ನವದೆಹಲಿ: ನಾಗಾಲ್ಯಾಂಡ್ನಲ್ಲಿ ಸೇನೆಯಿಂದ ನಾಗರಿಕರ ಹತ್ಯೆ ಪ್ರಕರಣಕ್ಕೆ (Civilian killing in Nagaland) ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿವರಣೆ ನೀಡಿದ್ದಾರೆ. ಭದ್ರತಾ ಪಡೆಗಳು 13 ನಾಗರಿಕರನ್ನು ಭಯೋತ್ಪಾದಕರು ಎಂದು ಭಾವಿಸಿ ಹತ್ಯೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಸಂಸತ್ನಲ್ಲಿ ಮಾಹಿತಿ ನೀಡಿದ್ದಾರೆ.
ತನಿಖೆಗೆ ವಿಶೇಷ ತನಿಖಾ ತಂಡವನ್ನು (SIT) ರಚನೆ ಮಾಡಲಾಗಿದೆ. ಒಂದು ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಲು ನಿರ್ದೇಶಿಸಲಾಗಿದೆ. ನಾಗರಿಕರ ಸಾವಿಗೆ ಸೇನೆ ವಿಷಾದ ವ್ಯಕ್ತಪಡಿಸಿದೆ. ಗೃಹ ಇಲಾಖೆ ನಾಗಾಲ್ಯಾಂಡ್ ಸರ್ಕಾರದ ಜತೆ ಸಂಪರ್ಕದಲ್ಲಿದೆ. ನಾಗಾಲ್ಯಾಂಡ್ ಗವರ್ನರ್, ಸಿಎಂ ಜತೆ ಸಂಪರ್ಕದಲ್ಲಿದ್ದೇನೆ. ನಿನ್ನೆ ಇಡೀ ದಿನ ನಾನು ಪರಿಸ್ಥಿತಿಯನ್ನು ಅವಲೋಕಿಸಿದ್ದೇನೆ. ತಪ್ಪು ಮಾಹಿತಿಯಿಂದ ಇಂತಹ ದುರ್ಘಟನೆ ಸಂಭವಿಸಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಭಾರತ-ರಷ್ಯಾ AK-203 ರೈಫಲ್ ಒಪ್ಪಂದಕ್ಕೆ ಸಹಿ, 2031 ರವರೆಗೆ ಮಿಲಿಟರಿ ಸಹಕಾರ ವಿಸ್ತರಣೆ
ಇಂತಹ ಯಾವುದೇ ಪ್ರಕರಣ ಮುಂದೆ ಮರುಕಳಿಸದಂತೆ ನೋಡಿಕೊಳ್ಳಲು ಎಲ್ಲ ಏಜೆನ್ಸಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಲೋಕಸಭೆಯಲ್ಲಿ, ಅಮಿತ್ ಶಾ ಅವರು ತಮ್ಮ ಹೇಳಿಕೆಯನ್ನು ನೀಡಿದ ನಂತರ, ವಿರೋಧ ಪಕ್ಷದ ಸಂಸದರು ಅವರ ಭಾಷಣದ ವಿರುದ್ಧ ಪ್ರತಿಭಟಿಸಿದರು ಮತ್ತು ಚರ್ಚೆಯ ಬೇಡಿಕೆಗಳನ್ನು ಪುನರುಚ್ಚರಿಸಿದರು. ಇದನ್ನು ವಿರೋಧಿಸಿ ಕಾಂಗ್ರೆಸ್, ಡಿಎಂಕೆ, ಸಮಾಜವಾದಿ ಪಕ್ಷ, ಬಿಎಸ್ಪಿ ಮತ್ತು ಎನ್ಸಿಪಿ ಸಂಸದರು ಸಭಾತ್ಯಾಗ ಮಾಡಿದರು.
ಇದನ್ನೂ ಓದಿ: ಇಸ್ಲಾಂ ತೊರೆದು ಸನಾತನ ಧರ್ಮ ಸೇರಿದ ಶಿಯಾ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ವಾಸಿಂ ರಿಜ್ವಿ
ಒಂದು ಗಂಟೆಯ ನಂತರ ಅವರು ರಾಜ್ಯಸಭೆಯಲ್ಲಿಯೂ ನಾಗಾಲ್ಯಾಂಡ್ನಲ್ಲಿ ಸೇನೆಯಿಂದ ನಾಗರಿಕರ ಹತ್ಯೆ ಪ್ರಕರಣಕ್ಕೆ (Civilian killing in Nagaland) ಸಂಬಂಧಿಸಿದಂತೆ ಮಾತನಾಡಿದರು. ಆಗ ವಿರೋಧ ಪಕ್ಷದ ಸಂಸದರು "ನಹೀ ಚಲೇಗಿ, ನಹೀ ಚಲೇಗಿ" (ಇದು ಆಗುವುದಿಲ್ಲ, ಇದು ಆಗುವುದಿಲ್ಲ) ಎಂದು ಕಿರುಚಿದರು.
ಹತ್ಯೆಯಲ್ಲಿ ಭಾಗಿಯಾಗಿರುವ ಎಎಫ್ಎಸ್ಪಿಎ ಅಡಿಯಲ್ಲಿ ರಕ್ಷಣೆ ಪಡೆದಿರುವ ಸಶಸ್ತ್ರ ಪಡೆಗಳ ಸದಸ್ಯರನ್ನು ವಿಚಾರಣೆಗೆ ಒಳಪಡಿಸಲು ಕೇಂದ್ರವು ಅನುಮತಿ ನೀಡಲು ಯೋಜಿಸಿದೆಯೇ ಎಂದು ಅಮಿತ್ ಶಾ ಸ್ಪಷ್ಟಪಡಿಸಲಿಲ್ಲ.