ಬೆಂಗಳೂರು: ವರ್ಗಾವಣೆ ಆದೇಶ ವಿಚಾರವಾಗಿ ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಇಂದು ಹೈಕೋರ್ಟ್ ಮೊರೆಹೋಗಿದ್ದಾರೆ. ಅವಧಿಗೂ ಮುನ್ನವೇ ವರ್ಗಾವಣೆ ಮಾಡಲಾಗಿದೆ ಎಂದು ಆರೋಪಿಸಿ ರೋಹಿಣಿ ಸಲ್ಲಿಸಿದ್ದ ಅರ್ಜಿಯನ್ನು ಕೇಂದ್ರ ಆಡಳಿತ ನ್ಯಾಯಮಂಡಳಿ(CAT) ವಜಾಗೊಳಿಸಿತ್ತು. ಇದೀಗ CAT ಆದೇಶ ಪ್ರಶ್ನಿಸಿ ರೋಹಿಣಿ ಮತ್ತೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಕಳೆದ ಮೂರು ತಿಂಗಳಿಂದ ರೋಹಿಣಿ ವರ್ಗಾವಣೆ ವಿವಾದ ನಡೆಯುತ್ತಿದ್ದು, ಅವಧಿಗೂ ಮುನ್ನ ವರ್ಗಾವಣೆ ಪ್ರಶ್ನಿಸಿ ಈ ಹಿಂದೆಯೂ CAT ಹಾಗೂ ಹೈಕೋರ್ಟ್ ಮೆಟ್ಟಿಲೇರಿದ್ದ ರೋಹಿಣಿ, ಅರ್ಜಿ ಇತ್ಯರ್ಥವಾಗುವ ತನಕ ವರ್ಗಾವಣೆ ಆದೇಶಕ್ಕೆ ತಡೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಏತನ್ಮಧ್ಯೆ, ಹಾಸನ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿರುವ ಡಾ.ರಂದೀಪ್ ಅವರು ಸಹ ಹೈಕೋರ್ಟ್ಗೆ ಕೇವಿಯಟ್ ಸಲ್ಲಿಸಿದ್ದು, 'ನನ್ನ ವಾದ ಆಲಿಸದೇ ರೋಹಿಣಿ ಸಿಂಧೂರಿ ಅವರ ಅರ್ಜಿ ಕುರಿತು ಯಾವುದೇ ಆದೇಶ ಹೊರಡಿಸಬಾರದು' ಎಂದು ಮನವಿ ಮಾಡಿದ್ದಾರೆ.