ನವದೆಹಲಿ: COVID 19 ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ನಿನ್ನೆ 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳ ಜೊತೆ ಸಮಾಲೋಚನೆ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ (Narendra Modi) ಇಂದು ಕರ್ನಾಟಕವೂ ಸೇರಿದಂತೆ 15 ರಾಜ್ಯಗಳ ಸಿಎಂಗಳ ಜೊತೆ ಸಭೆ ನಡೆಸಲಿದ್ದಾರೆ.
ನಿನ್ನೆ ಪಂಜಾಬ್, ಅಸ್ಸಾಂ, ಕೇರಳ, ಉತ್ತರಾಖಂಡ, ಜಾರ್ಖಂಡ್, ಛತ್ತೀಸ್ಘಡ, ತ್ರಿಪುರ, ಹಿಮಾಚಲ ಪ್ರದೇಶ, ಚಂಡೀಗಢ, ಗೋವಾ, ಮಣಿಪುರ, ನಾಗಾಲ್ಯಾಂಡ್, ಲಡಾಖ್, ಪುದುಚೇರಿ, ಅರುಣಾಚಲ ಪ್ರದೇಶ, ಮೇಘಾಲಯ, ಮಿಜೋರಾಂ, ದಾದಾಮನ್, ನಡಾಬಾರ್ ಸಿಕ್ಕಿಂ ಮತ್ತು ಲಕ್ಷದ್ವೀಪಗಳ ಮುಖ್ಯಮಂತ್ರಿಗಳ ಜೊತೆ ಚರ್ಚಿಸಲಾಗಿತ್ತು.
ಇಂದು ಕರ್ನಾಟಕ, ಮಹಾರಾಷ್ಟ್ರ (Maharashtra), ತಮಿಳುನಾಡು, ದೆಹಲಿ, ಗುಜರಾತ್, ರಾಜಸ್ಥಾನ, ಉತ್ತರ ಪ್ರದೇಶ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಬಿಹಾರ, ಆಂಧ್ರಪ್ರದೇಶ, ಹರಿಯಾಣ, ಜಮ್ಮು ಕಾಶ್ಮೀರ, ತೆಲಂಗಾಣ ಮತ್ತು ಒಡಿಶಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಸಮಾಲೋಚನೆ ನಡೆಸಲಾಗುತ್ತದೆ.
ದೇಶದಲ್ಲೇ ಅತಿಹೆಚ್ಚು ಕೊರೊನಾವೈರಸ್ (Coronavirus) COVID 19 ಇರುವ ಮಹಾರಾಷ್ಟ್ರ, ದೆಹಲಿ, ಗುಜರಾತ್ ಮತ್ತು ತಮಿಳುನಾಡಿನಂತಹ ರಾಜ್ಯಗಳೊಂದಿಗೆ ಇಂದು ಚರ್ಚೆ ನಡೆಸಲಾಗುತ್ತದೆ ಎಂಬುದು ವಿಶೇಷ. ಈ ರಾಜ್ಯಗಳಲ್ಲಿ COVID 19 ವ್ಯಾಪಕವಾಗಿ ಹರಡಲು ಕಾರಣ ಏನೆಂಬ ಬಗ್ಗೆ ಸಮಾಲೋಚನೆ ನಡೆಯಲಿದೆ.
ಕೋವಿಡ್ -19 (Covid-19) ಬಿಕ್ಕಟ್ಟು ಆರಂಭವಾದ ಮೇಲೆ ಪ್ರಧಾನಿ ನರೇಂದ್ರ ಮೋದಿ ಕಳೆದ 88 ದಿನಗಳಲ್ಲಿ 6ನೇ ಬಾರಿಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸುತ್ತಿದ್ದಾರೆ. ಇದಕ್ಕೂ ಮೊದಲು ಮಾರ್ಚ್ 20, ಏಪ್ರಿಲ್ 2, ಏಪ್ರಿಲ್ 11, ಏಪ್ರಿಲ್ 27 ಮತ್ತು ಮೇ 11 ರಂದು ವಿಡಿಯೋ ಕಾನ್ಫರೆನ್ಸ್ ಮಾಡಿದ್ದರು.
ಇಂದಿನ ಸಭೆಯಲ್ಲಿ COVID 19 ಹೆಚ್ಚಾಗಿರುವ ಮಹಾರಾಷ್ಟ್ರ, ದೆಹಲಿ, ಗುಜರಾತ್, ತಮಿಳುನಾಡು ಸಿಎಂಗಳಿಂದ ಆ ರಾಜ್ಯಗಳ ಸ್ಥಿತಿಗತಿ ಬಗ್ಗೆ ವರದಿ ಪಡೆಯಬಹುದು. ಆ ರಾಜ್ಯಗಳಿಗೆ ಪ್ರತ್ಯೇಕ ಯೋಜನೆ ರೂಪಿಸುವ ಬಗ್ಗೆ ಚರ್ಚಿಸಬಹುದು. ಮುಂಬೈ, ಚೆನ್ನೈ, ದೆಹಲಿ, ಅಹಮದಾಬಾದ್, ಕೋಲ್ಕತ್ತಾ ನಗರಗಳಿಗೆ ಪ್ರತ್ಯೇಕ ಯೋಜನೆ ರೂಪಿಸುವ ಬಗ್ಗೆ ಚರ್ಚಿಸಬಹುದು. ರೈಲು ಮತ್ತು ವಿಮಾನ ಪ್ರಯಾಣ ಹೆಚ್ಚಿಸುವ ಬಗ್ಗೆ ಚರ್ಚೆ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.