ಬೆಂಗಳೂರು: ಕರ್ನಾಟಕ ರಾಜ್ಯ ವಿಧಾನಸಭೆ ಹಿನ್ನೆಲೆಯಲ್ಲಿ ಮೇ 1ರಿಂದ ರಾಜ್ಯದಲ್ಲಿ ಮೋದಿ 'ಹವಾ' ಮತ್ತೆ ತನ್ನ ಪ್ರಭಾವ ಬೀರಲು ಸಜ್ಜಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಜೊತೆಗೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಹ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಹೌದು, ಮೇ 3ರಂದು ಮೋದಿ ಹಾಗೂ ಯೋಗಿ ಪ್ರಚಾರದ ಅಬ್ಬರಕ್ಕೆ ರಾಜ್ಯ ವಿಧಾನಸಭಾ ಚುನಾವಣೆ ಕಣ ಸಾಕ್ಷಿಯಾಗಲಿದೆ.
ಮೇ 3 ರಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರಪ್ರದೇಶ ಸಿಎಂ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮತಭೇಟೆ ನಡೆಸಲಿದ್ದಾರೆ. ಈ ದಿನ ಮೂರು ಸಾರ್ವಜನಿಕ ಸಭೆಗಳಲ್ಲಿ ಮೋದಿ ಪಾಲ್ಗೊಳ್ಳಲಿದ್ದು, ಅದೇ ದಿನ ಐದು ಸಾರ್ವಜನಿಕ ಸಭೆಗಳಲ್ಲಿ ಯೋಗಿ ಭಾಗಿಯಾಗಲಿದ್ದಾರೆ.
ಮೇ. 3ರಂದು ಬಳ್ಳಾರಿ, ಕಲಬುರಗಿ ಮತ್ತು ಬೆಂಗಳೂರಿನಲ್ಲಿ ಮೂರೂ ಭಾಗಗಳಿಗೆ ಹೆಲಿಕಾಫ್ಟರ್ ಮೂಲಕ ಸಮಾವೇಶದಲ್ಲಿ ಪಾಲ್ಗೊಳ್ಳಲಿರುವ ನರೇಂದ್ರ ಮೋದಿ ಬೃಹತ್ ಸಮಾವೇಶದಲ್ಲಿ ಭಾಷಣ ಮಾಡಲಿದ್ದಾರೆ.
ಇನ್ನು ಅಂದೇ ರಾಜ್ಯಕ್ಕೆ ಭೇಟಿ ನೀಡಲಿರುವ ಬಿಜೆಪಿ ಫೈರ್ ಬ್ರಾಂಡ್ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಶಿರಸಿ, ಸಾಗರ, ತಿಪಟೂರು, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಸಾರ್ವಜನಿಕ ಸಭೆ ನಡೆಸಲಿದ್ದು ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚನೆ ನಡೆಸಲಿದ್ದಾರೆ.
ಒಂದು ಕಡೆ ಅಭಿವೃದ್ಧಿ, ಇನ್ನೊಂದು ಕಡೆ ಹಿಂದುತ್ವವನ್ನು ಮುಂದಿಟ್ಟು ಮತಭೇಟೆ ನಡೆಸಲಿರುವ ನಾಯಕರಿಗೆ ಜನತಾ ಜನಾರ್ಧನ ಕೈ ಹಿಡಿಯಲಿದ್ದಾರೆಯೇ ಎಂಬುದನ್ನು ಮೇ 15ರವರೆಗೂ ಕಾದುನೋಡಬೇಕಿದೆ.