ನವದೆಹಲಿ: ನವದೆಹಲಿಗೆ ಸಂಪೂರ್ಣ ರಾಜ್ಯದ ಸ್ಥಾನಮಾನ ನೀಡಲು ಸಾಧ್ಯವಿಲ್ಲ. ದೆಹಲಿ ಸರ್ಕಾರದೊಂದಿಗೆ ಲೆಫ್ಟಿನೆಂಟ್ ಗವರ್ನರ್ ಹೊಂದಾಣಿಕೆ ಅಗತ್ಯ ಎಂದು ಸುಪ್ರೀಂಕೋರ್ಟ್ ಹೇಳಿದ್ದು, ರಾಷ್ಟ್ರ ರಾಜಧಾನಿಯಲ್ಲಿ ಆಡಳಿತ ಹಾಗೂ ಆಡಳಿತ ನಿಯಂತ್ರಣಕ್ಕೆ ಸಂಬಂಧಿಸಿದಂತೆ ದೆಹಲಿ ಸರ್ಕಾರ ಮತ್ತು ಲೆಫ್ಟಿನೆಂಟ್ ಗವರ್ನರ್ ನಡುವಿನ ಸಮರಕ್ಕೆ ತೆರೆ ಎಳೆದಿದೆ.
ಆಡಳಿತಾತ್ಮಕ ಮುಖ್ಯಸ್ಥರಾಗಿರುವ ಲೆಫ್ಟಿನೆಂಟ್ ಗವರ್ನರ್ ಮಂತ್ರಿಮಂಡಲ ನೀಡುವ ಸಲಹೆ ಹಾಗೂ ಸೂಚನೆಗಳನ್ನು ಒಪ್ಪಿಕೊಳ್ಳಬೇಕೆನ್ನುವ ಅವಶ್ಯಕತೆಯಿಲ್ಲ ಎಂದು 2016 ರ ಆಗಸ್ಟ್ 4 ರಂದು ಹೈ ಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ದೆಹಲಿಯಲ್ಲಿ ಅಧಿಕಾರದಲ್ಲಿರುವ ಅರವಿಂದ ಕೇಜ್ರೀವಾಲ್ ನೇತೃತ್ವದ ಸರ್ಕಾರವು ಸುಪ್ರೀಂ ಮೆಟ್ಟಿಲೇರಿತ್ತು. ಈ ಮೂಲಕ ಯಾರಿಗೆ ಹೆಚ್ಚಿನ ಅಧಿಕಾರವಿದೆ ಎಂದು ಸ್ಪಷ್ಟಪಡಿಸುವಂತೆ ಸರ್ವೋಚ್ಚ ನ್ಯಾಯಾಲಯವನ್ನು ಕೋರಲಾಗಿತ್ತು. ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ನ ಸಂವಿಧಾನ ಪೀಠ, 2017ರ ಡಿಸೆಂಬರ್ 6ರಂದು ತನ್ನ ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿತ್ತು.
ಈ ವಿಚಾರವಾಗಿ ತೀರ್ಪು ಪ್ರಕಟಿಸಿರುವ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠವು, ಸಂವಿಧಾನವನ್ನು ಪಾಲಿಸುವುದು ಪ್ರತಿಯೊಬ್ಬರ ಕರ್ತವ್ಯ ಮತ್ತು ಜವಾಬ್ದಾರಿ. ನಿರಂಕುಶವಾದ ಮತ್ತು ಅರಾಜಕತೆಗೆ ಸಂವಿಧಾನದಲ್ಲಿ ಜಾಗವಿಲ್ಲ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಡುವಿನ ಸಂಬಂಧ ಸೌಹಾರ್ದಯುತವಾಗಿ, ಆರೋಗ್ಯಕರವಾಗಿರಬೇಕು. ಲೆಫ್ಟಿನೆಂಟ್ ಗವರ್ನರ್ ರಾಜ್ಯದೊಂದಿಗೆ ಆರೋಗ್ಯಯುತ ಸಂಬಂಧ ಹೊಂದಿದ್ದು, ಸೌಹಾರ್ದತೆಯಿಂದ ಕಾರ್ಯನಿರ್ವಹಿಸಬೇಕು. ರಾಜ್ಯ ಸರ್ಕಾರ ಮತ್ತು ಲೆಫ್ಟಿನೆಂಟ್ ಗವರ್ನರ್ ನಡುವೆ ಹೊಂದಾಣಿಕೆ ಅಗತ್ಯ ಎಂದು ಹೇಳಿದೆ.