ನವದೆಹಲಿ: 1998,99 ಮತ್ತು 2004 ರಲ್ಲಿ ಕೆಪಿಎಸ್ಸಿಯಲ್ಲಿ ನೇಮಕಾತಿ ಅಕ್ರಮ ಎಂದು ಸುಪ್ರಿಂಕೊರ್ಟ್ ತಿಳಿಸಿದೆ. ಇಂದು ವಿಚಾರಣೆ ನಡೆಸಿದ ಸುಪ್ರಿಂಕೊರ್ಟ್ ನ ನ್ಯಾ.ಎ.ಕೆ. ಗೊಯಲ್ ಮತ್ತು ನ್ಯಾ.ರೊಹ್ಟಿನ್ ನಾರಿಮನ್ ಪೀಠ ನೇಮಕಾತಿಯಲ್ಲಿ ಅಕ್ರಮ ನಡೆದಿರುವುದು ಒಪ್ಪಿಕೊಂಡಿದ್ದು ಈ ಹಿಂದೆ ಹೈಕೊರ್ಟ್ ನೀಡಿದ್ದ ಆದೇಶವನ್ನು ಎತ್ತಿ ಹಿಡಿದಿದೆ.
ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಹುದ್ದೆ ಕಳೆದುಕೊಳ್ಳುವ ಆತಂಕದಲ್ಲಿದ್ದ ಕೆಲವು ಅಭ್ಯರ್ಥಿಗಳು ಸುಪ್ರಿಂಕೊರ್ಟ್ ಮೆಟ್ಟಿಲೇರಿದ್ದರು ಅಲ್ಲದೆ ಇದರ ಜೊತೆಗೆ ನೇಮಕಾತಿಯಲ್ಲಿ ನಡೆದ ಅಕ್ರಮ ಪ್ರಶ್ನಿಸಿ ಕೆಲವು ಅಭ್ಯರ್ಥಿಗಳು ಸುಪ್ರಿಂಕೊರ್ಟ್ ಮೆಟ್ಟಿಲೇರಿದ್ದರು.
ಈಗ ಕೆಪಿಎಸ್ಸಿಯ ಅರ್ಜಿಯನ್ನು ಸುದೀರ್ಘವಾಗಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಹೈಕೋರ್ಟ್ ನೀಡಿರುವ ಆದೇಶವನ್ನು ಒಪ್ಪಿಕೊಂಡಿದೆ. ಸಿಐಡಿ ಮತ್ತು ಸತ್ಯಶೋಧನ ಸಮಿತಿಯಲ್ಲಿ ಅಕ್ರಮ ಸಾಬೀತಾಗಿದ್ದರಿಂದ ಹೈಕೋರ್ಟ್ ಆದೇಶದಂತೆ ಅಕ್ರಮ ನೇಮಕವಾದ ಅಭ್ಯರ್ಥಿಗಳು ಹುದ್ದೆ ತೊರೆಯಬೇಕು ಎಂದು ತೀರ್ಪು ನೀಡಿದೆ.
ಇದರಿಂದ ಒಟ್ಟು 484 ಅಭ್ಯರ್ಥಿಗಳಿಗೆ ಹುದ್ದೆ ಕೈ ತಪ್ಪಲಿದೆ. 1998 ರಲ್ಲಿ 386 ನೇಮಕಾತಿ ಪೈಕಿ 292 ಅಭ್ಯರ್ಥಿಗಳ ಅಂಕವನ್ನು ತಿದ್ದುಪಡಿ ಮಾಡಲಾಗಿತ್ತು, 1999 ರಲ್ಲಿ 191 ಪೈಕಿ 95 ಅಭ್ಯರ್ಥಿಗಳ ಸಂದರ್ಶನದಲ್ಲಿ ಅಕ್ರಮ ಹಾಗೂ 2004 ರಲ್ಲಿ 152 ಪೈಕಿ 97 ಅಭ್ಯರ್ಥಿಗಳ ಉತ್ತರ ಪತ್ರಿಕೆ ಹಾಗೂ ಕಂಪ್ಯೂಟರ್ ನಲ್ಲಿ ಅಂಕಗಳನ್ನು ತಿದ್ದುಪಡಿ ಮಾಡಲಾಗಿತ್ತು ಎಂದು ಸತ್ಯ ಶೋಧನ ಸಮಿತಿ ಮತ್ತು ಸಿಐಡಿ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಆದ್ದರಿಂದ ಈ ಎಲ್ಲ ಆಧಾರಗಳ ಮೇಲೆ ಸುಪ್ರಿಂ ಕೋರ್ಟ್ ಹೈಕೋರ್ಟ್ ತೀರ್ಪನ್ನು ಎತ್ತಿಹಿಡಿದಿದೆ.