ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾಗಿ ಒಂದು ವಾರ ಕಳೆದಿದೆ. ಇನ್ನೆರಡು ದಿನಗಳಲ್ಲಿ ಸಂಪುಟ ವಿಸ್ತರಣೆಯಾಗಲಿದ್ದು, ಸಚಿವರ ಪ್ರಮಾಣ ವಚನಕ್ಕೆ ಇಂದು ಸಮಯ ನಿಗದಿಯಾಗಲಿದೆ. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ್ದು, ಮಧ್ಯಾಹ್ನದ ನಂತರ ರಾಜಭವನಕ್ಕೆ ತೆರಳಿ ರಾಜ್ಯಪಾಲರನ್ನು ಕುಮಾರಸ್ವಾಮಿ ಅವರು ಭೇಟಿ ಮಾಡಲಿದ್ದಾರೆ.
ಭೇಟಿ ಸಮಯದಲ್ಲಿ ರಾಜ್ಯಪಾಲರಿಗೆ ಸಚಿವರ ಪಟ್ಟಿ ನೀಡುವ ಸಾಧ್ಯತೆ ಇದ್ದು, ಶನಿವಾರ ಅಥವಾ ಭಾನುವಾರ ಪ್ರಮಾಣ ವಚನ ಕಾರ್ಯಕ್ರಮ ನಿಗದಿಯಾಗುವ ಸಾಧ್ಯತೆ ಇದೆ. ಇನ್ನು ಖಾತೆ ಹಂಚಿಕೆ ಸಂಬಂಧ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಹಾಗೂ ಇತರೆ ನಾಯಕರುಗಳು ಜೆಡಿಎಸ್ ವರಿಷ್ಠ ದೇವೇಗೌಡರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ಇಂದು ಮಧ್ಯಾಹ್ನದ ಹೊತ್ತಿಗೆ ಅಂತಿಮ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ.
ಈ ಸಭೆಯ ನಂತರ ಸಿಎಂ ಕುಮಾರಸ್ವಾಮಿ ಹಾಗೂ ಡಿಸಿಎಂ ಪರಮೇಶ್ವರ್ ಜಂಟಿ ಸುದ್ದಿಗೋಷ್ಠಿ ನಡೆಸುವ ಸಾಧ್ಯತೆ ಇದ್ದು, ಕಾಂಗ್ರೆಸ್-ಜೆಡಿಎಸ್ ಗೆ ಯಾವ ಯಾವ ಖಾತೆ? ಹಾಗೂ ಯಾವ್ಯಾವ ಶಾಸಕರು ಪ್ರಮಾನವಚನ ಸ್ವೀಕರಿಸಲಿದ್ದಾರೆ ಎಂದು ಪ್ರಕಟಿಸುವ ಸಾಧ್ಯತೆ ಇದೆ.