ಬೆಂಗಳೂರು: ಬಲವಂತವಾಗಿ ಸ್ಕೂಲ್ ಫೀ ಕಟ್ಟಿಸಿಕೊಳ್ಳದಿರುವಂತೆ ನಿರ್ಧಾರ ಮಾಡಿರುವ ಕರ್ನಾಟಕ ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಆಡಳಿತ ಮಂಡಳಿ ಒಕ್ಕೂಟ (KAMS) ಕ್ರಮಕ್ಕೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ (Sureshkumar) ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಶಾಲಾ ಕಾಲೇಜುಗಳ ಶುಲ್ಕದ ಬಗ್ಗೆ ಭಾರೀ ಚರ್ಚೆಯಾಗಿತ್ತು. ಒಂದೆಡೆ ಈ ವರ್ಷ ಸರಿಯಾಗಿ ಶಾಲೆಗಳನ್ನೇ ನಡೆಸಿಲ್ಲ, ಜೊತೆಗೆ ಕೋವಿಡ್-19 (COVID-19) ಮತ್ತು ಲಾಕ್ಡೌನ್ (Lockdown) ಕಾರಣಕ್ಕೆ ಆರ್ಥಿಕ ವ್ಯವಹಾರಗಳಿಲ್ಲ. ಆದುದರಿಂದ ಶುಲ್ಕ ಪಾವತಿಸಲು ಸಾಧ್ಯವಿಲ್ಲ ಎಂದು ಪೋಷಕರು. ಇನ್ನೊಂದೆಡೆ ಇದೇ ಕೋವಿಡ್ ಮತ್ತು ಲಾಕ್ಡೌನ್ ನಡುವೆಯೂ ಶಾಲೆ ನಿರ್ವಹಣೆ ಮಾಡಬೇಕಿರುವುದರಿಂದ ಶುಲ್ಕ ಪಾವತಿ ಅನಿವಾರ್ಯ ಎಂದು ಶಾಲಾ ಕಾಲೇಜುಗಳ ಆಡಳಿತ ಮಂಡಳಿಗಳು ವಾದ ಮಾಡುತ್ತಿದ್ದವು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಶಾಲಾ ಶುಲ್ಕದ ವಿಷಯ ಕಗ್ಗಂಟಾಗಿತ್ತು. ಕಡೆಗೀಗ ಕರ್ನಾಟಕ ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಆಡಳಿತ ಮಂಡಳಿ ಒಕ್ಕೂಟ ಬಲವಂತವಾಗಿ ಸ್ಕೂಲ್ ಫೀ ಕಟ್ಟಿಸಿಕೊಳ್ಳದಿರುವ ನಿರ್ಧಾರಕ್ಕೆ ಬಂದಿದೆ.
ಕರ್ನಾಟಕ ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಆಡಳಿತ ಮಂಡಳಿಯ ನಿರ್ಧಾರದ ಬಗ್ಗೆ ತಮ್ಮ ಫೇಸ್ ಬುಕ್ (Facebook) ಖಾತೆಯಲ್ಲಿ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಹಳ್ಳಿಗಳಲ್ಲಿ ಕರೆಂಟ್ ಸಿಗೋದೇ ಡೌಟು: ಹೈ ಸ್ಪೀಡ್ ಇಂಟರ್ನೆಟ್ ಕೊಡ್ತಾರಂತೆ ಶಿಕ್ಷಣ ಸಚಿವ ಸುರೇಶ್ ಕುಮಾರ್
ಇದೊಂದು ಅತ್ಯಂತ ಸ್ವಾಗತಾರ್ಹ ಘೋಷಣೆ. ರಾಜ್ಯದ ಖಾಸಗಿ ಶಾಲೆಗಳಲ್ಲಿ ಪೋಷಕರು ಮತ್ತು ಶಾಲಾ ವ್ಯವಸ್ಥಾಪಕ ಮಂಡಳಿ ನಡುವೆ ಈ ಕೋವಿಡ್ ಮಹಾಮಾರಿ ವರ್ಷದಲ್ಲಿ ಶಾಲಾ ಶುಲ್ಕ ಕುರಿತು ತೀವ್ರ ವಾಗ್ವಾದ/ಸಂಘರ್ಷ ನಡೆದಿದೆ. ಈ ವರ್ಷ ಬಹಳಷ್ಟು ಕಾಲ ಶಾಲೆಗಳು ನಡೆಯದೇ ಇರುವುದರಿಂದ ಹಾಗೂ ಈ ಮಹಾಮಾರಿಯ ಕಾರಣ ತಮ್ಮ ಸಂಪಾದನೆ ಇಳಿಮುಖ ವಾಗಿರುವುದರಿಂದ (ಕೆಲವು ಪ್ರಸಂಗಗಳಲ್ಲಿ ಸಂಪಾದನೆಯೇ ಇಲ್ಲದಿರುವುದರಿಂದ) ತಮಗೆ ಎಂದಿನಂತೆ ಶುಲ್ಕ ಕಟ್ಟಲು ಸಾಧ್ಯವಾಗುತ್ತಿಲ್ಲ ಎಂಬುದು ಪೋಷಕರ ನ್ಯಾಯಯುತ ಅಳಲು. ಆದರೆ ಪೋಷಕರು ಶುಲ್ಕ ಕಟ್ಟದಿದ್ದರೆ ನಾವು ನಮ್ಮ ಶಾಲೆಗಳ ಶಿಕ್ಷಕರಿಗೆ ವೇತನ ಕೊಡುವುದು ಹೇಗೆ ಎಂಬುದು ಖಾಸಗಿ ಶಾಲೆಗಳ ಪ್ರಶ್ನೆ.
ವಿಶೇಷವಾಗಿ ಬಜೆಟ್ ಶಾಲೆಗಳು (Schools) ಎಂದು ಕರೆಯಲ್ಪಡುವ ಮಧ್ಯಮವರ್ಗದ ಶಾಲೆಗಳಲ್ಲಿ ಅನೇಕ ಶಿಕ್ಷಕರು ಇಂದು ತಮ್ಮ ಕೆಲಸ ಕಳೆದುಕೊಂಡಿದ್ದಾರೆ ಅಥವಾ ಅವರ ಸಂಬಳ ಕಡಿತಗೊಂಡಿದೆ. ಇವರಲ್ಲಿ ಅನೇಕರು ಇಂದು ತರಕಾರಿ ಮಾರುವುದರಿಂದ ಹಿಡಿದು ಬೇರೆ ಬೇರೆ ಉದ್ಯೋಗಗಳಲ್ಲಿ ತೊಡಗಿದ್ದಾರೆ. ಇದು ಸರಿಯಲ್ಲ. ಈ_ಸಂದರ್ಭದಲ್ಲಿ "ಶಾಲೆಗಳಲ್ಲಿ ಪೂರ್ತಿ ಶುಲ್ಕ ಕಟ್ಟಿ ಎಂದು ಒತ್ತಡ ಹೇರುವುದು ಸರಿಯಲ್ಲ. ಈ ವರ್ಷದ ಖರ್ಚುವೆಚ್ಚದ ಆಧಾರದ ಮೇಲೆ ಶುಲ್ಕ ನಿಗದಿ ಮಾಡಿ. ಬಲವಂತವಾಗಿ ಶುಲ್ಕ ಪಾವತಿ ಮಾಡಿ ಎನ್ನುವುದು ಸರಿಯಲ್ಲ" ಎಂಬ ಕರ್ನಾಟಕ ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಆಡಳಿತ ಮಂಡಳಿ ಒಕ್ಕೂಟ (KAMS) ತನ್ನ ವ್ಯಾಪ್ತಿಯ ಸಂಸ್ಥೆಗಳಿಗೆ ಮನವಿ ಮಾಡಿರುವುದನ್ನು ನಾನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ ಎಂದು ಎಸ್. ಸುರೇಶ್ ಕುಮಾರ್ (S Suresh Kumar) ಬರೆದುಕೊಂಡಿದ್ದಾರೆ.
ಇದನ್ನೂ ಓದಿ : ದುಬಾರಿ ಶುಲ್ಕ ಪಾವತಿ ಬಗ್ಗೆ ಫೇಸ್ಬುಕ್ನಲ್ಲಿ ಅಳಲು ತೋಡಿಕೊಂಡ ಶಿಕ್ಷಣ ಸಚಿವ ಸುರೇಶ್ ಕುಮಾರ್
"ಈ ವರ್ಷ ಅನೇಕ ಶೈಕ್ಷಣಿಕ ಚಟುವಟಿಕೆಗಳು ನಡೆಯುವುದಿಲ್ಲ. ಹೀಗಾಗಿ ಪಠ್ಯಕ್ರಮ ಅಥವಾ ಪಠ್ಯೇತರ ಚಟುವಟಿಕೆಗಳಿಗೆ ಶುಲ್ಕ ನಿಗದಿ ಪಡಿಸಿದ್ದರೆ ಅದನ್ನು ಕೈಬಿಡಬೇಕು. ಮೊದಲಿನಂತೆ ಸಂಪೂರ್ಣವಾಗಿ ಶುಲ್ಕ ಪಡೆಯುವುದು ಬೇಡ. ಪಾಲಕ-ಪೋಷಕರು ಒಂದಿಗೆ ಚರ್ಚೆ ನಡೆಸಿ ಶುಲ್ಕ ರಿಯಾಯಿತಿ ನೀಡಿದರೆ ಪಾಲಕ-ಪೋಷಕರು ಖಂಡಿತವಾಗಿಯೂ ಶುಲ್ಕ ಪಾವತಿ ಮಾಡುತ್ತಾರೆ" ಎಂಬ ಕ್ಯಾಮ್ಸ್ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ಅವರ ಹೇಳಿಕೆ ಅತ್ಯಂತ ಆರೋಗ್ಯಕರ. ಎಲ್ಲಾ ಶಾಲೆಗಳು ತಮ್ಮ ಶಾಲೆಗಳ ಮಕ್ಕಳ ಪೋಷಕರ ಆರ್ಥಿಕ ಸ್ಥಿತಿಯನ್ನು ಅರಿಯಬೇಕು. ಅದೇ ರೀತಿ ಆರ್ಥಿಕವಾಗಿ ಸಬಲರಾಗಿರುವ ಪೋಷಕರು ತಮ್ಮ ಮಕ್ಕಳು ಓದುತ್ತಿರುವ ಶಾಲೆಗಳ ಶಿಕ್ಷಕರ ಜೀವನ ನಿರ್ವಹಣೆ ಬಗ್ಗೆಯೂ ಕಾಳಜಿ ವ್ಯಕ್ತಪಡಿಸಬೇಕು ಎಂದು ಸಚಿವ ಸುರೇಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.