ನವದೆಹಲಿ: ಇಂದಿನ ನಾಲ್ಕನೆಯ ನೀತಿ ಆಯೋಗದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ ಕೃಷಿ ಬಿಕ್ಕಟ್ಟನ್ನು ನಿವಾರಿಸಲು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದ ಜೊತೆ ಕೈ ಜೋಡಿಸಬೇಕೆಂದು ತಿಳಿಸಿದರು.
ಇದೇ ಮೊದಲ ಬಾರಿಗೆ ಮುಖ್ಯಮಂತ್ರಿಯಾದ ನಂತರ ನೀತಿ ಆಯೋಗದ ಸಭೆಯಲ್ಲಿ ಭಾಗವಹಿಸಿದ ಅವರು " ದೇಶದ ಶೇ 70 ಜನರು ಗ್ರಾಮೀಣ ಭಾಗದಲ್ಲಿ ನೆಲೆಸಿ ಕೃಷಿಯ ಮೇಲೆ ಅವಲಂಭಿತರಾಗಿದ್ದಾರೆ.ಈಗ ಕೃಷಿಯಲ್ಲಿ ಬೆಳವಣಿಗೆಯಿಂದ ಬರುವ ಆದಾಯ ಸಾಲುತ್ತಿಲ್ಲ, ಆದ್ದರಿಂದ ನಮ್ಮ ಸರ್ಕಾರ ರೈತರ ಸಾಲವನ್ನು ಮನ್ನಾ ಮಾಡುವತ್ತ ಚಿಂತನೆ ನಡೆಸಿದೆ ಇದಕ್ಕೆ ಕೇಂದ್ರ ಸರಕಾರವು ಕೂಡ ಕೈ ಜೋಡಿಸಬೇಕೆಂದು ಅವರು ತಿಳಿಸಿದರು.
ಇದೇ ವೇಳೆ ನೀತಿ ಆಯೋಗವು ಸುಸ್ಥಿರ ಅಭಿವೃದ್ಧಿ ಯೋಜನೆ ಗುರಿಗಳನ್ನು ಅಳವಡಿಸಿಕೊಂಡಿದ್ದನ್ನು ಮುಖ್ಯಮಂತ್ರಿಗಳು ಸ್ವಾಗತಿಸಿದರು. ಅಲ್ಲದೆ ಭಾರತ ಸರ್ಕಾರ ಮತ್ತು ನೀತಿ ಆಯೋಗವು ಒಕ್ಕೂಟ ವ್ಯವಸ್ಥೆ, ಒಳಗೊಳ್ಳುವಿಕೆ ಅಭಿವೃದ್ಧಿ ಯೋಜನೆಗಳಿಗೆ ಮತ್ತೆ ಉತ್ತೇಜನ ಕೊಡಬೇಕಾಗಿದೆ ಎಂದು ಅವರು ತಿಳಿಸಿದರು.