ಬೆಂಗಳೂರು: ತೀವ್ರ ಕುತೂಹಲಕ್ಕೆ ಕಾರಣವಾಗಿರುವ ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಇಂದು(ಮಾರ್ಚ್ 23) ನಡೆದ ಚುನಾವಣೆ ಮತದಾನ ಮುಕ್ತಾಯಗೊಂಡಿದೆ. ಜೆಡಿಎಸ್ ಶಾಸಕರಾದ ಎಚ್.ಡಿ.ರೇವಣ್ಣ ಹಾಗೂ ಸಾ.ರಾ. ಮಹೇಶ್ ಹೊರತುಪಡಿಸಿ ಉಳಿದ 28 ಶಾಸಕರು ಮತದಾನ ಬಹಿಷ್ಕರಿಸಿದ್ದಾರೆ.
ಕರ್ನಾಟಕದ ವಿಧಾನಸಭೆ ಒಟ್ಟು ಸದಸ್ಯರ ಸಂಖ್ಯೆ 224. ಇದರಲ್ಲಿ 7 ಸ್ಥಾನಗಳು ಖಾಲಿ ಇವೆ. ಉಳಿದ 217 ಮತದಾರರು ರಾಜ್ಯಸಭಾ ಚುನಾವಣೆಯ ಮತದಾನದ ವೇಳೆ ಹಾಜರಿದ್ದರು. ಕಾಂಗ್ರೆಸಿನ ಓರ್ವ ಶಾಸಕ ಅನಾರೋಗ್ಯದ ಕಾರಣ ಮತ ಹಾಕಲಿಲ್ಲ. ಜೆಡಿಎಸ್'ನ 28 ಶಾಸಕರು ಮತದಾನ ಬಹಿಷ್ಕರಿಸಿದ ಕಾರಣ ಒಟ್ಟು 188 ಮತಗಳು ಮಾತ್ರ ಚಲಾವಣೆಯಾದಂತಾಗಿದೆ.
ಕರ್ನಾಟಕದಲ್ಲಿ ನಾಲ್ಕು ಸ್ಥಾನಗಳಿಗೆ 5 ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಬಿಜೆಪಿಯಿಂದ ರಾಜೀವ್ ಚಂದ್ರಶೇಖರ್, ಕಾಂಗ್ರೆಸಿನಿಂದ ಎಲ್. ಹನುಮಂತಯ್ಯ, ನಾಸೀರ್ ಹುಸೇನ್ ಮತ್ತು ಜಿ. ಸಿ. ಚಂದ್ರಶೇಖರ್ ಸ್ಪರ್ಧಿಸಿದ್ದರೆ, ಜೆಡಿಎಸ್ ನಿಂದ ಬಿ. ಎಂ. ಫಾರೂಕ್ ಸ್ಪರ್ಧಿಸಿದ್ದಾರೆ.