ಕೊಯಮತ್ತೂರು: ಇಲ್ಲಿನ ಗಾಂಧಿಪುರಂ ಸಮೀಪದ ವಿ.ಕೆ.ಕೆ ಮೆನನ್ ರಸ್ತೆಯಲ್ಲಿರುವ ಬಿಜೆಪಿಯ ಕಚೇರಿ ಮೇಲೆ ಎರಡು ಪೆಟ್ರೋಲ್ ಬಾಂಬುಗಳನ್ನು ಮಂಗಳವಾರ ರಾತ್ರಿ ಎಸೆಯಲಾಗಿದ್ದು, ದಾಳಿ ನಡೆಸಿದವರು ಯಾರು ಎಂಬುದು ಇನ್ನೂ ಪತ್ತೆಯಾಗಿಲ್ಲ. ಈ ದಾಳಿಯಲ್ಲಿ ಯಾವುದೇ ಹಾನಿ ಸಂಭವಿಸಲಿಲ್ಲ.
ಎರಡು ಅಂತಸ್ತಿನ ಕಚೇರಿ ಕಟ್ಟಡದ ಗೋಡೆಗೆ ಬಾಂಬ್ಗಳನ್ನು ಎಸೆಯಲಾಗಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ದುಷ್ಕರ್ಮಿಗಳು ಯಾರೆಂದು ಪತ್ತೆ ಹಚ್ಚಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ದಾಳಿ ನಡೆದ ಸ್ವಲ್ಪ ಸಮಯದ್ದೇ ಪೊಲೀಸ್ ಅಧಿಕಾರಿಗಳು ಪಕ್ಷದ ಕಚೇರಿಗೆ ಧಾವಿಸಿ, ಕಚೇರಿ ಆವರಣದಲ್ಲಿ ಯಾವುದೇ ದುರ್ಘಟನೆ ಸಂಭವಿಸುವುದನ್ನು ತಡೆಯಲು ಬಿಗಿ ಪೋಲಿಸ್ ಬಂದೋಬಸ್ತ್ ನೀಡಿದರು.
#WATCH Coimbatore: A petrol bomb was hurled at BJP office earlier today #TamilNadu pic.twitter.com/hl3WRO0aB7
— ANI (@ANI) March 7, 2018
ತಮಿಳುನಾಡಿನ ವೆಲ್ಲೂರಿನಲ್ಲಿ ಪೆರಿಯಾರ್ ಮೂರ್ತಿಯನ್ನು ಧ್ವಂಸ ಮಾಡುತ್ತೇವೆ ಎಂದು ಬಿಜೆಪಿ ಮುಖಂಡ ಹೇಳಿದ್ದ ಬೆನ್ನಲ್ಲೇ ಬಿಜೆಪಿ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ದಾಳಿ ಮಾಡಲಾಗಿದೆ. ಪೆರಿಯಾರ್ ಮೂರ್ತಿಗೆ ಹಾನಿಯುಂಟು ಮಾಡಿರುವುದಕ್ಕೆ ಪ್ರತಿಕಾರವಾಗಿ ಈ ಕೃತ್ಯವನ್ನು ಎಸಗಲಾಗಿದೆ ಎನ್ನಲಾಗಿದೆ.
ಅಲ್ಲದೆ, ಪೆರಿಯಾರ್ ಪ್ರತಿಮೆ ದ್ವಂಸಗೊಳಿಸಿದ್ದಕ್ಕಾಗಿ ಬಿಜೆಪಿ ಕಾರ್ಯಕರ್ತ ಮತ್ತು ಸಿಪಿಐ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.