ನಾಶಿಕ್: ಸರ್ಕಾರಗಳ ರೈತ ವಿರೋಧಿ ನೀತಿಗಳ ಖಂಡಿಸಿ ಸುಮಾರು 25 ಸಾವಿರ ಮಹಾರಾಷ್ಟ್ರದ ರೈತರು ನಾಶಿಕ್ ನಿಂದ ಮುಂಬೈಗೆ ಜಾಥಾ ಹಮ್ಮಿಕೊಂಡಿದ್ದಾರೆ.
ಈ ಜಾಥಾದಲ್ಲಿ ಪ್ರಮುಖವಾಗಿ ರೈತರ ಸಾಲ ಮನ್ನಾ, ವಿದ್ಯುತ್ ಬಿಲ್ ಮನ್ನಾ, ಮತ್ತು ರೈತರ ಬೆಳೆಗಳಿಗೆ ಕನಿಷ್ಠ ಕನಿಷ್ಟ ಬೆಂಬಲ ಬೆಲೆಗಳನ್ನು ಒದಗಿಸುವುದಲ್ಲದೆ ಮತ್ತು ಸಣ್ಣ ರೈತರ ಹಿತಾಸಕ್ತಿಗಳನ್ನು ಕಾಪಾಡುವ ನಿಟ್ಟಿನಲ್ಲಿ ಸ್ವಾಮಿನಾಥನ್ ಆಯೋಗದ ಶಿಫಾರಸುಗಳನ್ನು ಅನುಷ್ಠಾನಗೊಳಿಸಬೇಕೆಂದು ರೈತರು ಆಗ್ರಹಿಸಿದ್ದಾರೆ.
ಇದೇ ಸಂದರ್ಭದಲ್ಲಿ ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್) ಕಾರ್ಯದರ್ಶಿ ರಾಜು ದೆಸ್ಲೆ ಮಾತನಾಡಿ ಸರ್ಕಾರವು ಹೆದ್ದಾರಿ ಮತ್ತು ಬುಲೆಟ್ ರೈಲುಗಳ ಟ್ರ್ಯಾಕ್ಗಳಂತಹ ಅಭಿವೃದ್ಧಿ ಯೋಜನೆಗಳ ಹೆಸರಿನಲ್ಲಿ ರೈತರಿಂದ ಕೃಷಿ ಭೂಮಿಯನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳುವುದನ್ನು ನಿಲ್ಲಿಸಬೇಕೆಂದು ಆಗ್ರಹಿಸಿದರು.
ನಾಸಿಕ್ ನಲ್ಲಿ ಬುಧವಾರ ಸಂಜೆ ಸುಮಾರು 25,000 ರೈತರು 180 ಕಿಮೀ ಪ್ರಯಾಣದ ಜಾಥಾವನ್ನು ಪ್ರಾರಂಭಿಸಿದರು. ಈ ಜಾಥಾ ಮಾರ್ಚ್ 12 ರಂದು ಮುಂಬೈ ತಲುಪಿ ಅಂದು ಮಹಾರಾಷ್ಟ್ರ ವಿಧಾನಸಭೆಗೆ ಸಾಮೂಹಿಕ ಮುತ್ತಿಗೆ ಹಾಕಲಿದ್ದಾರೆ.