Lata Mangeshkar: ಗಾಯನ ನಿಲ್ಲಿಸಿದ ಭಾರತ ರತ್ನ ಲತಾ ಮಂಗೇಶ್ಕರ್

ಭಾರತ ಕಂಡ ಜನಪ್ರಿಯ ಹಿನ್ನೆಲೆ ಗಾಯಕಿ ಲತಾ ಮಂಗೇಶ್ಕರ್ ಇಹಲೋಕ ತ್ಯಜಿಸಿದ್ದಾರೆ.

Written by - Zee Kannada News Desk | Last Updated : Feb 6, 2022, 10:12 AM IST
  • ಭಾರತ ಕಂಡ ಜನಪ್ರಿಯ ಹಿನ್ನೆಲೆ ಗಾಯಕಿ ಲತಾ ಮಂಗೇಶ್ಕರ್ ಇಹಲೋಕ ತ್ಯಜಿಸಿದ್ದಾರೆ
  • ಇತ್ತೀಚೆಗೆ ಕೊರೊನಾ ಸೋಂಕಿಗೆ ತುತ್ತಾಗಿದ್ದ ಅವರಿಗೆ ನ್ಯುಮೋನಿಯಾ ಕೂಡ ಕಾಣಿಸಿಕೊಂಡಿತ್ತು
  • ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಲತಾ ಮಂಗೇಶ್ಕರ್ ಗೆ ಚಿಕಿತ್ಸೆ ನೀಡಲಾಗುತ್ತಿತ್ತು
Lata Mangeshkar: ಗಾಯನ ನಿಲ್ಲಿಸಿದ ಭಾರತ ರತ್ನ ಲತಾ ಮಂಗೇಶ್ಕರ್ title=
ಭಾರತ ರತ್ನ ಲತಾ ಮಂಗೇಶ್ಕರ್ ಇನ್ನಿಲ್ಲ

ನವದೆಹಲಿ: ಭಾರತ ರತ್ನ, ಗಾನಕೋಗಿಲೆ ಲತಾ ಮಂಗೇಶ್ಕರ್(Lata Mangeshkar) ವಿಧಿವಶರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು. ಇತ್ತೀಚೆಗಷ್ಟೇ ಕೊರೊನಾ ಸೋಂಕಿಗೆ ತುತ್ತಾಗಿದ್ದ ಅವರಿಗೆ ನ್ಯುಮೋನಿಯಾ ಕೂಡ ಕಾಣಿಸಿಕೊಂಡಿತ್ತು. ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು.

ಕೊರೊನಾ ಹಾಗೂ ನ್ಯುಮೋನಿಯಾದಿಂದ ಚೇತರಿಸಿಕೊಂಡಿದ್ದ ಅವರು ವೆಂಟಿಲೇಟರ್​ನಿಂದ ಹೊರಬಂದಿದ್ದರು. ಆದರೆ ಶನಿವಾರ(ಫೆ.5)ದಂದು ಮತ್ತೆ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಆದರೆ ಬಹು ಅಂಗಾಂಗ ವೈಫಲ್ಯದಿಂದ ಇಹಲೋಕ ತ್ಯಜಿಸಿದ್ದಾರೆ. ಶಿವಸೇನೆ ಸಂಸದ ಸಂಜಯ್ ರಾವುತ್ ಈ ವಿಷಯವನ್ನು ಟ್ವೀಟ್ ಮೂಲಕ ಖಚಿತಪಡಿಸಿದ್ದಾರೆ. ಅವರ ನಿಧನದಿಂದ ದೇಶದ ಗಾಯನ ಪರಂಪರೆಯ ಹಿರಿಯ ಕೊಂಡಿಯೊಂದು ಕಳಚಿದಂತಾಗಿದೆ.

ಲತಾರ ಮೂಲ ಹೆಸರು ಹೇಮಾ ಮಂಗೇಶ್ಕರ್

ಲತಾ ಮಂಗೇಶ್ಕರ್ ಅವರು 1929ರ ಸೆಪ್ಟೆಂಬರ್ 28ರಂದು ಮಧ್ಯಪ್ರದೇಶದ ಇಂಧೋರ್ ನಲ್ಲಿ ಜನಿಸಿದ್ದರು. ಅವರ ಮೂಲ ಹೆಸರು ಹೇಮಾ ಮಂಗೇಶ್ಕರ್ ಎಂದಾಗಿತ್ತು. 36ಕ್ಕೂ ಅಧಿಕ ಭಾಷೆಗಳಲ್ಲಿ ಹಾಡಿದ ಕೀರ್ತಿ ಮತ್ತು ದಾಖಲೆ ಅವರದ್ದಾಗಿದೆ. ಸಾವಿರಕ್ಕೂ ಅಧಿಕ ಹಿಂದಿ ಚಿತ್ರಗಳಿಗೆ ಅವರು ಹಿನ್ನೆಲೆ ಗಾಯನ ಮಾಡಿದ್ದರು. ಸಂಗೀತ ನಿರ್ದೇಶಕರಾಗಿಯೂ ಅವರು ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ್ದರು.

ಲತಾ ಮಂಗೇಶ್ಕರ್ ಅವರ ಸಾಧನೆಯನ್ನು ಪರಿಗಣಿಸಿ 2001ರಲ್ಲಿ ಭಾರತ ಸರ್ಕಾರ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಭಾರತ ರತ್ನ’ವನ್ನು ಪ್ರದಾನ ಮಾಡಿತ್ತು. ಚಿತ್ರರಂಗದಲ್ಲಿನ ಸೇವೆಗೆ  1989ರಲ್ಲಿ ‘ದಾದಾ ಸಾಹೇಬ್ ಫಾಲ್ಕೆ’ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ಇದಷ್ಟೇ ಅಲ್ಲದೆ ಪದ್ಮಭೂಷಣ, ಪದ್ಮವಿಭೂಷಣ ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದರು.  

ಲತಾ ಮಂಗೇಶ್ಕರ್ ನಿಧನಕ್ಕೆ ಗಣ್ಯರ ಸಂತಾಪ

ಗಾನ ಕೋಗಿಲೆ ಲತಾ ಮಂಗೇಶ್ಕರ್ ನಿಧನಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರ ಮತ್ತು ರಾಜ್ಯದ ರಾಜಕಾರಣಿಗಳು, ವಿವಿಧ ಕ್ಷೇತ್ರಗಳ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News