ಮಾದರಿ ನೀತಿ ಸಂಹಿತೆ, ಕೋವಿಡ್-19 ಮಾರ್ಗಸೂಚಿಗಳನ್ನು ರಾಜಕಾರಣಿಗಳು ಪಾಲಿಸುವುದು ಕಡ್ಡಾಯ

ಕರ್ನಾಟಕ ಪಶ್ಚಿಮ ಪದವೀಧರ ಕ್ಷೇತ್ರದ ದ್ವೈವಾರ್ಷಿಕ ಚುನಾವಣೆಯಲ್ಲಿ ಜಾರಿಯಲ್ಲಿರುವ ಚುನಾವಣಾ ಮಾದರಿ ನೀತಿ ಸಂಹಿತೆಯನ್ನು ಹಾಗೂ ಭಾರತ ಚುನಾವಣಾ ಆಯೋಗವು ನೀಡಿರುವ ಕೋವಿಡ್-19 ಮಾರ್ಗಸೂಚಿಗಳನ್ನು ಸ್ಪರ್ಧಿಸಿರುವ ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷದ ಪ್ರತಿನಿಧಿಗಳು ಚಾಚೂ ತಪ್ಪದೇ ಪಾಲಿಸುವುದು ಕಡ್ಡಾಯವಾಗಿದೆ ಎಂದು ಚುನಾವಣಾಧಿಕಾರಿಗಳೂ ಆಗಿರುವ ಪ್ರಾದೇಶಿಕ ಆಯುಕ್ತ ಆಮ್ಲಾನ್ ಆದಿತ್ಯ ಬಿಸ್ವಾಸ್ ಹೇಳಿದರು.

Last Updated : Oct 13, 2020, 11:51 PM IST
ಮಾದರಿ ನೀತಿ ಸಂಹಿತೆ, ಕೋವಿಡ್-19 ಮಾರ್ಗಸೂಚಿಗಳನ್ನು ರಾಜಕಾರಣಿಗಳು ಪಾಲಿಸುವುದು ಕಡ್ಡಾಯ  title=

ಬೆಂಗಳೂರು: ಕರ್ನಾಟಕ ಪಶ್ಚಿಮ ಪದವೀಧರ ಕ್ಷೇತ್ರದ ದ್ವೈವಾರ್ಷಿಕ ಚುನಾವಣೆಯಲ್ಲಿ ಜಾರಿಯಲ್ಲಿರುವ ಚುನಾವಣಾ ಮಾದರಿ ನೀತಿ ಸಂಹಿತೆಯನ್ನು ಹಾಗೂ ಭಾರತ ಚುನಾವಣಾ ಆಯೋಗವು ನೀಡಿರುವ ಕೋವಿಡ್-19 ಮಾರ್ಗಸೂಚಿಗಳನ್ನು ಸ್ಪರ್ಧಿಸಿರುವ ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷದ ಪ್ರತಿನಿಧಿಗಳು ಚಾಚೂ ತಪ್ಪದೇ ಪಾಲಿಸುವುದು ಕಡ್ಡಾಯವಾಗಿದೆ ಎಂದು ಚುನಾವಣಾಧಿಕಾರಿಗಳೂ ಆಗಿರುವ ಪ್ರಾದೇಶಿಕ ಆಯುಕ್ತ ಆಮ್ಲಾನ್ ಆದಿತ್ಯ ಬಿಸ್ವಾಸ್ ಹೇಳಿದರು.

ಅವರು ಇಂದು ಸಂಜೆ ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿ ಸಭಾಭವನದಲ್ಲಿ ರಾಜಕೀಯ ಪಕ್ಷದ ಪ್ರತಿನಿಧಿಗಳ ಹಾಗೂ ಕರ್ನಾಟಕ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣಾ ಅಭ್ಯರ್ಥಿಗಳ ಸಭೆ ಉದ್ದೇಶಿಸಿ ಮಾತನಾಡಿದರು.

ಚುನಾವಣಾ ಪ್ರಕ್ರಿಯೆಗಳು ಮುಕ್ತ ಹಾಗೂ ನಿಷ್ಪಕ್ಷಪಾತವಾಗಿ ಮತ್ತು ಪಾರದರ್ಶಕವಾಗಿ ಜರುಗುವಂತೆ ಕ್ರಮ ವಹಿಸುವುದು ಎಲ್ಲರ ಕರ್ತವ್ಯವಾಗಿದೆ. ಭಾರತದ ಚುನಾವಣಾ ಆಯೋಗವು ಚುನಾವಣಾ ದಿನಾಂಕ ಘೋಷಿಸಿದ ದಿನದಿಂದ ಜಾರಿಯಾಗಿರುವ ಮಾದರಿ ನೀತಿ ಸಂಹಿತೆಯನ್ನು ಪ್ರತಿಯೊಂದು ಪಕ್ಷಗಳು ಪಾಲಿಸಬೇಕು. ಬಹಿರಂಗ ಪ್ರಚಾರ, ವಾಹನಗಳ ಬಳಕೆ, ಪ್ರಚಾರ ಸಾಮಗ್ರಿ ಇತ್ಯಾದಿಗಳ ಕುರಿತು ಅನುಮತಿ ನೀಡಲು ಪಶ್ಚಿಮ ಪದವೀಧರ ಮತಕ್ಷೇತ್ರ ವ್ಯಾಪ್ತಿಯ ಧಾರವಾಡ, ಹಾವೇರಿ, ಗದಗ ಮತ್ತು ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕ್ರಮಕೈಗೊಳ್ಳಲಾಗಿದೆ.ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ತಮಗೆ ಅಗತ್ಯವಿರುವ ಅನುಮತಿಗಳನ್ನು ಸಹಾಯಕ ಚುನಾವಣಾಧಿಕಾರಿಗಳು ಆಗಿರುವ ಆಯಾ ಜಿಲ್ಲಾಧಿಕಾರಿಗಳಿಂದ ಪಡೆಯಬಹುದು.

 ಬಹಿರಂಗ ಪ್ರಚಾರ ಸಭೆಗಳಲ್ಲಿ ಮತ್ತು ಮನೆ ಮನೆಗೆ ತೆರಳಿ ಪ್ರಚಾರ ಹಾಗೂ ಒಳಾಂಗಣ ಸಭೆಗಳಲ್ಲಿ ಕೋವಿಡ್-19 ಮಾರ್ಗಸೂಚಿಗಳಲ್ಲಿ ತಿಳಿಸಿರುವ ಸಂಖ್ಯೆಯಷ್ಟು ಸಾರ್ವಜನಿಕರು ಮಾತ್ರ ಭಾಗವಹಿಸಬೇಕು. ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸಬೇಕು.ಪ್ರಚಾರ ವಾಹನಗಳ ಬಳಕೆಗೆ ಪ್ರತ್ಯೇಕ ನಿಯಮಗಳಿದ್ದು, ಅನುಮತಿ ಪಡೆದ ವಾಹನದಲ್ಲಿ ಅನುಮತಿ ಪತ್ರದ ಮೂಲಪ್ರತಿಯನ್ನು ಮಾತ್ರ ಲಗತ್ತಿಸಬೇಕು. ವಾಹನ ಸಾಮಥ್ರ್ಯದ ಅರ್ಧದಷ್ಟು ಜನರು ಮಾತ್ರ ವಾಹನದಲ್ಲಿ ಸಂಚರಿಸಬೇಕು. ಪರಸ್ಪರ ಸಾಮಾಜಿಕ ಅಂತರ ಕಾಪಾಡಬೇಕು. ಈ ನಿಯಮಗಳನ್ನು ಪಾಲಿಸದ ವಾಹನಗಳ ಮೇಲೆ ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಪ್ರಕರಣದ ದಾಖಲಿಸಿ, ವಾಹನಗಳನ್ನು ವಶಕ್ಕೆ ಪಡೆಯಲಾಗುವುದು. ಮತ್ತು ಆರ್‍ಟಿಓ ಮೂಲಕ ವಾಹನದ ನೋಂದಣಿ ರದ್ದುಗೊಳಿಸಲು ಚುನಾವಣಾ ಕಾಯ್ದೆ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಮಾದರಿ ನೀತಿ ಸಂಹಿತೆ ಉಲ್ಲಂಘನೆ ಹಾಗೂ ಚುನಾವಣಾ ಅಕ್ರಮಗಳನ್ನು ತಡೆಗಟ್ಟಲು ಚುನಾವಣಾ ಕ್ಷೇತ್ರ ವ್ಯಾಪ್ತಿಯ ಪ್ರತಿ ವಿಧಾನಸಭಾ ಮತಕ್ಷೇತ್ರಕ್ಕೆ ಮೂರು ಫ್ಲೈಯಿಂಗ್ ಸ್ಕ್ವಾಡ್ ತಂಡಗಳನ್ನು ರಚಿಸಿ ಅಧಿಕಾರಿಗಳನ್ನು ನೇಮಿಸಲಾಗಿದೆ. ಚುನಾವಣೆ ನಿಯಮಗಳ ಉಲ್ಲಂಘನೆ ಕುರಿತು ದೂರುಗಳನ್ನು ದಾಖಲಿಸಲು, ಸಾರ್ವಜನಿಕರು ಮಾಹಿತಿ ನೀಡಲು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ 1077 ಸಹಾಯವಾಣಿಯನ್ನು ಸ್ಥಾಪಿಸಲಾಗಿದೆ. ಮತ್ತು ನೀತಿ ಸಂಹಿತೆ ಉಲ್ಲಂಘನೆ ಹಾಗೂ ಚುನಾವಣಾ ಕುರಿತ ಯಾವುದೇ ರೀತಿಯ ದೂರುಗಳಿದ್ದಲ್ಲಿ ಎಂಸಿಸಿ ಕಮಿಟಿಯ ಅಧ್ಯಕ್ಷರಾಗಿರುವ ಜಿಲ್ಲಾ ಪಂಚಾಯತ್ ಸಿಇಓ ಅವರ ಮೊಬೈಲ್ 9480864000 ಮತ್ತು ಧಾರವಾಡ ಉಪವಿಭಾಗಾಧಿಕಾರಿ ಮೊಬೈಲ್ 9731008189 ಗೆ ಸಂಪರ್ಕಿಸಿ ಮಾಹಿತಿ ನೀಡಬಹುದು. ಮಾಹಿತಿದಾರರು ತಮ್ಮ ಹೆಸರು, ವಿಳಾಸ ಹಾಗೂ ದೂರವಾಣಿ ಸಂಖ್ಯೆಗಳನ್ನು ನೀಡಬೇಕು ಎಂದು ಅವರು ಹೇಳಿದರು.

ಮತಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 146 ಮತಗಟ್ಟೆಗಳನ್ನು ಸ್ಥಾಪಸಲಾಗುತ್ತಿದ್ದು, ಪ್ರತಿ ಮತಗಟ್ಟೆಯಲ್ಲಿ ಆರೋಗ್ಯ ಸಿಬ್ಬಂದಿ, ರಕ್ಷಣಾ ಸಿಬ್ಬಂದಿ, ಚುನಾವಣಾ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳು ಇರುತ್ತಾರೆ. ಮತಗಟ್ಟೆಗೆ ಬರುವ ಪ್ರತಿ ಮತದಾರ ಕಡ್ಡಾಯವಾಗಿ ಮಾಸ್ಕ್ ಧಾರಣೆ ಮಾಡಿರಬೇಕು. ಮತಗಟ್ಟೆಯಲ್ಲಿ ಕೋವಿಡ್ ಮಾರ್ಗಸೂಚಿಗಳನ್ವಯ ಮತದಾರನ ಆರೋಗ್ಯ ತಪಾಸಣೆ ಮಾಡಲಾಗುತ್ತದೆ. ಜ್ವರ, ಕೆಮ್ಮು ಇತ್ಯಾದಿಗಳು ಕಂಡುಬಂದಲ್ಲಿ ಮತದಾನದ ಕೊನೆಯ 1 ಗಂಟೆ ಸಮಯ ನೀಡಿ ಅವರಿಗೆ ಮತದಾನ ಮಾಡಲು ಅವಕಾಶ ಕಲ್ಪಿಸಲಾಗುತ್ತದೆ. 
 ಪ್ರತಿ ಮತದಾರರಿಗೆ ಮತದಾನ ಚೀಟಿ ತಲುಪಿಸಲು ಕ್ರಮ ಕೈಗೊಳ್ಳಲಾಗಿದ್ದು, ಇದರೊಂದಿಗೆ ಮತದಾರನಿಗೆ ಅಗತ್ಯವಿರುವ ಕೋವಿಡ್ ಮಾರ್ಗಸೂಚಿ, ಮತದಾನದ ರೀತಿ, ಸಮಯ, ಸ್ಥಳದ ಮಾಹಿತಿಗಳನ್ನು ನೀಡಲು ಮತ್ತು ಭಾರತ ಚುನಾವಣಾ ಆಯೋಗದ ಅನುಮತಿ ಪಡೆದು ಇದೇ ಮೊದಲ ಬಾರಿಗೆ ಪ್ರತಿ ಮತದಾರನಿಗೆ ತನ್ನ ಮತಗಟ್ಟೆ ತಲುಪಲು ಅಗತ್ಯವಿರುವ ರೂಟ್‍ಮ್ಯಾಪ್‍ನ್ನು ನೀಡಲು ತಂತ್ರಾಂಶ ಬಳಸಲು ಉದ್ದೇಶಿಸಲಾಗಿದೆ ಎಂದು ಅವರು ತಿಳಿಸಿದರು.

ಪದವೀಧರ ಮತಕ್ಷೇತ್ರದ ಚುನಾವಣೆಯಲ್ಲಿ ಭಾರತ ಚುನಾವಣಾ ಆಯೋಗವು ಯಾವುದೇ ರೀತಿಯಿಂದ ವೆಚ್ಚದ ಮಿತಿಗೊಳಿಸಿಲ್ಲ. ಆದರೆ ಪ್ರಚಾರ ಸಾಮಗ್ರಿ, ಸಾರ್ವಜನಿಕ ಪ್ರಚಾರದಲ್ಲಿ ಬಳಸುವ ಮಾಹಿತಿ, ವಿಷಯಗಳನ್ನು ಮೇಲುಸ್ತುವಾರಿ ಮಾಡಲು ನಿರ್ದೇಶಿಸಿದೆ. ಅದರಂತೆ ಎಲ್ಲ ರಾಜಕೀಯ ಪಕ್ಷ ಹಾಗೂ ಅಭ್ಯರ್ಥಿಗಳು ಮುದ್ರಣ ಹಾಗೂ ಸಾಮಾಜಿಕ ಜಾಲತಾಣ ಮತ್ತು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಬಳಸುವ ಮಾಹಿತಿ, ವಿಷಯವನ್ನು ನಿರ್ದಿಷ್ಟ ನಮೂನೆಗಳಲ್ಲಿ ಭರ್ತಿ ಮಾಡಿ 48 ಗಂಟೆ ಮುಂಚಿತವಾಗಿ ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಸಮಿತಿಗೆ ಸಲ್ಲಿಸಿ ಅನುಮತಿ ಪಡೆಯಬೇಕು. ಯಾವುದೇ ಜಾತಿ, ಧರ್ಮ, ಸಮುದಾಯಗಳ ಅವಹೇಳನ, ದುರ್ಬಳಕೆ, ಸುಳ್ಳು ಮಾಹಿತಿ ಇತ್ಯಾದಿಗಳನ್ನು ಪ್ರಕಟಿಸಿದಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆಯ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಕರ್ನಾಟಕ ಪಶ್ಚಿಮ ಪದವೀಧರ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಧಾರವಾಡ ಜಿಲ್ಲೆಯಲ್ಲಿ ಪುರುಷ-13,989, ಮಹಿಳೆ-8,653, ಇತರೆ-4, ಒಟ್ಟು 22,646 ಮತ್ತು ಗದಗ ಜಿಲ್ಲೆಯಲ್ಲಿ ಪುರುಷ-11,001, ಮಹಿಳೆ-5,011, ಇತರೆ-1, ಒಟ್ಟು 16,013, ಮತ್ತು ಹಾವೇರಿ ಜಿಲ್ಲೆಯಲ್ಲಿ ಪುರುಷ-16,430, ಮಹಿಳೆ-7,453, ಇತರೆ-5, ಒಟ್ಟು 23,888, ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಪುರುಷ-7,160, ಮಹಿಳೆ-6,066, ಇತರೆ-1, ಒಟ್ಟು 13,227 ಹೀಗೆ ಇಡೀ ಮತಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ಪುರುಷ-48,580, ಮಹಿಳೆ-27,183, ಇತರೆ-11 ಒಟ್ಟು 75,774 ಅರ್ಹ ಮತದಾರರಿದ್ದಾರೆ ಎಂದು ಅವರು ತಿಳಿಸಿದರು.

 ಸಭೆಯಲ್ಲಿ ಸಹಾಯಕ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಮಾದರಿ ನೀತಿ ಸಂಹಿತೆಯ ನೋಡಲ್ ಅಧಿಕಾರಿಯಾಗಿರುವ ಜಿಲ್ಲಾ ಪಂಚಾಯತ್ ಸಿಇಓ ಡಾ:ಸುಶೀಲಾ, ಉಪವಿಭಾಗಾಧಿಕಾರಿ ಡಾ: ಬಿ. ಗೋಪಾಲಕೃಷ್ಣ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಅಭ್ಯರ್ಥಿಗಳು, ಚುನಾವಣಾ ಏಜೆಂಟರು ಪಾಲ್ಗೊಂಡಿದ್ದರು. 

 

Trending News