ವಿಜಯವಾಡ: "ಕಳೆದ ನಾಲ್ಕು ವರ್ಷಗಳಲ್ಲಿ ಕೇಂದ್ರವು ನಮಗೆ ಏನೂ ಮಾಡಲಿಲ್ಲ. ಮುಖ್ಯಮಂತ್ರಿಯಾಗಿ, ಜನರಿಗೆ ಅನ್ಯಾಯ ಆಗುತ್ತಿರುವುದನ್ನು ನಾನು ಸಹಿಸುವುದಿಲ್ಲ" ಎಂದು ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಎಂದು ಹೇಳಿದ್ದಾರೆ.
ದಕ್ಷಿಣದ ರಾಜ್ಯಕ್ಕಾಗಿ "ನ್ಯಾಯ" ಪಡೆಯಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಇತರ ಪಕ್ಷಗಳ ಬೆಂಬಲದೊಂದಿಗೆ ವಿಶ್ವಾಸಾರ್ಹ ಚಳುವಳಿ ನಡೆಸಲು ಸಿದ್ಧರಾಗಿರುವುದಾಗಿ ಟಿಡಿಪಿ ಅಧ್ಯಕ್ಷ ಹಾಗೂ ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಎಂದು ಹೇಳಿದ್ದಾರೆ.
ಬಜೆಟ್ನಲ್ಲಿ ಆಂಧ್ರಪ್ರದೇಶಕ್ಕೆ ವಿಶೇಷ ಅನುದಾನ ನೀಡದಿರುವ ಬಗ್ಗೆ ಮೂಡಿದ್ದ ಅಸಮಧಾನ ಉಲ್ಬಣಗೊಂಡಿದೆ. ಈ ಸಂಬಂಧ ಚಂದ್ರಬಾಬು ನಾಯ್ಡು ಮತ್ತು ಅವರ ತೆಲುಗು ದೇಶಂ ಪಕ್ಷ (ಟಿಡಿಪಿ) ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ. ಇದು ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಅತಿ ದೊಡ್ಡ ಮಿತ್ರಪಕ್ಷವಾಗಿದ್ದ ಟಿಡಿಪಿ ಜೊತೆಗಿನ ಸಂಬಂಧವನ್ನು ಸಡಿಲಗೊಳಿಸುತ್ತಿದೆ.
ಆಂಧ್ರಪ್ರದೇಶದ ನ್ಯಾಯಕ್ಕಾಗಿ ನಮ್ಮ ಹೋರಾಟ ಮುಂದುವರಿಯುತ್ತದೆ. ನ್ಯಾಯ ಸಿಗದಿದ್ದರೆ ನಾವು ಇತರ ಪಕ್ಷಗಳಿಂದ ಬೆಂಬಲವನ್ನು ಪಡೆಯುತ್ತೇವೆ ಮತ್ತು ಯಾವುದೇ ರೀತಿಯ ಹೆಜ್ಜೆ ತೆಗೆದುಕೊಳ್ಳಲು ಸಿದ್ಧ" ಎಂದು ಸೋಮವಾರ ವಿಜಯವಾಡದಲ್ಲಿ ನಡೆದ ಸಭೆಯಲ್ಲಿ ನಾಯ್ಡು ಘೋಷಿಸಿದರು.
"ರಾಜ್ಯದ ಅಭಿವೃದ್ದಿಗೆ ಮೈತ್ರಿ ಪೂರಕವಾಗಿರುತ್ತದೆ ಎನ್ನುವ ಒಂದೇ ಕಾರಣಕ್ಕಾಗಿ ಬಿಜೆಪಿಯ ಜೊತೆ ಮೈತ್ರಿ ಮಾಡಿಕೊಳ್ಳಲಾಯಿತು. ಆ ಮೂಲಕವಾದರೂ ಆಂಧ್ರದ ಜನಕ್ಕೆ ನ್ಯಾಯ ಸಿಗುತ್ತೆ ಎನ್ನುವ ವಿಶ್ವಾಸ ತಮ್ಮದಾಗಿತ್ತು". ಆದರೆ ಸರ್ಕಾರ ಬಂದು ನಾಲ್ಕು ವರ್ಷಗಳು ಕಳೆಯುತ್ತಾ ಬಂದರೂ ಸಹ, ಭರವಸೆಗಳು ಜಾರಿಗೆ ಬಂದಿಲ್ಲ. ರಾಜ್ಯಕ್ಕೆ ನೀಡಲಾದ ಭರವಸೆಗಳ ಅನುಷ್ಠಾನಕ್ಕಾಗಿ 29 ಬಾರಿ ದೆಹಲಿಗೆ ಹೋಗಿದ್ದೇನೆ. ಆದರೆ ಇನ್ನು ಕೂಡಾ ನಮಗೆ ನ್ಯಾಯ ದೊರೆತಿಲ್ಲ ಎಂದು ಈ ಮೊದಲೂ ಸಹ ಚಂದ್ರಬಾಬು ನಾಯ್ಡು ಬೇಸರ ವ್ಯಕ್ತಪಡಿಸಿದ್ದರು.