ವಿಧಾನಸಭೆ ಕಲಾಪ ವ್ಯರ್ಥ, ಮುಂದೂಡಿಕೆ; ಮಾರ್ಚ್ 4ಕ್ಕೆ ಬಜೆಟ್ ಅಧಿವೇಶನ

ಸದನದಲ್ಲಿ ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ಆಗಬೇಕಾಗಿತ್ತು, ಪ್ರತಿಭಟನೆಯಿಂದಾಗಿ ಸದನವನ್ನು ಮೊಟಕುಗೊಳಿಸಬೇಕಾಯಿತು.

Written by - Prashobh Devanahalli | Edited by - Puttaraj K Alur | Last Updated : Feb 22, 2022, 07:05 PM IST
  • ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ ಖಂಡಿಸಿ ಕಾಂಗ್ರೆಸ್ ನಾಯಕರು ಸತತ 5 ದಿನ ಪ್ರತಿಭಟನೆ
  • ವಿಧಾನಸಭಾ ಕಲಾಪವನ್ನು ಮುಂದೂಡಲಾಗಿದ್ದು, ಮಾರ್ಚ್ 4ಕ್ಕೆ ಬಜೆಟ್ ಅಧಿವೇಶನ
  • ಕಾಂಗ್ರೆಸ್ ಧರಣಿಯ ಮಧ್ಯೆಯೂ ವೇತನ ಹೆಚ್ಚಿಸಿಕೊಂಡ ಸಿಎಂ, ಮಂತ್ರಿಗಳು ಮತ್ತು ಶಾಸಕರು
ವಿಧಾನಸಭೆ ಕಲಾಪ ವ್ಯರ್ಥ, ಮುಂದೂಡಿಕೆ; ಮಾರ್ಚ್ 4ಕ್ಕೆ ಬಜೆಟ್ ಅಧಿವೇಶನ title=
ಮಾರ್ಚ್ 4ಕ್ಕೆ ಬಜೆಟ್ ಅಧಿವೇಶನ ಪ್ರಾರಂಭವಾಗಲಿದೆ

ಬೆಂಗಳೂರು: ವಿಧಾನಸಭೆಯ ಕಲಾಪವನ್ನು ಮುಂದೂಡಲಾಗಿದ್ದು, ಮಾರ್ಚ್ 4ಕ್ಕೆ ಮತ್ತೆ ಅಧಿವೇಶನ(Karnataka Assembly Session) ಪ್ರಾರಂಭವಾಗಲಿದೆ. ಇದರ ಬಗ್ಗೆ ಪೂರ್ವ ತಯಾರಿಗಳನ್ನು ನಡೆಸಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ(Basavaraj Bommai) ತಿಳಿಸಿದ್ದಾರೆ.

ಮುಂದೊಂದು ದಿನ ಕೆಂಪುಕೋಟೆ ಮೇಲೆ ರಾಷ್ಟ್ರಧ್ವಜದ ಬದಲು ಕೇಸರಿ ಧ್ವಜ ಹಾರಿಸುತ್ತೇವೆಂಬ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ(KS Eshwarappa) ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸದನದಲ್ಲಿ ಸತತ 5 ದಿನಗಳ ಕಾಲ ಅಹೋರಾತ್ರಿ ಧರಣಿ ನಡೆಸಿತು. ಈಶ್ವರಪ್ಪ ವಿರುದ್ಧ ರಾಷ್ಟ್ರದ್ರೋಹ ಆರೋಪ ಪ್ರಕರಣ ದಾಖಲಿಸಬೇಕು ಹಾಗೂ ಮಂತ್ರಿಮಂಡಲದಿಂದ ವಿಸರ್ಜನೆ ಮಾಡಬೇಕು ಎಂದು ಆಗ್ರಹಿಸಿ ‘ಕೈ’ನಾಯಕರು ಧರಣಿ ನಡೆಸಿದರು.

ಧರಣಿ ಮಧ್ಯೆಯೂ ಬಿಲ್ ಪಾಸ್; ಮಂತ್ರಿ, ಶಾಸಕರ ಭತ್ಯೆ ಹೆಚ್ಚಳ

ಆರೋಗ್ಯಕರ ಚರ್ಚೆಗೆ ಅವಕಾಶ ನೀಡದ ಕಾಂಗ್ರೆಸ್ ಧರಣಿಯ ಮಧ್ಯೆಯೂ ಕರ್ನಾಟಕ ವಿಧಾನಮಂಡಲದವರ ಸಂಬಳಗಳು, ನಿವೃತ್ತಿ ವೇತನಗಳು ಮತ್ತು ಭತ್ಯೆಗಳ (ತಿದ್ದುಪಡಿ) ವಿಧೇಯಕ-2022 ಮಂಡನೆ ಮಾಡುವ ಮೂಲಕ ಸಿಎಂ ಸೇರಿದಂತೆ ಮಂತ್ರಿಗಳು, ಶಾಸಕರು ತಮ್ಮ ಭತ್ಯೆಯನ್ನು ಹೆಚ್ಚಳ ಮಾಡಿಕೊಂಡರು. ಇದರಿಂದ ಅಂದಾಜು ಶೇ.50ರಷ್ಟು ಭತ್ಯೆ ಹೆಚ್ಚಳವಾದಂತಾಗಿದೆ. ಇದಲ್ಲದೆ ಕ್ರಿಮಿನಲ್ ಕಾನೂನು ತಿದ್ದುಪಡಿ, ಕರ್ನಾಟಕ ಸ್ಟಾಂಪ್ ತಿದ್ದುಪಡಿ ವಿಧೇಯಕಗಳಿಗೆ ಅನುಮೋದನೆ ಪಡೆಯಲಾಯಿತು.

ಇದನ್ನೂ ಓದಿ: ಕೋವಿಡ್ ಆರ್ಥಿಕ ಬಿಕ್ಕಟ್ಟಿನ ಮಧ್ಯೆ ಕರ್ನಾಟಕದ ಸಚಿವರು, ಶಾಸಕರ ಸಂಬಳದಲ್ಲಿ ಭರ್ಜರಿ ಏರಿಕೆ..!

ಸಮಯ-ಹಣ ವ್ಯರ್ಥ; ರಾಜ್ಯದ ಸಮಸ್ಯೆಗಳ ಬಗ್ಗೆ ಚರ್ಚೆಯಿಲ್ಲ!

ಸದನದಲ್ಲಿ ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ಆಗಬೇಕಾಗಿತ್ತು. ಪ್ರತಿಭಟನೆಯಿಂದಾಗಿ ಸದನವನ್ನು ಮೊಟಕುಗೊಳಿಸಬೇಕಾಯಿತು. ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ, ನೆರೆ ಹಾಗೂ ಬೆಳೆ ಪರಿಹಾರದ ವಿತರಣೆ ಬಗ್ಗೆ ಚರ್ಚೆ ಆಗಬೇಕಿತ್ತು. ರಾಜ್ಯದ ಸಮಸ್ಯೆಗಳ ಬಗ್ಗೆ ಚರ್ಚೆಯೇ ಆಗದೆ ರಾಜಕೀಯ ನಾಯಕರು ಸಮಯ ಮತ್ತು ಹಣ ವ್ಯರ್ಥ ಮಾಡಿದ್ದಾರೆ.  

ಕಲಾಪದಲ್ಲಿ ‘ಕೈ’ ನಾಯಕರ ಅಹೋರಾತ್ರಿ ಧರಣಿ

ಈ ಭಾರಿಯ ಜಂಟಿ ಅಧಿವೇಶನ ಕೇವಲ ಕಾಂಗ್ರೆಸ್ ಶಾಸಕರ ಧರಣಿಯಿಂದ ಕೂಡಿತ್ತು. ಸಚಿವ ಈಶ್ವರಪ್ಪ(KS Eshwarappa)ನವರ ಹೇಳಿಕೆಯನ್ನು ಖಂಡಿಸಿ ಕಾಂಗ್ರೆಸ್ ಶಾಸಕರು ಹಾಗೂ ಪರಿಷತ್ ಸದಸ್ಯರು ಅಹೋರಾತ್ರಿ ಧರಣಿ ನಡೆಸಿದರು. ಈ ಮೂಲಕ ಸದನದ ಕಲಾಪ ನಡೆಯಲು ಬಿಡದೆ ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಈಶ್ವರಪ್ಪ ರಾಜೀನಾಮೆಗೆ ಒತ್ತಾಯಿಸಿದರು.

ಕಾಂಗ್ರೆಸ್ ನಡೆಸಿದ ಈ ಧರಣಿಗೆ ಆಡಳಿತ ಪಕ್ಷದ ನಾಯಕರು ಸೇರಿದಂತೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ(Vishweshwar Hegde Kageri) ಕೂಡ ಆಕ್ಷೇಪ ವ್ಯಕ್ತಪಡಿಸಿದರು. ಮಂಗಳವಾರ ಉಭಯ ಸದನಗಳ ಕಲಾಪ ಮುಂದೂಡಿಕೆ ನಂತರ ಮಾತನಾಡಿದ ಸಿಎಂ ಬೊಮ್ಮಾಯಿ, ‘ಶುಕ್ರವಾರದವರೆಗೂ ಸದನ ನಡೆಯಬೇಕಿತ್ತು, ಆದರೆ ಇವತ್ತೇ ಮೊಟಕುಗೊಳಿಸಬೇಕಾಯಿತು. ಬೇರೆ ಸಮಯದಲ್ಲಿ ಸದನ ಕರೆಯಿರಿ ಅಂತಾರೆ, ಕರೆದರೆ ಚರ್ಚೆಯನ್ನೇ ಮಾಡುವುದಿಲ್ಲ’ವೆಂದು ವಿಪಕ್ಷ ನಾಯಕರ ವಿರುದ್ಧ ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ: KS Eshwarappa: ಕಾಡು ಪ್ರಾಣಿಗಳು ಸಿಂಹ ಕಂಡು ಹೆದರಿವೆ: ಕಾಂಗ್ರೆಸ್ ನಾಯಕರಿಗೆ ಈಶ್ವರಪ್ಪ ಟಾಂಗ್

ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್(DK Shivakumar) ಹಿರಿಯರು. ಅವರ ಅನುಭವ ಎಲ್ಲಿ ಹೊಯಿತು? ರಾಜಕಾರಣದ ಮುಸುಕು ಅವರ ಮುಖದ ಮೇಲೆ ಬಿದ್ದಿದೆ. ಖಂಡಿತವಾಗಿ ಮುಂದೆ ಅವರಿಗೆ ರಾಜಕೀಯ ಭವಿಷ್ಯವಿಲ್ಲ. ಆಡಳಿತ ಪಕ್ಷವಾಗಿ ಅವರು ವಿಫಲವಾಗಿದ್ರು, ರಾಜ್ಯದ ಜನರು ಅವರನ್ನು ತಿರಸ್ಕರಿಸಿದ್ದರು. ಈಗ ವಿಪಕ್ಷವಾಗಿಯೂ ಅವರು ವಿಫಲವಾಗಿದ್ದಾರೆ ಅಂತಾ ಬೊಮ್ಮಾಯಿ ಕಿಡಿಕಾರಿದರು.

ಈಶ್ವರಪ್ಪನವರ ಹೇಳಿಕೆಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ(JP Nadda) ಖಂಡಿಸಿದ್ದಾರೆ. ಹೀಗಾಗಿ ಕಾಂಗ್ರೆಸ್ ಪ್ರತಿಭಟನೆ ಸರಿ ಇದೆ ಎಂದು ‘ಕೈ’ ನಾಯಕರು ಹೇಳುತ್ತಿದ್ದಾರೆ. ಹೀಗಾಗಿ ಯಾವುದೇ ಕಾರಣಕ್ಕೂ ಈಶ್ವರಪ್ಪ ಹೇಳಿಕೆಯನ್ನು ಸೈಡ್ ಲೈನ್ ಮಾಡಬಾರದು, ಜಿಲ್ಲಾ ಮಟ್ಟದಿಂದ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ಕಾಂಗ್ರೆಸ್ ತೀರ್ಮಾನಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News