ಐಸ್‍ಕ್ರೀಮ್ ಬಾಕ್ಸ್ ನಲ್ಲಿದ್ದ ಜವರಾಯ: ಬಾಲಕಿಯರ ಸಾವಿನ ‘ಕಣ್ಣಾಮುಚ್ಚಾಲೆ’ ಆಟ..!

ಬೇಸಿಗೆ ರಜೆ ಹಿನ್ನೆಲೆ ಕಣ್ಣಾಮುಚ್ಚಾಲೆ ಆಟ ಆಡುತ್ತಿದ್ದ ಬಾಲಕಿಯರಿಬ್ಬರು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ನಂಜನಗೂಡು ತಾಲೂಕಿನ ಮಸಗೆ ಗ್ರಾಮದಲ್ಲಿ ನಡೆದಿದೆ.

Written by - Zee Kannada News Desk | Last Updated : Apr 29, 2022, 10:29 AM IST
  • ಮೈಸೂರಿನ ನಂಜನಗೂಡು ತಾಲೂಕಿನಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದೆ
  • ರಜೆ ಹಿನ್ನೆಲೆ ಹಳ್ಳಿ ಸೊಗಡಿನ ಕಣ್ಣಾಮುಚ್ಚಾಲೆ ಆಟ ಆಡುತ್ತಿದ್ದ ಇಬ್ಬರು ಬಾಲಕಿಯರು
  • ಐಸ್‍ಕ್ರೀಮ್ ಬಾಕ್ಸ್ ನೊಳಗೆ ಸಿಲುಕಿ ಉಸಿರುಗಟ್ಟಿ ಸಾವನ್ನಪ್ಪಿದ ಪುಟ್ಟ ಮಕ್ಕಳು
ಐಸ್‍ಕ್ರೀಮ್ ಬಾಕ್ಸ್ ನಲ್ಲಿದ್ದ ಜವರಾಯ: ಬಾಲಕಿಯರ ಸಾವಿನ ‘ಕಣ್ಣಾಮುಚ್ಚಾಲೆ’ ಆಟ..! title=
ಇಬ್ಬರು ಬಾಲಕಿಯರು ದಾರುಣ ಸಾವು

ನಂಜನಗೂಡು: ಸಾವು ಹೇಗೆ, ಯಾವ ರೂಪದಲ್ಲಿ ಬರುತ್ತದೆ ಯಾರೂ ಅಂದಾಜಿಸಲು ಸಾಧ‍್ಯವಿಲ್ಲ. ಇದಕ್ಕೆ ನಿದರ್ಶನವೆಂಬಂತೆ ಮೈಸೂರಿನ ನಂಜನಗೂಡು ತಾಲೂಕಿನಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದೆ. ಬೇಸಿಗೆ ರಜೆ ಹಿನ್ನೆಲೆ ಹಳ್ಳಿಯ ಸೊಗಡಿನ ಕಣ್ಣಾಮುಚ್ಚಾಲೆ ಆಟ ಆಡುತ್ತಿದ್ದ ಇಬ್ಬರು ಬಾಲಕಿಯರು ದಾರುಣ ಸಾವನ್ನಪ್ಪಿದ್ದಾರೆ. ಇದಕ್ಕೆ ಕಾರಣವಾಗಿದ್ದು ಐಸ್‍ಕ್ರೀಮ್ ಬಾಕ್ಸ್!

ಹೌದು, ಕಣ್ಣಾಮುಚ್ಚಾಲೆ ಆಟವಾಡುತ್ತಿದ್ದ ವೇಳೆ ಐಸ್‍ಕ್ರೀಮ್ ಬಾಕ್ಸ್ ಗೆ ಸಿಲುಕಿದ ಬಾಲಕಿಯರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ನಂಜನಗೂಡು ತಾಲೂಕಿನ ಮಸಗೆ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ಗ್ರಾಮದ ನಾಗರಾಜ ನಾಯ್ಕ ಹಾಗೂ ಚಿಕ್ಕದೇವಮ್ಮ ಎಂಬುವರ ಪುತ್ರಿ 12 ವರ್ಷದ ಭಾಗ್ಯ ಹಾಗೂ ರಾಜು ನಾಯ್ಕ ಮತ್ತು ಗೌರಮ್ಮ ದಂಪತಿಯ 7 ವರ್ಷದ ಪುತ್ರಿ ಕಾವ್ಯ ಮೃತ ದುರ್ದೈವಿಗಳು. ಗುರುವಾರ(ಏ.28) ಕಣ್ಣಾಮುಚ್ಚಾಲೆ ಆಟ ಆಡುತ್ತಲೇ ಬಾಲಕಿಯರಿಬ್ಬರೂ ಪ್ರಾಣ ಬಿಟ್ಟಿದ್ದಾರೆ.

ಇದನ್ನೂ ಓದಿ: HD Kumaraswamy : 'ಹುಬ್ಬಳ್ಳಿಯ ಪೊಲೀಸರನ್ನು ನಾನು ಅಭಿನಂದಿಸುತ್ತೆನೆ'

ಐಸ್‍ಕ್ರೀಮ್‌ ಬಾಕ್ಸ್‌ನೊಳಗೆ ಬಚ್ಚಿಟ್ಟುಕೊಂಡಿದ್ದರು

ಶಾಲೆಗೆ ಹೋಗುತ್ತಿದ್ದ ಬಾಲಕಿಯರು ಬೇಸಿಗೆ ರಜೆ ಹಿನ್ನೆಲೆ ಆಟವಾಡುತ್ತಿದ್ದರು. ನಿನ್ನೆಯೂ ಕೂಡ ಕಣ್ಣಾಮುಚ್ಚಾಲೆ ಆಡಲು ಪ್ರಾರಂಭಿಸಿದ್ದಾರೆ. ಈ ವೇಳೆ ತಗಡೂರು ಗ್ರಾಮದ ಹನುಮಂತ ನಾಯಕ ಎಂಬುವರಿಗೆ ಸೇರಿದ ಐಸ್‍ಕ್ರೀಮ್ ಬಾಕ್ಸ್ ನೊಳಗೆ ಹೋಗಿ ಅಡಗಿ ಕುಳಿತುಕೊಂಡಿದ್ದಾರೆ. ಈ ವೇಳೆ ಆ ಬಾಕ್ಸ್ ಬಾಗಿಲನ್ನು ಒಳಗಿನಿಂದ ಲಾಕ್ ಮಾಡಿಕೊಂಡಿದ್ದಾರೆ. ಬಳಿಕ ಅವರಿಗೆ ಉಸಿರುಗಟ್ಟಿದ ಅನುಭವವಾಗಿದೆ. ಕೂಡಲೇ ಐಸ್‍ಕ್ರೀಮ್ ಬಾಕ್ಸ್ನ ಬಾಗಿಲು ತೆರೆಯಲು ಪ್ರಯತ್ನಿಸಿದ್ದಾರೆ. ಆದರೆ, ಪ್ರಯೋಜನವಾಗಿಲ್ಲ. ಬಾಗಿಲು ತೆರೆಯಲಾಗದೆ ಅವರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಆಟವಾಡಿಕೊಂಡು ಖುಷಿ ಖುಷಿಯಿಂದ ನಲಿದಾಡುತ್ತಿದ್ದ ಬಾಲಿಕಿಯರಿಬ್ಬರಿಗೂ ಐಸ್‍ಕ್ರೀಮ್ ಬಾಕ್ಸ್ ಯಮಸ್ವರೂಪಿಯಾಗಿದೆ.

ಉಸಿರಾಡಲು ಸಾಧ್ಯವಾಗದೇ ಒದ್ದಾಟ!

ಕಣ್ಣಾ ಮುಚ್ಚಾಲೆ ಆಟ ಆಡುತ್ತಾ ಐಸ್‍ಕ್ರೀಮ್‌ ಬಾಕ್ಸ್ನೊಳಗೆ ಕುಳಿತ ಬಾಲಕಿಯರು ಉಸಿರಾಡಲು ಕಷ್ಟಪಟ್ಟಿದ್ದಾರೆ. ಉಸಿರಾಡಲು ಸಾಧ್ಯವಾಗದೇ ಒದ್ದಾಡಿದ್ದಾರೆ. ಆದರೆ, ಅವರ ಒದ್ದಾಟ, ಕೂಗು ಹೊರಗೆ ಕೇಳಿಸದ ಕಾರಣ ಯಾರಿಗೂ ತಿಳಿದಿಲ್ಲ. ಒದ್ದಾಡಿ ಒದ್ದಾಡಿ ಇಬ್ಬರು ಬಾಲಕಿಯರು ಪ್ರಾಣ ಬಿಟ್ಟಿದ್ದಾರೆ.

ಇದನ್ನೂ ಓದಿ: ರಾಜ್ಯದ ಮಾರುಕಟ್ಟೆಯಲ್ಲಿ ಇಂದಿನ ತರಕಾರಿ ದರ ಹೀಗಿದೆ ನೋಡಿ

ಬಾಲಕಿಯರು ಇಬ್ಬರು ನಾಪತ್ತೆಯಾಗಿರುವುದನ್ನು ಗಮನಿಸಿದ ಮನೆಯವರು ಹುಡುಕಾಡಿದ್ದಾರೆ. ಸುಮಾರು ಹೊತ್ತಿನ ಬಳಿಕ ಇಬ್ಬರು ಬಾಲಕಿಯರು ಐಸ್‍ಕ್ರೀಮ್ ಬಾಕ್ಸ್ನಲ್ಲಿರುವುದು ಗೊತ್ತಾಗಿದೆ. ಪುಟ್ಟ ಮಕ್ಕಳು ಉಸಿರುಗಟ್ಟಿ ಸಾವನ್ನಪ್ಪಿದ್ದರಿಂದ ಇಡೀ ಮಸಗೆ ಗ್ರಾಮವೇ ಶೋಕ ಸಾಗರದಲ್ಲಿ ಮುಳುಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News