ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲ ಬೆಲೆ ವ್ಯಾಪಕವಾಗಿ ಕುಸಿದಿದ್ದರೂ ಕಳೆದ 23 ದಿನದಿಂದ ನಿರಂತರವಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಮಾಡುತ್ತಿರುವುದನ್ನು ವಿರೋಧಿಸಿ ಇಂದು ಆಲ್ ಇಂಡಿಯಾ ಯೂತ್ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ನೇತೃತ್ವದಲ್ಲಿ ದೆಹಲಿಯಲ್ಲಿ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ (Petrol diesel hike) ಮಾಡುತ್ತಿರುವುದನ್ನು ವಿರೋಧಿಸುವ ದೃಷ್ಟಿಯಿಂದ ಆಲ್ ಇಂಡಿಯಾ ಯೂತ್ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ (BV Shinivas) ಮತ್ತು ಯೂತ್ ಕಾಂಗ್ರೆಸ್ ಕಾರ್ಯಕರ್ತರು ರಾಷ್ಟ್ರ ರಾಜಧಾನಿ ದೆಹಲಿ ರಸ್ತೆಗಳಲ್ಲಿ ಎತ್ತಿನಗಾಡಿ ಓಡಿಸುವ ಮೂಲಕ ಶಾಂತಯುತ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ವೇಳೆ ಮಾತನಾಡಿದ ಆಲ್ ಇಂಡಿಯಾ ಯೂತ್ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶ್ರೀನಿವಾಸ್, ಅಂತರರಾಷ್ಟ್ರೀಯ ಮಟ್ಟದಲ್ಲಿ ಈಗ ಕಚ್ಚಾತೈಲ ಬೆಲೆ ಒಂದು ಬ್ಯಾರಲ್ ಗೆ 130 ಡಾಲರ್ ಇದೆ. ಆದರೂ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಏರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪೆಟ್ರೋಲ್ ಬೆಲೆ ಏರಿಕೆ ವಿರೋಧಿಸಿ 35 ವರ್ಷಗಳ ಬಳಿಕ ಸಿದ್ದರಾಮಯ್ಯ ಸೈಕಲ್ ಸವಾರಿ, ಸಿದ್ದು ಸ್ಪೀಡಿಗೆ ಸುಸ್ತಾದ ಇತರರು
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲ ಕುಸಿದಿದ್ದರೂ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರತಿದಿನವೂ ಪೆಟ್ರೋಲ್ - ಡೀಸೆಲ್ ಬೆಲೆ ಹೆಚ್ಚಿಸುವ ಮೂಲಕ ಸಾರ್ವಜನಿಕರ ಹಣವನ್ನು ಲೂಟಿ ಮಾಡುತ್ತಿದೆ. ಮೋದಿ ಸರಕಾರದ ಈ ನೀತಿ ನಾಚಿಕೆಗೇಡಿನದಿಂದ ಕೂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಂಧನ ಬೆಲೆ ಏರಿಕೆಯಿಂದ ಅಗತ್ಯ ವಸ್ತುಗಳ ಬೆಲೆಗಳು ಕೂಡ ಏರಿಕೆಯಾಗುತ್ತಿವೆ. ಸಾಮಾನ್ಯ ಜನರನ್ನು ಈ ಮೂಲಕ ಪ್ರಧಾನಿ ಮೋದಿ ಕಷ್ಟಕ್ಕೆ ದೂಡುತ್ತಿದ್ದಾರೆ ಎಂದು ಹೇಳಿದರು.
ಐವೈಸಿ ಪ್ರಧಾನ ಕಾರ್ಯದರ್ಶಿ ಹರೀಶ್ ಪವಾರ್, ಐವೈಸಿ ಕಾರ್ಯದರ್ಶಿ ಖುಸ್ಬೂ ಶರ್ಮಾ, ಐವೈಸಿ ಕಾರ್ಯದರ್ಶಿ ಮುಖೇಶ್ ಕುಮಾರ್, ಐವೈಸಿ ಕಾರ್ಯದರ್ಶಿ ಮೋಹಿತ್ ಚೌಧರಿ ಮತ್ತಿತರ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.