ನವದೆಹಲಿ: ಕಳೆದ ವರ್ಷದಲ್ಲಿ ಸ್ವಿಸ್ ಬ್ಯಾಂಕ್ನಲ್ಲಿರುವ ಭಾರತೀಯರ ಹಣ ಶೇ.50 ರಷ್ಟು ಹೆಚ್ಚಾಗಿದೆ. ಆದರೆ ಆ ಹಣವೆಲ್ಲಾ ಕಪ್ಪು ಹಣ ಎಂದು ಹೇಳಲು ಸಾಧ್ಯವಿಲ್ಲ. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಹಣಕಾಸು ಸಚಿವ ಪಿಯೂಶ್ ಗೋಯಲ್ ಹೇಳಿದ್ದಾರೆ.
ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದ್ವಿಪಕ್ಷೀಯ ಒಪ್ಪಂದದ ಪ್ರಕಾರ, ಸ್ವಿಡ್ಜರ್ ಲ್ಯಾಂಡ್ ಸರ್ಕಾರ ಜನವರಿ 1, 2018ರಿಂದ ಡಿಸೆಂಬರ್ 31, 2018ರ ವರೆಗೆ ಭಾರತೀಯರ ಬ್ಯಾಂಕ್ ಖಾತೆಗಳಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು 2019ರಲ್ಲಿ ನೀಡಲಿದೆ ಎಂದು ಗೋಯಲ್ ತಿಳಿಸಿದ್ದಾರೆ.
ಗುರುವಾರ ಸ್ವಿಸ್ ನ್ಯಾಷನಲ್ ಬ್ಯಾಂಕ್ (ಎಸ್ ಎನ್ ಬಿ) ತನ್ನ ವಾರ್ಷಿಕ ವರದಿ ಬಿಡುಗಡೆ ಮಾಡಿದ್ದು, 2017ರಲ್ಲಿ ಸ್ವಿಸ್ ಬ್ಯಾಂಕ್ ನಲ್ಲಿ ವಿಶ್ವದ ಒಟ್ಟು ವಿದೇಶಿ ಗ್ರಾಹಕರ ಹಣದಲ್ಲಿ ಶೇ.3ರಷ್ಟು(100 ಲಕ್ಷ ಕೋಟಿ ರುಪಾಯಿ) ಹೆಚ್ಚಳವಾಗಿದೆ. ಈ ಪೈಕಿ ಭಾರತೀಯರ ಹಣ ಶೇ.50ರಷ್ಟು(7 ಸಾವಿರ ಕೋಟಿ) ಹೆಚ್ಚವಾಗಿರುವುದು ಬಹಿರಂಗವಾಗಿದೆ. ಆದರೆ, ವಿದೇಶದಲ್ಲಿರುವ ಕಪ್ಪು ಹಣದ ವಿರುದ್ಧ ಕೇಂದ್ರ ಸರ್ಕಾರ ಘೋಷಿಸಿದ ನಂತರ ಸ್ವಿಸ್ ಬ್ಯಾಂಕ್'ಗಳಲ್ಲಿ ಭಾರತೀಯರ ಠೇವಣಿ ಹಣದಲ್ಲಿ ಇಳಿಕೆಯಾಗಿತ್ತು. ಆದರೆ ಕಳೆದ ವರ್ಷ ಶೇ.50 ರಷ್ಟು ಹೆಚ್ಚಳವಾಗಿದೆ.