ಬೆಂಗಳೂರು: ಡಿ.ಜೆ. ಹಳ್ಳಿ ಘಟನೆಯನ್ನು ನಾನು ಖಂಡಿಸುತ್ತೇನೆ. ಯಾರೂ ಕೂಡ ಕಾನೂನನ್ನು ಕೈಗೆತ್ತಿಕೊಳ್ಳುಬಾರದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ಹೇಳಿದ್ದಾರೆ.
ಬುಧವಾರ ಬೆಳಗ್ಗೆ ಸದಾಶಿವನಗರದ ನಿವಾಸದ ಬಳಿ ಬೆಂಗಳೂರಿನ ಡಿ.ಜೆ. ಹಳ್ಳಿ ಘಟನೆ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್ ಇದು ಸಮಾಜಘಾತುಕ ಕೃತ್ಯ. ಶಾಸಕರ ಆಸ್ತಿಯಾಗಲಿ, ಸಾಮಾನ್ಯ ಜನರ ಆಸ್ತಿಯೇ ಆಗಿರಲಿ, ಪೊಲೀಸ್ ಠಾಣೆಯಾಗಿರಲಿ ಯಾವುದನ್ನು ಹಾನಿ ಮಾಡುವುದು ಸರಿಯಲ್ಲ. ಇದನ್ನು ನಾವ್ಯಾರೂ ಒಪ್ಪಲು ಸಾಧ್ಯವಿಲ್ಲ ಎಂದರು.
I condemn the violence that has happened in Bengaluru. No one must take law into their own hands.
The Government must take strict and exemplary action against the person who made the derogatory social media post as well as those who indulged in rioting and arson. pic.twitter.com/Adhl152LPt
— DK Shivakumar (@DKShivakumar) August 12, 2020
ಅವಹೇಳನಕಾರಿ ಟ್ವೀಟ್ ಮಾಡಲಾಗಿದೆ ಎಂಬುದನ್ನು ಮಾಧ್ಯಮಗಳ ಮೂಲಕ ತಿಳಿದು ಬಂದಿದೆ. ಇದನ್ನು ಯಾರು ಮಾಡಿದರೂ ತಪ್ಪೇ. ಇಡೀ ಪ್ರಕರಣವೇ ತಪ್ಪಾಗಿದೆ. ಬೆಂಗಳೂರು ನಗರದ ಶಾಸಕರ ಸಭೆ ಕರೆದಿದ್ದು, ಚರ್ಚೆ ಮಾಡಿ ಮುಂದಿನ ಹೆಜ್ಜೆ, ನಿಲುವು ಬಗ್ಗೆ ತಿಳಿಸುತ್ತೇನೆ. ನಮ್ಮ ಶಾಸಕರು ಪರಿಸ್ಥಿತಿ ನಿಯಂತ್ರಿಸಲು ಪ್ರಯತ್ನಿಸಿದ್ದು, ನಿಯಂತ್ರಣ ಸಾಧ್ಯವಾಗಿಲ್ಲ ಎಂದು ಹೇಳಿದರು.
ಡಿ.ಜೆ. ಹಳ್ಳಿ ಘಟನೆಯ ಹಿಂದೆ ಬಹಳ ವ್ಯವಸ್ಥಿತವಾದ ಸಂಚು ಇದೆ ಎಂದು ಮಾಧ್ಯಮಗಳ ಮೂಲಕ ತಿಳಿದುಬಂದಿದೆ. ಕಾಂಗ್ರೆಸ್ ಪಕ್ಷ ಇದನ್ನು ಖಂಡಿಸಲಿದ್ದು, ಸರ್ಕಾರ ಯಾವುದೇ ರೀತಿಯ ಕಾನೂನು ಕ್ರಮ ಕೈಗೊಂಡರು ಯಾವುದೇ ಅಭ್ಯಂತರವಿಲ್ಲ. ನಾವು ಸಹಕಾರ ನೀಡುತ್ತೇವೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಯಾರಿಗೂ ಉತ್ತರ ನೀಡುವುದಿಲ್ಲ
ಬಿಜೆಪಿ ಮುಖಂಡ ಬಿ.ಎಲ್. ಸಂತೋಷ್, ಸಚಿವ ಸಿ.ಟಿ. ರವಿ (CT Ravi) ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್ ‘ಈ ಸಮಯದಲ್ಲಿ ಪ್ರಚೋದನಕಾರಿ ಹೇಳಿಕೆಗೆ ಅವಕಾಶ ನೀಡಬಾರದು. ಅವರು ಅವರ ರಾಜಕಾರಣ ಮಾಡಲಿ. ನಾನು ಯಾರಿಗೂ ಉತ್ತರ ಕೊಡುವುದಿಲ್ಲ. ನಾನು ಕೂಡ ಶಾಸಕರ ಜತೆ ಚರ್ಚಿಸುತ್ತೇನೆ. ಸ್ಥಳಕ್ಕೆ ಹೋಗಿ ನೋಡಬೇಕಿದೆ. ಶಾಸಕರ ಮನೆಗೂ ಭೇಟಿ ನೀಡಬೇಕು. ಈಗಾಗಲೇ ವಿರೋಧ ಪಕ್ಷದ ನಾಯಕರ ಜತೆ ಮಾತನಾಡಿದ್ದೇನೆ’ ಎಂದರು.