ನವದೆಹಲಿ: ಲಡಾಖ್ನಿಂದ ಹಿಂದಿರುಗಿದ ಪ್ರಧಾನಿ ಮೋದಿ ಅವರು ಭಾನುವಾರ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರನ್ನು ಭೇಟಿಯಾಗಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ಸುಮಾರು ಅರ್ಧ ಘಂಟೆಗಳ ಕಾಲ ಈ ಮಾತುಕತೆ ನಡೆದಿದೆ. ಈ ಸಂದರ್ಭದಲ್ಲಿ ಉಭಯ ಮುಖಂಡರು ವಿವಿಧ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ವಿಷಯಗಳ ಕುರಿತು ಮಾತುಕತೆ ನಡೆಸಿದ್ದಾರೆ ಎಂದು ರಾಷ್ಟ್ರಪತಿ ಭವನದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಾತುಕತೆಯ ಬಳಿಕ ಟ್ವೀಟ್ ಮಾಡಿರುವ ರಾಷ್ಟ್ರಪತಿ ಭವನ, "ರಾಷ್ಟ್ರಪತಿ ಶ್ರೀ ರಾಮನಾಥ್ ಕೊವಿಂದ್ ಅವರ ಜೊತೆಗೆ ಭೇಟಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿಗಳಿಗೆ ವಿವಿಧ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಹತ್ವದ ವಿಷಯಗಳ ಕುರಿತು ಮಾಹಿತಿ ನೀಡಿದ್ದಾರೆ" ಎಂದು ಹೇಳಿದೆ.
ಪೂರ್ವ ಲಡಾಖ್ ನ ಗಲ್ವಾನ್ ಕಣಿವೆಯಲ್ಲಿ ಜೂನ್ 15 ರಂದು ಚೀನಾ ಹಾಗೂ ಭಾರತೀಯ ಸೈನಿಕರ ನಡುವೆ ನಡೆದ ಹಿಂಸಾತ್ಮಕ ಘರ್ಷಣೆಯ ಬಳಿಕ ಲೇಹ್-ಲಡಾಖ್ ಗೆ ಭೇಟಿ ನೀಡಿದ್ದ ಪ್ರಧಾನಿ ಮೋದಿ ವೀರ ಯೋಧರನ್ನು ಸಂಬೋಧಿಸಿ ಮಾತನಾಡ ಬೆನ್ನಲ್ಲೇ ನಡೆದ ಈ ಸಭೆ ಭಾರಿ ಮಹತ್ವ ಪಡೆದುಕೊಂಡಿದೆ. ಈ ಹಿಂಸಾತ್ಮಕ ಘರ್ಷಣೆಯಲ್ಲಿ ಒಟ್ಟು 20 ಭಾರತೀಯ ಯೋಧರು ಹುತಾತ್ಮರಾಗಿದ್ದರು. ಇನ್ನೊಂದೆಡೆ ಈ ಘರ್ಷಣೆಯಲ್ಲಿ ಚೀನಾ ಕೂಡ ಭಾರಿ ನಷ್ಟ ಅನುಭವಿಸಿದೆ.