ಚೆನ್ನೈ : ಮಹಾಮಾರಿ ಕರೋನಾ ಸೋಂಕಿನಿಂದಾಗಿ ಕಳೆದ ತಿಂಗಳಿನಿಂದ ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ದೇಶದ ಪ್ರಖ್ಯಾತ ಖ್ಯಾತ ಗಾಯಕ ಎಸ್. ಪಿ. ಬಾಲಸುಬ್ರಹ್ಮಣ್ಯಂ ಚಿಕಿತ್ಸೆ ಫಲಕಾರಿಯಾಗದೇ ತಮ್ಮ ಜೀವನ ಯಾನ ಮುಗಿಸಿದ್ದಾರೆ. ಈ ಮೂಲಕ ಬಹುಭಾಷಾ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ (SP Balasubrahmanyam) ನಮ್ಮೆಲ್ಲರನ್ನೂ ಅಗಲಿದ್ದಾರೆ.
ಟ್ವಿಟ್ಟರ್ನಲ್ಲಿ ಟ್ರೆಂಡ್ ಆದ ಖ್ಯಾತ ಗಾಯಕ ಎಸ್ಪಿ ಬಾಲಸುಬ್ರಹ್ಮಣ್ಯಂ
ತಮ್ಮ ಗಾಯನದ ಮೂಲಕ ಪ್ರಪಂಚದಾದ್ಯಂತ ಸಂಗೀತ ಪ್ರೇಮಿಗಳ ಹೃದಯದಲ್ಲಿ ಮನೆಮಾಡಿರುವ ಭಾರತದ ಹೆಮ್ಮೆ, ಸುಪ್ರಸಿದ್ಧ ಹಿನ್ನೆಲೆ ಗಾಯಕ, ಗಾನ ಗಂಧರ್ವ ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಜೂನ್ 4, 1946ರಲ್ಲಿ ಆಂಧ್ರಪ್ರದೇಶದ ಚಿತ್ತೂರಿನ ಕೊನೇಟಮ್ಮಪೇಟಾ ಎಂಬಲ್ಲಿ ಎಸ್.ಪಿ.ಸಾಂಬವಮೂರ್ತಿ ಹಾಗೂ ಕಮಲೇಶ್ವರಿ ಎಂಬ ಪುತ್ರರಾಗಿ ಜನಿಸಿದರು.
ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ 'ಎಸ್ಪಿಬಿ' ಅವರು ಹಾಡದೇ ಇರುವ ಶೈಲಿಯೇ ಇಲ್ಲ. ಕಳೆದ ಐದು ದಶಕಗಳಲ್ಲಿ ಡಾ. ಎಸ್ಪಿಬಿ ಅವರು 15ಕ್ಕೂ ಹೆಚ್ಚು ಭಾಷೆಗಳಲ್ಲಿ ಚಿತ್ರಗೀತೆ, ಭಕ್ತಿಗೀತೆ, ಭಾವಗೀತೆ, ರಾಷ್ಟ್ರಭಕ್ತಿಗೀತೆ ಹೀಗೆ ವಿವಿಧ ಪ್ರಕಾರಗಳಲ್ಲಿ 50,000ಕ್ಕೂ ಅಧಿಕ ಹಾಡುಗಳನ್ನು ಹಾಡಿದ್ದಾರೆ.
ನನ್ನ ಮುಂದಿನ ಜನ್ಮ ಅನ್ನೋದು ಇದ್ದರೆ ಕನ್ನಡನಾಡಲ್ಲೇ ಕನ್ನಡಿಗನಾಗಿ ಹುಟ್ಟಿ ಇವರ ಋಣ ತೀರಿಸುತಿನ್ನಿ ! ಎಂದು ಕನ್ನಡಿಗರ ಮೇಲಿರುವ ತಮ್ಮ ಪ್ರೀತಿಯನ್ನು ಹಂಚಿಕೊಂಡ ಭಾರತ ಸಂಗೀತ ಲೋಕದ ಹಿರಿಮೆಯ ಗಾಯಕ ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಬಾರದ ಲೋಕಕ್ಕೆ ತೆರಳಿದ್ದಾರೆ.