ಕೊರೊನಾ ಪ್ರಕೊಪದ ಹಿನ್ನೆಲೆ ವಿಶ್ವಾದ್ಯಂತ ಹಲವು ದೇಶಗಳಲ್ಲಿ ಲಾಕ್ ಡೌನ್ ಘೋಷಿಸಲಾಗಿದೆ. ಕೆಲೆವೆಡೆ ಲಾಕ್ ಡೌನ್ ತೆರೆವುಗೊಳಿಸಲಾದರೆ, ಇನ್ನೂ ಹಲವೆಡೆ ಎರಡನೇ-ಮೂರನೇ ಬಾರಿಗೆ ಲಾಕ್ ಡೌನ್ ಮುಂದುವರೆಸಲಾಗುತ್ತಿದೆ. ಆದರೆ, ಇಲ್ಲೊಂದು ವಿಚಿತ್ರ ದೇಶವಿದ್ದು, ಈ ದೇಶದಲ್ಲಿ ಲಾಕ್ ಡೌನ್ ಪಾಲಿಸದೆ ಇರುವ ಜನರನ್ನು ಹತ್ಯೆಗೈಯ್ಯಲಾಗುತ್ತಿದೆ. ಇಲ್ಲಿ ವಿಪರ್ಯಾಸದ ಸಂಗತಿ ಎಂದರೆ ಅಲ್ಲಿನ ಸರ್ಕಾರ ಕೂಡ ಈ ಹತ್ಯೆಗಳನ್ನು ತಡೆಯುವಲ್ಲಿ ವಿಫಲ ಎಂದು ಸಾಬೀತಾಗಿದೆ.
ಈ ದೇಶದ ಹೆಸರು ಕೊಲಂಬಿಯಾ. ಅಲ್ಲಿನ ಸರ್ಕಾರ ಕೊರೊನಾ ಪ್ರಕೋಪದ ಹಿನ್ನೆಲೆ ಇಡೀ ದೇಶಾದ್ಯಂತ ಲಾಕ್ ಡೌನ್ ಘೋಷಿಸಿದೆ. ಆದರೆ, ಅಲ್ಲಿರುವ ಡ್ರಗ್ ಮಾಫಿಯಾ ತನ್ನದೇ ಆದ ಲಾಕ್ ಡೌನ್ ಅನ್ನು ಘೋಷಿಸಿದೆ. ತಾನು ವಿಧಿಸಿರುವ ಲಾಕ್ ಡೌನ್ ಉಲ್ಲಂಘಿಸಿರುವ ಲಾಕ್ ಡೌನ್ ಉಲ್ಲಂಘಿಸುವವರನ್ನು ಡ್ರಗ್ ಮಾಫಿಯಾ ಹತ್ಯೆಗೈಯ್ಯುತ್ತಿದೆ. ಹೌದು, ಇದುವರೆಗೆ ಡ್ರಗ್ ಮಾಫಿಯಾ ಘೋಷಿಸಿರುವ ಲಾಕ್ ಡೌನ್ ನಿಯಮ ಉಲ್ಲಂಘಿಸಿದ ಸುಮಾರು 8 ಜನರನ್ನು ಹತ್ಯೆಗೈಯ್ಯಲಾಗಿದೆ.
ದಿ ಗಾರ್ಡಿಯನ್ ನಲ್ಲಿ ಪ್ರಕಟಗೊಂಡ ಹ್ಯೂಮನ್ ರೈಟ್ ವಾಚ್ ವರದಿಯ ಪ್ರಕಾರ ಸಶಸ್ತ್ರಧಾರಿ ಡ್ರಗ್ ಮಾಫಿಯಾ ಗುಂಪುಗಳು ವಾಟ್ಸ್ ಆಪ್ ಸಂದೇಶಗಳು ಹಾಗೂ ಭಿತ್ತಿಪತ್ರಗಳ ಮೂಲಕ ಅಲ್ಲಿನ ಜನರಿಗೆ ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸದಿರಲು ಒತ್ತಡ ಹೇರುತ್ತಿದೆ. ಇವುಗಳಲ್ಲಿ ಹಲವು ಗುಂಪುಗಳು 50 ವರ್ಷಕ್ಕಿಂತ ಹಳೆಯ ಗುಂಪುಗಳಾಗಿವೆ.
ಈ ಡ್ರಗ್ ಮಾಫಿಯಾ ಗುಂಪುಗಳು ಗ್ರಾಮೀಣ ಭಾಗದಲ್ಲಿರುವ ಜನರನ್ನು ಗುರಿಯಾಗಿಸುತ್ತಿವೆ ಮತ್ತು ಅವರ ಮೇಲೆ ಅತ್ಯಾಚಾರ ನಡೆಸುತ್ತಿವೆ. ತುಮಾಕೋ ಪಟ್ಟಣ ಇವರ ಕ್ರೂರತೆಗೆ ಅತ್ಯಂತ ಹೆಚ್ಚು ಗುರಿಯಾದ ನಗರವಾಗಿದೆ. ಇಲ್ಲಿನ ಒಂದು ಬಂದರಿನಲ್ಲಿ ನಿತ್ಯ ಪೋಲೀಸರು ಹಾಗೂ ಡ್ರಗ್ ಮಾಫಿಯಾಗಳ ನಡುವೆ ನಿರಂತರ ಘರ್ಷಣೆ ಮತ್ತು ಹಿಂಸಾಚಾರ ಸಂಭವಿಸುತ್ತಲೇ ಇರುತ್ತದೆ.
ಈ ಪಟ್ಟಣದಲ್ಲಿ ಡ್ರಗ್ ಮಾಫಿಯಾಗಳು ಜನಸಾಮಾನ್ಯರಿಗೆ ನದಿಗಳಲ್ಲಿ ಮೀನುಗಾರಿಕೆಗೆ ತೆರಳದಂತೆ ಸೂಚಿಸಿವೆ. ಸಂಜೆ 5 ಗಂಟೆಯ ನಂತರ ಯಾವುದೇ ಅಂಗಡಿ-ಮುಂಗಟ್ಟುಗಳು ಅಲ್ಲಿ ತೆರೆಯುವ ಹಾಗಿಲ್ಲ. ಬೀದಿ ಬದಿ ವ್ಯಾಪಾರಿಗಳೂ ಕೂಡ ಅಲ್ಲಿ ಕಾಣಿಸುವಂತಿಲ್ಲ. ಒಂದು ವೇಳೆ ಕಾಣಿಸಿಕೊಂಡರೆ ಅವರನ್ನು ಗುಂಡಿಟ್ಟು ಹತ್ಯೆಗೈಯ್ಯಲಾಗುತ್ತದೆ.
ಈ ಡ್ರಗ್ ಮಾಫಿಯಾ ಗುಂಪುಗಳು ಇಡೀ ದೇಶಾದ್ಯಂತ ಜನ ಸಾಮಾನ್ಯರಿಗೆ ಧಮ್ಕಿ ನೀಡುವಲ್ಲಿ ನಿರತವಾಗಿವೆ. ಇಲ್ಲಿನ ಕಾಕಾ ಹಾಗೂ ಗುವಾವಿಯರೇ ಪ್ರಾಂತಗಳಲ್ಲಿ ಈ ಸಶಸ್ತ್ರ ಗುಂಪುಗಳು ವಾಹನಗಳಿಗೆ ಬೆಂಕಿ ಕೂಡ ಹಚ್ಚುತ್ತಿದ್ದಾರೆ. ಲಾಕ್ ಡೌನ್ ನಿಯಮಗಳನ್ನು ಪಾಲಿಸದವರ ವಾಹನಗಳಿಗೆ ಅವರು ಬೆಂಕಿ ಇಡುತ್ತಿದ್ದಾರೆ.
ನಗರ ಹಾಗೂ ಗ್ರಾಮಗಳ ನಡುವಿನ ಸಾರಿಗೆ ಸಂಪರ್ಕವನ್ನು ಕೂಡ ಅವರು ಬಂದ್ ಮಾಡಿದ್ದಾರೆ. ಕೊರೊನಾ ವೈರಸ್ ನ ಯಾವುದೇ ಸೋಂಕಿತ ವ್ಯಕ್ತಿ ಕಂಡುಬಂದರೆ ಆತನನ್ನು ತಕ್ಷಣಕ್ಕೆ ಗುಂಡಿಟ್ಟು ಹತ್ಯೆಗೈಯ್ಯಲಾಗುತ್ತಿದೆ.
ಕೊರೊನಾ ಪ್ರಕೋಪದ ಹಿನ್ನೆಲೆ ಕೊಲಂಬಿಯಾ ಕೂಡ ದೇಶಾದ್ಯಂತ ಲಾಕ್ ಡೌನ್ ಘೋಷಿಸಿದೆ. ದೇಶದಲ್ಲಿ ಇದುವರೆಗೆ ಸುಮಾರು 1.60 ಲಕ್ಷ ಜನರು ಕೊರೊನಾ ಸೋಂಕಿಗೆ ಗುರಿಯಾಗಿದ್ದಾರೆ. ಇನ್ನೊಂದೆಡೆ ಸುಮಾರು 5625 ಜನರು ಈ ಮಾರಕ ವೈರಸ್ ದಾಳಿಗೆ ಬಲಿಯಾಗಿದ್ದಾರೆ. ಸದ್ಯ ಅಲ್ಲಿ ನಿತ್ಯ ಸುಮಾರು 5000 ಹೊಸ ಪ್ರಕರಣಗಳು ಬೆಳಕಿಗೆ ಬರುತ್ತಿವೆ ಎಂಬುದು ಇಲ್ಲಿ ಗಮನಾರ್ಹ. ಆದರೆ, ಸರ್ಕಾರ ಘೋಷಿಸಿರುವ ಲಾಕ್ ಡೌನ್ ಸಶಸ್ತ್ರ ಡ್ರಗ್ ಮಾಫಿಯಾ ಘೋಷಿಸಿರುವ ಲಾಕ್ ಡೌನ್ ನಷ್ಟು ಕಠಿಣವಾಗಿಲ್ಲ. ಈ ಮಾಫಿಯಾಗಳ ಲಾಕ್ ಡೌನ್ ನಲ್ಲಿ ಕೇವಲ ಒಂದೇ ನಿಯಮ ಚಾಲ್ತಿಯಲ್ಲಿದೆ. ಮಾತು ಕೇಳದ ಜನಸಾಮಾನ್ಯರಿಗೆ ಅವರು ನೇರವಾಗಿ ಮಸಣಕ್ಕೆ ಕಳುಹಿಸುತ್ತಾರೆ.