ಶ್ರವಣಬೆಳಗೊಳ : 12 ವರ್ಷಕ್ಕೊಮ್ಮೆ ನಡೆಯುವ ಮಹಾಮಸ್ತಕಾಭಿಷೇಕ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು.
ಮೈಸೂರಿನಿಂದ ಸೇನಾ ಹೆಲಿಕ್ಯಾಪ್ಟರ್ನಲ್ಲಿ ಚನ್ನರಾಯಪಟ್ಟಣದ ರಾಚೇನಹಳ್ಳಿ ಹೆಲಿಪ್ಯಾಡ್ ಗೆ ಬಂದಿಳಿದ ಮೋದಿ ವಿಶೇಷ ವಾಹನದಲ್ಲಿ ಆಗಮಿಸಿ, ಚಾವುಂಡರಾಯ ಸಭಾಂಗಣದಲ್ಲಿ 88ನೇ ಬಾಹುಬಲಿ ಮಹಾಮಸ್ತಕಾಭಿಷೇಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಭಾರತದಲ್ಲಿ ಸಾಮಾಜಿಕ ಕಾರ್ಯಗಳಿಗಿಂತಲೂ ಧಾರ್ಮಿಕ ಕಾರ್ಯಗಳಿಗೆ ಹೆಚ್ಚು ಪ್ರಾಧಾನ್ಯತೆ ಎನ್ನುವ ವಾದ ಸರಿಯಲ್ಲ, ಅವೆರಡೂ ಜೊತೆ ಜೊತೆಯಾಗೇ ಸಾಗುತ್ತವೆ. ದೇಶದಲ್ಲಿ ಪುರಾತನ ಕಾಲದಿಂದಲೂ ಮುನಿಗಳು, ಋಷಿಗಳು, ಸಂತರು ಧಾರ್ಮಿಕ ಕಾರ್ಯದ ಜೊತೆಗೆ ಸಾಮಾಜಿಕ ಕಾರ್ಯಗಳನ್ನೂ ಮಾಡುತ್ತಲೇ ಬಂದಿದ್ದಾರೆ. ಶಿಕ್ಷಣ, ಆರೋಗ್ಯದ ಕ್ಷೇತ್ರಗಳಲ್ಲಿ ಅವರ ಸೇವೆ ಅಪಾರ ಎಂದು ಅವರು ಸಂತಮುನಿಗಳ ಸೇವೆಯನ್ನು ಮೋದಿ ಸ್ಮರಿಸಿದರು.
ಇದೇ ಸಂದರ್ಭದಲ್ಲಿ ಮಹಾಮಸ್ತಕಾಭಿಷೇಕ ಹಾಗೂ ಭಕ್ತಾದಿಗಳ ಅನುಕೂಲಕ್ಕಾಗಿ ಬೆಟ್ಟಕ್ಕೆ ಹೊಸದಾಗಿ ನಿರ್ಮಿಸಲಾದ 630 ಮೆಟ್ಟಿಲುಗಳನ್ನು ಮತ್ತು ಪ್ರಸಿದ್ಧ ಐನಾಕ್ಸ್ ಕಂಪನಿ ನಿರ್ಮಿಸಿದ ಬಾಹುಬಲಿ ಆಸ್ಪತ್ರೆಯ ಉದ್ಘಾಟನೆಯನ್ನು ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ನೆರವೇರಿಸಿದರು.
ಇದಕ್ಕೂ ಮುನ್ನ ಕಾರ್ಯಕ್ರಮಕ್ಕೆ ಆಗಮಿಸಿದ ಪ್ರಧಾನಿ ಮೋದಿ ಅವರಿಗೆ, ಏಲಕ್ಕಿ ಮಾಲೆ, ರೇಷ್ಮೆ ಶಾಲು, ರಜತ ಕಳಶ, ಪ್ರಧಾನಿ ರೇಖಾಚಿತ್ರವಿರುವ ಸ್ಮರಣ ಕಾಣಿಕೆ, ಪುಸ್ತಕಗಳ ಕಾಣಿಕೆ ನೀಡಿ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮಿಜಿ ಸನ್ಮಾನ ಮಾಡಿದರು.
ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ, ಅನಂತಕುಮಾರ್, ರಾಜ್ಯಪಾಲ ವಾಜುಭಾಯಿ ವಾಲ, ಸಚಿವ ಎ.ಮಂಜು ಸೇರಿದಂತೆ ಇತರ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.