ಬೆಂಗಳೂರು: ಉದ್ಯಮಿ ಪುತ್ರ ವಿದ್ವತ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಂತಿ ನಗರ ಶಾಸಕ ಹ್ಯಾರಿಸ್ ಪುತ್ರ ರೌಡಿ ನಲಪಾಡ್ಗೆ ಜಾಮೀನು ನೀಡಲು 8ನೇ ಎಸಿಎಂಎಂ ಕೋರ್ಟ್ ನಿರಾಕರಿಸಿದ್ದು, 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.
ಕಳೆದ ಎರಡು ದಿನಗಳಿಂದ ಪೋಲಿಸ್ ಬಂಧನದಲ್ಲಿದ್ದ ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಸೇರಿದಂತೆ 7 ಮಂದಿಯನ್ನು ಇಂದು ಮಧ್ಯಾಹ್ನ ಕಬ್ಬನ್ ಪಾರ್ಕ್ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದರು.
ಜಾಮೀನು ಅರ್ಜಿಯ ವಿಚಾರಣೆ ವೇಳೆ ನಲಪಾಡ್ ಪರ ವಕೀಲರು ಜಾಮೀನು ನೀಡುವಂತೆ ಮನವಿ ಮಾಡಿದ್ದರೂ ಐಪಿಸಿ ಸೆಕ್ಷನ್ 307ರ ಅಡಿ ಕೇಸ್ ದಾಖಲಾಗಿದ್ದ ಹಿನ್ನೆಲೆಯಲ್ಲಿ ನ್ಯಾಯಾಧೀಶ ಪರಮೇಶ್ವರ್ ಜಾಮೀನು ಮಂಜೂರು ಮಾಡಲು ನಿರಾಕರಿಸಿ, 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಗಳನ್ನು ಪರಪ್ಪನ ಅಗ್ರಹಾರ ಜೈಲಿಗೆ ಸ್ಥಳಾಂತರಿಸಿದ್ದಾರೆ.
ಏತನ್ಮಧ್ಯೆ ನಲಪಾಡ್ ಜಾಮೀನು ಅರ್ಜಿ ಸಲ್ಲಿಸಿದ್ದರೆ, ಮತ್ತೊಂದೆಡೆ ವಿದ್ವತ್ ತಂದೆ ಲೋಕನಾಥ್ ಕೂಡಾ ತಕರಾರು ಅರ್ಜಿ ಸಲ್ಲಿಸಿದ್ದಾರೆ. ನನ್ನ ಮಗ ಸಾವು, ಬದುಕಿನ ಹೋರಾಟ ನಡೆಸುತ್ತಿದ್ದು, ನಲಪಾಡ್ ಮತ್ತು ಗ್ಯಾಂಗ್ ಗೆ ಜಾಮೀನು ನೀಡಬಾರದೆಂದು ಲೋಕನಾಥ್ ಪರ ವಕೀಲ ಶ್ಯಾಮ್ ಸುಂದರ್ ವಾದ ಮಂಡಿಸಿದರು.
ವಾದ, ಪ್ರತಿವಾದ ಆಲಿಸಿದ ಬಳಿಕ ನ್ಯಾಯಾಧೀಶರು ನಲಪಾಡ್ ಮತ್ತು ಸಹಚರರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದಾರೆ. ನಲಪಾಡ್ ಜಾಮೀನು ಅರ್ಜಿ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿದೆ.