'ಕಾರ್ಪೋರೇಟ್‌ ಸಂಸ್ಥೆಗಳ ಮೇಲೆ ತೆರಿಗೆ ಹೆಚ್ಚು ವಿಧಿಸುವುದು ಬಿಟ್ಟು ಬಡವರ ಜೀವನ ಯಾಕೆ ಹಾಳು ಮಾಡುತ್ತೀರಾ?'

 ಕೊರೊನಾ ಸಮಯದಲ್ಲಿ ಕಾರ್ಪೋರೇಟ್‌ ಸಂಸ್ಥೆಗಳ ಆದಾಯ 33 ಲಕ್ಷ ಕೋಟಿ ಹೆಚ್ಚಾಗಿದೆ. ಇವರ ಮೇಲೆ ತೆರಿಗೆ ಹೆಚ್ಚು ವಿಧಿಸುವುದು ಬಿಟ್ಟು ಬಡವರ ಜೀವನ ಯಾಕೆ ಹಾಳು ಮಾಡುತ್ತೀರ? ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರು ಟೀಕಾ ಪ್ರಹಾರ ನಡೆಸಿದ್ದಾರೆ.

Written by - Zee Kannada News Desk | Last Updated : Jun 30, 2022, 11:12 PM IST
  • ಈಗ ಹೆಚ್ಚು ಮಾಡಿರುವ ತೆರಿಗೆಯನ್ನು ಕಡಿಮೆ ಮಾಡಬೇಕು ಮತ್ತು ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರವನ್ನು ಮುಂದುವರೆಸಬೇಕು ಎಂದು ಒತ್ತಾಯಿಸುತ್ತೇನೆ.
  • ಕೊರೊನಾ ಸಮಯದಲ್ಲಿ ಕಾರ್ಪೋರೇಟ್‌ ಸಂಸ್ಥೆಗಳ ಆದಾಯ 33 ಲಕ್ಷ ಕೋಟಿ ಹೆಚ್ಚಾಗಿದೆ.
 'ಕಾರ್ಪೋರೇಟ್‌ ಸಂಸ್ಥೆಗಳ ಮೇಲೆ ತೆರಿಗೆ ಹೆಚ್ಚು ವಿಧಿಸುವುದು ಬಿಟ್ಟು ಬಡವರ ಜೀವನ ಯಾಕೆ ಹಾಳು ಮಾಡುತ್ತೀರಾ?'  title=
file photo

ಬೆಂಗಳೂರು: ಕೊರೊನಾ ಸಮಯದಲ್ಲಿ ಕಾರ್ಪೋರೇಟ್‌ ಸಂಸ್ಥೆಗಳ ಆದಾಯ 33 ಲಕ್ಷ ಕೋಟಿ ಹೆಚ್ಚಾಗಿದೆ. ಇವರ ಮೇಲೆ ತೆರಿಗೆ ಹೆಚ್ಚು ವಿಧಿಸುವುದು ಬಿಟ್ಟು ಬಡವರ ಜೀವನ ಯಾಕೆ ಹಾಳು ಮಾಡುತ್ತೀರ? ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರು ಕೇಂದ್ರ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.

ಈ ತಿಂಗಳ 28-29ನೇ ತಾರೀಖಿನಂದು ಎರಡು ದಿನ ಚಂಡೀಘಡದಲ್ಲಿ ಜಿಎಸ್‌ಟಿ ಕೌನ್ಸಿಲ್‌ ಸಭೆ ನಡೆಯಿತು. ಅದರಲ್ಲಿ ಭಾಗವಹಿಸಿದ್ದ ರಾಜ್ಯ ಸರ್ಕಾರದ ಪ್ರತಿನಿಧಿಗಳು ಜಿಎಸ್‌ಟಿ ಪರಿಹಾರ ಮುಂದುವರೆಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸದೆ ರಾಜ್ಯಕ್ಕೆ ದ್ರೋಹ ಎಸಗಿದ್ದಾರೆ.ಇಂದಿಗೆ ರಾಜ್ಯಕ್ಕೆ ಜಿಎಸ್‌ಟಿ ಪರಿಹಾರ ಸಿಗುವುದು ಕೊನೆಯಾಗುತ್ತಿದೆ. ಜಿಎಸ್‌ಟಿ ಜಾರಿಯಾದ ಮೇಲೆ ರಾಜ್ಯಗಳಿಗೆ ನಷ್ಟವಾಗುತ್ತದೆ ಎಂದು ಆ ನಷ್ಟ ಭರಿಸಿ ಕೊಡಲು ಕೇಂದ್ರ ಸರ್ಕಾರ 14% ಜಿಎಸ್‌ಟಿ ಪರಿಹಾರ ನೀಡಬೇಕು ಎಂದು ಜಿಎಸ್‌ಟಿ ಕೌನ್ಸಿಲ್ ನಲ್ಲಿ ತೀರ್ಮಾನವಾಗಿತ್ತು. 2017 ರ ಜುಲೈ 1 ರಿಂದ ಇದು ಆರಂಭವಾಗಿದ್ದು, ಈ ಅವಧಿ ಇಂದಿಗೆ ಕೊನೆಯಾಗಲಿದೆ.

ಇದನ್ನೂ ಓದಿ-Maharashtra Political Crisis : ಮಹಾ ನೂತನ ಸಿಎಂ ಆಗಿ ಫಡ್ನವಿಸ್, ಉಪಮುಖ್ಯಮಂತ್ರಿಯಾಗಿ ಏಕನಾಥ್ ಶಿಂಧೆ!

ನಾನು ಅನೇಕ ಬಾರಿ ಸದನದ ಒಳಗೆ ಮತ್ತು ಹೊರಗೆ ಜಿಎಸ್‌ಟಿ ಪರಿಹಾರ ಮುಂದುವರೆಸುವಂತೆ ಒತ್ತಾಯ ಮಾಡಿದ್ದೆ. ದೇಶದ ಹಲವು ರಾಜ್ಯಗಳು ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾವೆ, ಜಿಎಸ್‌ಟಿ ಬರುವ ಮೊದಲು ರಾಜ್ಯದ ತೆರಿಗೆ ಬೆಳವಣಿಗೆ ದರ 14% ಇತ್ತು, ಈಗ ಪರಿಹಾರ ಕೊಡುವುದನ್ನು ನಿಲ್ಲಿಸಿದ್ರೆ ನಮ್ಮ ರಾಜ್ಯವೊಂದಕ್ಕೆ ವರ್ಷಕ್ಕೆ 20,000 ಕೋಟಿ ರೂಪಾಯಿ ನಷ್ಟವಾಗುತ್ತದೆ. ಇದನ್ನು ಇನ್ನೂ 5 ವರ್ಷ ಮುಂದುವರೆಸಿ ಎಂದು ಹೇಳಿದ್ದೇನೆ.

ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಹಣಕಾಸು ಸಚಿವರು ಕೇಂದ್ರ ಸರ್ಕಾರದ ತೀರ್ಮಾನಕ್ಕೆ ತಲೆಬಾಗಿ ಒಪ್ಪಿಕೊಳ್ತಾರೆ. ರಾಜ್ಯಗಳಿಗೆ ಅನ್ಯಾಯವಾದರೂ ಅದನ್ನು ಕೇಂದ್ರದ ಮುಂದೆ ಹೇಳುವ ಶಕ್ತಿ ಅವರಿಗೆ ಇಲ್ಲ, ಬಿಜೆಪಿಯೇತರ ರಾಜ್ಯಗಳು ಇದನ್ನು ಮುಂದುವರೆಸಬೇಕು ಎಂದು ಒತ್ತಾಯ ಮಾಡಿವೆ. ನಿನ್ನೆ ಕೂಡ ಈ ಬಗ್ಗೆ ಯಾವ ತೀರ್ಮಾನವಾಗಿಲ್ಲ.

ಜಿಎಸ್‌ಟಿ ಪರಿಹಾರ ನೀಡಲು ಸೆಸ್‌ ಹಾಕುತ್ತಿದ್ದಾರೆ. ಇದನ್ನು ಕೊಡೋದು ರಾಜ್ಯಗಳೇ. ಐಷಾರಾಮಿ ವಸ್ತುಗಳು ಮತ್ತು ಹಾನಿಕಾರಕ ವಸ್ತುಗಳ ಮೇಲೆ ಸೆಸ್‌ ಹಾಕಿ ಕೇಂದ್ರ ಸರ್ಕಾರವೇ ಹಣ ಸಂಗ್ರಹಿಸಿಕೊಳ್ಳುತ್ತದೆ. ಈ ಹಣದಲ್ಲಿ ಇಷ್ಟು ದಿನ ಪರಿಹಾರ ನೀಡುತ್ತಿದ್ದರು. 2026ರ ವರೆಗೆ ಸೆಸ್‌ ಸಂಗ್ರಹ ಮುಂದುವರೆದರೂ ರಾಜ್ಯಗಳಿಗೆ ಪಾಲು ಸಿಗಲ್ಲ. ಈ ರೀತಿ ಸೆಸ್‌ ಸಂಗ್ರಹ ಮಾಡಿದ್ರೂ ತೊಂದರೆಯಲ್ಲಿರುವ ರಾಜ್ಯಗಳಿಗೆ ಪರಿಹಾರ ನೀಡುತ್ತಿಲ್ಲ, ಇದಕ್ಕೆ ನನ್ನ ವಿರೋಧವಿದೆ ಎಂದು ಅವರು ಹೇಳಿದ್ದಾರೆ.

ಜಿಎಸ್‌ಟಿ ಜಾರಿ ಮೊದಲು 14% ಇದ್ದ ತೆರಿಗೆ ಬೆಳವಣಿಗೆ ಈಗ 6% ಗೆ ಬಂದಿದೆ. ಇದಕ್ಕೆ ಕೊವಿಡ್‌ ಕಾರಣ ಎಂದು ಹೇಳಿದರೂ, ರಾಜ್ಯಗಳಿಗೆ ತೆರಿಗೆ ಸಂಗ್ರಹ ಕಡಿಮೆ ಆಗಿರುವುದರಿಂದ ಈ ನಷ್ಟ ತುಂಬಿಕೊಡಬೇಕಾದವರು ಯಾರು? ಕೇಂದ್ರ ಸರ್ಕಾರ ಅಲ್ಲವೇ? ಬಸವರಾಜ ಬೊಮ್ಮಾಯಿ ಅವರು ಜಿಎಸ್‌ಟಿ ಸಭೆಗೆ ಹೋಗಿದ್ದರೂ ಕೂಡ ಈ ಬಗ್ಗೆ ಬೇಡಿಕೆಯನ್ನೇ ಇಟ್ಟಿಲ್ಲ. ಇದು ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ. ಇದನ್ನು ಸರಿಪಡಿಸುವ ಪ್ರಯತ್ನವನ್ನು ಬೊಮ್ಮಾಯಿ ಅವರು ಮಾಡದಿರುವುದು ದುರಂತ. 
ಕೆಲವು ವಸ್ತುಗಳ ಮೇಲಿನ ಜಿಎಸ್‌ಟಿ ತೆರಿಗೆಯನ್ನು ಹೆಚ್ಚು ಮಾಡಿದ್ದಾರೆ. 12% ಇಂದ 18%, ಇನ್ನು ಕೆಲವು 0% ಇಂದ 18%, 5% ಇದ್ದದ್ದನ್ನು 12% ಗೆ ಏರಿಕೆ ಮಾಡಿದ್ದಾರೆ. ರೈತರು ಹಾಗೂ ಜನ ಸಾಮಾನ್ಯರು ಹೊಲ ಗದ್ದೆಗಳಲ್ಲಿ ಬಳಸುವ ಸಬ್‌ ಮೆರಿನ್‌ ಪಂಪ್‌ ಗಳ ಮೇಲೆ 12% ಇದ್ದ ತೆರಿಗೆಯನ್ನು 18% ಗೆ ಏರಿಸಿದ್ದಾರೆ. ಹಣ್ಣು, ತರಕಾರಿ ಮತ್ತು ಮೊಟ್ಟೆಗಳನ್ನು ಪ್ರತ್ಯೇಕಗೊಳಿಸುವ, ಗ್ರೇಡಿಂಗ್‌ ಹಾಗೂ ಹಾಲು ಕರೆಯುವ ಯಂತ್ರಗಳ ಮೇಲೆ ಇದ್ದ ತೆರಿಗೆಯನ್ನು 5% ಇಂದ 18% ಗೆ ಏರಿಕೆ ಮಾಡಿದ್ದಾರೆ. ಇದರಿಂದ ರೈತರಿಗೆ, ಸಾಮಾನ್ಯ ಜನರಿಗೆ ಹಾಗೂ ಮಧ್ಯಮ ವರ್ಗದ ಜನರಿಗೆ ತೊಂದರೆಯಾಗಲ್ವೇ? ಎಂದು ಅವರು ಪ್ರಶ್ನಿಸಿದರು.

ಜಿಎಸ್‌ಟಿ ಮೊದಲೇ ಅವೈಜ್ಞಾನಿಕವಾಗಿದೆ, ರಾಜ್ಯಗಳು ಆರ್ಥಿಕವಾಗಿ ಕೆಟ್ಟ ಪರಿಸ್ಥಿತಿ ಎದುರಿಸುತ್ತಿರುವ ಇಂತಹಾ ಸಂದರ್ಭದಲ್ಲಿ, ಜನ ಸಾಮಾನ್ಯರು ಪೆಟ್ರೋಲ್‌, ಡೀಸೆಲ್‌, ಗ್ಯಾಸ್‌, ಸಿಮೆಂಟ್‌, ಕಬ್ಬಿಣ, ಅಡುಗೆ ಎಣ್ಣೆ ದುಬಾರಿಯಾಗಿರುವ ಇಂಥಾ ಸಮಯದಲ್ಲೇ ತೆರಿಗೆ ಏರಿಕೆ ಮಾಡಿದ್ದಾರೆ. ಸೋಲಾರ್‌ ಸಿಸ್ಟಂಗಳು ಮತ್ತು ಸೋಲಾರ್‌ ವಾಟರ್‌ ಹೀಟರ್‌ ಗಳ ಮೇಲೆ 5% ಇಂದ 12% ಗೆ ತೆರಿಗೆ ಏರಿಕೆ ಮಾಡಿದ್ದಾರೆ. ಧಾನ್ಯಗಳನ್ನು ಸ್ವಚ್ಚ ಮಾಡುವ, ಹಿಟ್ಟು ಮಾಡುವ ಯಂತ್ರಗಳ ಮೇಲೆ ಇದ್ದ ತೆರಿಗೆ 12% ಇಂದ 18% ಗೆ ಹೆಚ್ಚಿಸಿದ್ದಾರೆ. ಇಟ್ಟಿಗೆ ಮಾಡುವ ಜಾಗ್‌ ವರ್ಕ್ ಗಳ ಮೇಲಿನ ತೆರಿಗೆಯನ್ನು 5% ಇಂದ 12% ಗೆ ಹೆಚ್ಚಿಸಿದ್ದಾರೆ. ಎಲ್‌ಇಡಿ ಬಲ್ಬ್‌ ಮತ್ತು ಸಂಬಂಧಿತ ವಸ್ತುಗಳ ಮೇಲೆ 12% ಇಂದ 18% ಗೆ ಏರಿಸಲಾಗಿದೆ. 

ಇದನ್ನೂ ಓದಿ-Maharashtra Political Crisis : ಮಹಾ ನೂತನ ಸಿಎಂ ಆಗಿ ಫಡ್ನವಿಸ್, ಉಪಮುಖ್ಯಮಂತ್ರಿಯಾಗಿ ಏಕನಾಥ್ ಶಿಂಧೆ!

ಬರೆಯುವ ಮತ್ತು ಮುದ್ರಿಸುವ ಇಂಕ್‌ ಗಳ ಮೇಲಿನ ತೆರಿಗೆಯನ್ನು 12% ಇಂದ 18% ಗೆ ಹೆಚ್ಚಿಸಲಾಗಿದೆ. ಇದರಿಂದ ಪತ್ರಿಕೆಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಹೊರೆಯಾಗುತ್ತದೆ. ಮ್ಯಾಪ್‌ ಗಳು ಹಾಗೂ ಶಿಕ್ಷಣದ ಉದ್ದೇಶಕ್ಕೆ ಬಳಸುವ ಚಾರ್ಟ್‌ ಗಳು, ಗ್ಲೋಬ್‌ ಮಾದರಿಗಳಿಗೆ ಈ ವರೆಗೆ ತೆರಿಗೆ ವಿನಾಯಿತಿ ಇತ್ತು, ಅದನ್ನು 12% ಮಾಡಿದ್ದಾರೆ. ಬ್ಯಾಂಕುಗಳ ಚೆಕ್‌ ಬುಕ್‌ ಮೇಲೆ ತೆರಿಗೆ ಇರಲಿಲ್ಲ, ಈಗ 18% ತೆರಿಗೆ ಹಾಕಿದ್ದಾರೆ. ಈ ರೀತಿ ಅವೈಜ್ಞಾನಿಕವಾಗಿ ಯಾರಾದರೂ ಬೆಲೆ ಏರಿಕೆ ಮಾಡುತ್ತಾರಾ? ಎಂದು ಪ್ರಶ್ನಿಸಿದರು.

ನನ್ನ ಪ್ರಕಾರ ಜಿಎಸ್‌ಟಿ ಮಾಡಿರುವುದೇ ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳ ಸ್ವಾಯತ್ತತೆಗೆ ಧಕ್ಕೆ ತರುವ ಕೆಲಸ. ತೆರಿಗೆ ಹಾಕುವುದು ರಾಜ್ಯ ಸರ್ಕಾರದ ಕೆಲಸ, ಹೀಗೆ ಮಿತಿಮೀರಿ ತೆರಿಗೆ ಏರಿಕೆ ಮಾಡಿದರೆ ಹೇಗೆ? ಜಿಎಸ್‌ಟಿ ಕೌನ್ಸಿಲ್‌ ನಲ್ಲಿ ನಿರ್ಣಯಗಳು ಬಹುಮತದ ಮೇಲೆ ತೀರ್ಮಾನವಾಗುತ್ತೆ, ಹೆಚ್ಚಿನ ಕಡೆ ಬಿಜೆಪಿ ಸರ್ಕಾರಗಲೇ ಇವೆ, ಜಿಎಸ್‌ಟಿ ಕಮಿಟಿ ಅಧ್ಯಕ್ಷರು ಕೇಂದ್ರದ ಹಣಕಾಸು ಸಚಿವರೇ ಆಗಿರುವುದರಿಂದ ತಮಗೆ ಬೇಕಾದಂತೆ ನಿರ್ಣಯ ಮಾಡುತ್ತಾರೆ.ಒಟ್ಟಾರೆ ಇಂದು ಬೆಲೆಯೇರಿಕೆ ಹೆಚ್ಚಿರುವ ಸಂದರ್ಭದಲ್ಲಿ ತೆರಿಗೆಗಳನ್ನು ಕಡಿಮೆ ಮಾಡುವ ಬದಲು ಪರೋಕ್ಷ ತೆರಿಗೆಯನ್ನು ಹೆಚ್ಚು ಮಾಡಿದ್ದಾರೆ, ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರವನ್ನು ಮುಂದುವರೆಸಿಲ್ಲ. ಕಾರ್ಪೋರೇಟ್‌ ಕಂಪೆನಿಗಳ ಮೇಲಿನ ತೆರಿಗೆಯನ್ನು 30% ಇಂದ 22% ಗೆ ಇಳಿಕೆ ಮಾಡಿದ್ದರು, ಅದನ್ನು ಈಗ ಹೆಚ್ಚಿಸಿಲ್ಲ. ಇದರ ಬದಲು ಬಡವರು, ಸಾಮಾನ್ಯ ಜನರ ಮೇಲಿನ ತೆರಿಗೆಯನ್ನು ಹೆಚ್ಚು ಮಾಡಿದ್ದಾರೆ. ಇದು ಮೋದಿ ಅವರ ಸರ್ಕಾರ ಮಾಡಿರುವ ಘೋರ ಅಪರಾಧ.

ಈಗ ಹೆಚ್ಚು ಮಾಡಿರುವ ತೆರಿಗೆಯನ್ನು ಕಡಿಮೆ ಮಾಡಬೇಕು ಮತ್ತು ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರವನ್ನು ಮುಂದುವರೆಸಬೇಕು ಎಂದು ಒತ್ತಾಯಿಸುತ್ತೇನೆ. ಕೊರೊನಾ ಸಮಯದಲ್ಲಿ ಕಾರ್ಪೋರೇಟ್‌ ಸಂಸ್ಥೆಗಳ ಆದಾಯ 33 ಲಕ್ಷ ಕೋಟಿ ಹೆಚ್ಚಾಗಿದೆ. ಇವರ ಮೇಲೆ ತೆರಿಗೆ ಹೆಚ್ಚು ವಿಧಿಸುವುದು ಬಿಟ್ಟು ಬಡವರ ಜೀವನ ಯಾಕೆ ಹಾಳು ಮಾಡುತ್ತೀರ? ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಿ ಜನರಿಗೆ ಬದುಕೋದು ಕಷ್ಟವಾಗಿದೆ. ಅವರ ಮೇಲೆ ಮತ್ತೆ ತೆರಿಗೆ ಬರೆ ಎಳೆದಿರುವುದು ದೊಡ್ಡ ಅನ್ಯಾಯ ಎಂದು ಅವರು ಹೇಳಿದರು/

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News