ಫೋಟೊ ವಿಡಿಯೋ ಬಗ್ಗೆ ಹೆದರಿಕೆ ಯಾಕೆ?:

ಸರಕಾರಿ ಕಚೇರಿಯಲ್ಲಿ ಫೋಟೋ, ವಿಡಿಯೋ ನಿಷೇಧ ಮಾಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಬಂಡೆಪ್ಪ ಕಾಶೆಂಪೂರ್‌ ಅವರು, ನಾವು ಸರಿಯಾಗಿದ್ದರೆ ಫೋಟೊ ವಿಡಿಯೋಗೆ ಯಾಕೆ ಹೆದರಬೇಕು? ಹೀಗೆ ನಿಷೇಧ ಮಾಡಿದ್ರೆ 40% ಆರೋಪ ನಿಜ ಆಗುತ್ತದೆ. ಸರಕಾರ ಪಾರದರ್ಶಕವಾಗಿ ಇದ್ದರೆ ಭಯ ಯಾಕೆ? ಆ ಆದೇಶವನ್ನು  ಕೂಡಲೇ ಸರಕಾರ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.

ಜನತಾಮಿತ್ರ ಸಮಾವೇಶ ಮುಂದಕ್ಕೆ:

ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಕೋವಿಡ್ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಇದೇ ತಿಂಗಳು ೧೭ರಂದರ ಹಮ್ಮಿಕೊಳ್ಳಲು ನಿರ್ಧರಿಸಲಾಗಿದ್ದ ʼಜನತಾಮಿತ್ರʼ ಕಾರ್ಯಕ್ರಮವನ್ನು 10 ದಿನಗಳ ಕಾಲ ಮುಂದೂಡಲಾಗಿದೆ ಎಂದು ಅವರು ಬಂಡೆಪ್ಪ ಅವರು ತಿಳಿಸಿದರು.

ಸಿದ್ದರಾಮೋತ್ಸವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಕಾಶೆಂಪೂರ್ ಅವರು, ನಾವು ಜನರ ಉತ್ಸವ ಮಾಡುತ್ತೇವೆ‌. ಪಕ್ಷ ಅಧಿಕಾರಕ್ಕೆ ಬಂದರೆ ಏನು ಮಾಡುತ್ತೇವೆ ಅಂತ ನಾವು ತೋರಿಸಿದ್ದೇವೆ. ನೀರಾವರಿ ವಿಚಾರದಲ್ಲಿ ನಮ್ಮ ಹೋರಾಟ ನಡೆಯುತ್ತಿದೆ. ಆದರೆ ಇವತ್ತು ಸುರಿಯುತ್ತಿರುವ ಮಳೆ ನೀರು ಸಮುದ್ರದ ಪಾಲಾಗುತ್ತಿದೆ. ನಮ್ಮ ದೃಷ್ಟಿ ಜನರ ಕಡೆಗೆ. ಹೀಗಾಗಿ ನಾವು ಯಾವುದೇ ಉತ್ಸವ ಮಾಡುವುದಿಲ್ಲ. ನಾವು ಜನರ ಉತ್ಸವ ಮಾಡಿದ್ದೇವೆ. ನಾವು ವಯಕ್ತಿಕ ಉತ್ಸವ ಮಾಡುವುದಿಲ್ಲ. ಜನರಿಗೆ ನಾವು ಏನು ಮಾಡುತ್ತೇವೆ ಎಂಬುದನ್ನು  ಹೇಳಿ ಜನರ ಮುಂದೆ ಹೋಗುತ್ತೇವೆ” ಎಂದು ಹೇಳಿದರು.

ಇದನ್ನೂ ಓದಿ: ಪಿಎಸ್ಐ ನೇಮಕಾತಿ ಅಕ್ರಮ : ಈ ಬ್ಯಾಚ್ ಪಿಎಸ್ ಐಗಳ ಮೇಲೆ ಈಗ ಸಿಐಡಿ ಕಣ್ಣು..?

ಬಿಜೆಪಿಯವರಿಗೆ ಗಾಬರಿ:

ಡಿಸೆಂಬರ್ ನಲ್ಲಿ ಎಲೆಕ್ಷನ್ ಆಗಬಹುದು ಎಂದು ಹೇಳುತ್ತಿದ್ದಾರೆ‌. ನಾವು ಚುನಾವಣಾ ತಯಾರಿಯಲ್ಲಿ  ತೊಡಗಿದ್ದೇವೆ.  ಬಿಜೆಪಿಯವರು ಗಾಬರಿಯಾಗಿ, ಎಲ್ಲೆಲ್ಲೂ ಹೋಗಿ ಸಭೆ ಮಾಡುತ್ತಿದ್ದಾರೆ. ನಮಗೆ ಗಾಬರಿ ಇಲ್ಲ, ಯಾಕೆಂದರೆ ಕುಮಾರಸ್ವಾಮಿ ಅವರು ರೈತರ ಸಾಲ ಮನ್ನ ಮಾಡಿದ್ದಾರೆ. ಹಾಗಾಗಿ ಡಿಸೆಂಬರ್ ನಲ್ಲೇ ಚುನಾವಣೆ ಆಗಲಿ, ಯಾವಾಗಲೇ ಆದರೂ ಚುನಾವಣೆ ನಾವು ಸಿದ್ದರಿದ್ದೇವೆ ಎಂದು ಹೇಳಿದರು.

ಶಾಸಕರಾದ ನಾಗನಗೌಡ ಕುಂದನೂರು, ವೆಂಕಟರಾವ್ ನಾಡಗೌಡ, ಡಾ.ಕೆ.ಅನ್ನದಾನಿ, ಅಶ್ವಿನ್ ಕುಮಾರ್,  ನಿಸರ್ಗ ನಾರಾಯಣಸ್ವಾಮಿ, ದೇವಾನಂದ ಚೌಹಾಣ್, ಸುರೇಶ್ ಗೌಡ, ವಿಧಾನ ಪರಿಷತ್ ಸದಸ್ಯರಾದ ಕೆ.ಎನ್.ತಿಪ್ಪೇಸ್ವಾಮಿ ಸೇರಿದಂತೆ ಹಲವು ಶಾಸಕರು ಸಭೆಯಲ್ಲಿ ಉಪಸ್ಥಿತರಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News