ಬೆಂಗಳೂರು : ಬಹು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಸ್ಥಳೀಯ ಉಪನಗರ ರೈಲು ಯೋಜನೆಗೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಈ ಬಾರಿಯ ಕೇಂದ್ರ ಬಜೆಟ್ ನಲ್ಲಿ ಬೆಂಬಲ ವ್ಯಕ್ತಪಡಿಸಿದ್ದು, ನಿಖರವಾದ ಮೊತ್ತದ ಹಣವನ್ನು ವಿವರಿಸಲಿಲ್ಲ.
ಈ ಬಾರಿಯ ಕೇಂದ್ರ ಬಜೆಟ್ನಲ್ಲಿ 160 ಕಿ.ಮೀ. ಬೆಂಗಳೂರು ಉಪನಗರ ರೈಲು ಜಾಲದ ವಿಶೇಷ ಪ್ರಸ್ತಾಪದೊಂದಿಗೆ, ಬೆಂಗಳೂರಿನ ಸಾರಿಗೆ ಮೂಲಭೂತ ಸೌಕರ್ಯಕ್ಕಾಗಿ 17 ಸಾವಿರ ಕೋಟಿ ರೂ.ಗಳನ್ನು ಹಣಕಾಸು ಮಂತ್ರಿಗಳು ಘೋಷಿಸಿದ್ದಾರೆ.
ಆದಾಗ್ಯೂ, ಬೆಂಗಳೂರು ಉಪನಗರದ ರೈಲು ಯೋಜನೆಯು ಕೇಂದ್ರ ಬಜೆಟ್ ನಲ್ಲಿ ಪ್ರಸ್ತಾಪವಾಗಿರುವುದು ಇದೇ ಮೊದಲಲ್ಲ. ರೈಲ್ವೆ ಸಚಿವರಾಗಿರುವ ಡಿ.ವಿ.ಸದಾನಂದಗೌಡ ಅವರೂ ಸಹ ಈ ಹಿಂದಿನ ಬಜೆಟ್ ನಲ್ಲಿ ಈ ಯೋಜನೆಗೆ ಕೇಂದ್ರದ ಬೆಂಬಲ ನೀಡುವ ಭರವಸೆ ನೀಡಿದ್ದರು.
ಮತ್ತೊಂದು ಮಹತ್ವದ ನಡೆಯೆಂದರೆ, ಕೇಂದ್ರ ಬಜೆಟ್ ಘೋಷಣೆ ಮುನ್ನಾ ದಿನವಾದ ಬುಧವಾರದಂದು, ಕರ್ನಾಟಕದ ಕಾಂಗ್ರೆಸ್ ನೇತೃತ್ವದ ಸಿದ್ದರಾಮಯ್ಯ ಸರ್ಕಾರ ಬೆಂಗಳೂರು ಉಪನಗರ ರೈಲ್ವೆ ಯೋಜನೆಗೆ ಆಡಳಿತಾತ್ಮಕ ಅನುಮೋದನೆಯನ್ನು ನೀಡುವ ಮೂಲಕ 350 ಕೋಟಿ ರೂ.ಗಳನ್ನು (ಒಟ್ಟು ಮೊತ್ತದಲ್ಲಿ ಶೇ. 20 ಭಾಗದಂತೆ) ಬಿಡುಗಡೆ ಮಾಡಿದೆ. 440 ಕಿ.ಮೀ. ಯೋಜನೆಯ ಸಂಪೂರ್ಣ ವೆಚ್ಚ 10,500 ಕೋಟಿ ರೂ. ಆಗಿದೆ.