ಹೊಸಪೇಟೆ : ದೇಶದ ಯುವಜನತೆ ಉದ್ಯೋಗ ನೀಡಿ ಎಂದು ಯುವಜನತೆ ಗೋಗರೆದರೆ ಪಕೋಡ ಮಾರಿ ಜೀವನ ಮಾಡಿ ಎನ್ನುವ ಮೋದಿ ಅವರ ಮಾತನ್ನು ಕೆಪಿಸಿಸಿ ರಾಜ್ಯಾಧ್ಯಕ್ಷ ಜಿ.ಪರಮೇಶ್ವರ್ ವ್ಯಂಗ್ಯ ಮಾಡಿದರು.
ಇಂದು ಬಳ್ಳಾರಿಯ ಹೊಸಪೇಟೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ 'ಜನಾಶಿರ್ವಾದ ಯಾತ್ರೆ'ಯಲ್ಲಿ ಸ್ವಾಗತ ಭಾಷಣದಲ್ಲಿ ಮಾತನಾಡಿದ ಅವರು, ಮೋದಿ ಅವರು ಜನತೆಗೆ ಸುಳ್ಳು ಹೇಳಿ ಮರಳು ಮಾಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.
ಮುಂದುವರೆದು ಮಾತನಾಡಿದ ಅವರು, ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದಲ್ಲಿ ಹತ್ತು ಪರ್ಸೆಂಟ್ ಕಮಿಷನ್ ತೆಗೆದುಕೊಂಡು ಕೆಲಸಗಳನ್ನು ಮಾಡಲಾಗುತ್ತಿದೆ ಎನ್ನುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಅವಮಾನ ಮಾಡಿದ್ದಾರೆ. ಆದರೆ ಹತ್ತು ಪರ್ಸೆಂಟ್ ತೆಗೆದುಕೊಂಡಿದ್ದು ಯಾರು ಅನ್ನೋದನ್ನು ನರೇಂದ್ರ ಮೋದಿ ಅವರು ಬಹಿರಂಗ ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕದಲ್ಲಿ ಅಪರಾಧಗಳ ಸಂಖ್ಯೆ ಹೆಚ್ಚಾಗಿದೆ. ಕಾನೂನು ವ್ಯವಸ್ಥೆಯನ್ನು ಕಾಪಾಡುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ ಎಂದಿದ್ದ ಮೋದಿ ಅವರ ಆರೋಪಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ಪರಮೇಶ್ವರ್ ಅವರು, ಅತೀ ಹೆಚ್ಚು ಅಪರಾಧಗಳು ನಿಮ್ಮದೇ ಮುಖ್ಯಮಂತ್ರಿಗಳಿರುವ ಉತ್ತರಪ್ರದೇಶ ಮತ್ತು ಮಧ್ಯಪ್ರದೇಶದಲ್ಲಿ ನಡೆಯುತ್ತಿದ್ದು, ಅಂಕಿ- ಅಂಶಗಳು ಇದನ್ನು ಹೇಳುತ್ತವೆ. ಹಾಗಾಗಿ ನಿಮ್ಮ ಬೆಲೆ ಕರ್ನಾಟಕದಲ್ಲಿ ಬೇಯುವುದಿಲ್ಲ. 2018ರ ವಿಧಾನಸಭೆ ಚುನಾವಣೆಯಲ್ಲಿ ನಾವು ಮತ್ತೊಮ್ಮೆ ಅಧಿಕಾರಕ್ಕೆ ಬರಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕರ್ನಾಟಕ ಉಸ್ತುವಾರಿ ವಹಿಸಿರುವ ವೇಣುಗೋಪಾಲ್, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂ ರಾವ್, ಕೆಪಿಸಿಸಿ ಚುನಾವಣಾ ಪ್ರಚಾರ ಉಸ್ತುವಾರಿ ವಹಿಸಿರುವ ಡಿ.ಕೆ.ಶಿವಕುಮಾರ್, ಲೋಕಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಅಂಬರೀಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದಾರು.