ಬೆಂಗಳೂರು: ವಿಧಾನಸೌಧಕ್ಕೆ 60 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ವಿಧಾನ ಸೌಧದ ಇತಿಹಾಸ ದಾಖಲಿಸಲು ಸರ್ಕಾರ ಮುಂದಾಗಿದ್ದು, ಶಕ್ತಿಸೌಧದ ಕುರಿತು ಎರಡು ಗಂಟೆಗಳ ಸಾಕ್ಷ್ಯಚಿತ್ರ ನಿರ್ಮಾಣಕ್ಕೆ ಸಜ್ಜಾಗಿದೆ. ಸಾಕ್ಷ್ಯ ಚಿತ್ರದಲ್ಲಿ ವಿಧಾನಸೌಧದ ಇತಿಹಾಸ ಮತ್ತು ನಿರ್ಮಾಣದ ಕುರಿತಾದ ಮಾಹಿತಿ ದೊರೆಯಲಿದೆ.
ವಿಧಾನ ಸೌಧಕ್ಕೆ 60 ವರ್ಷದ ಹಿನ್ನೆಲೆಯಲ್ಲಿ ನಿರ್ಮಾಣವಾಗುತ್ತಿರುವ ಶಕ್ತಿ ಸೌಧದ ಸಾಕ್ಷ್ಯ ಚಿತ್ರದ ಸಾರಥ್ಯವನ್ನು ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ ವಹಿಸಿದ್ದಾರೆ. ಶಕ್ತಿ ಸೌಧದ ನಿರ್ಮಾಣದ ವೇಳೆ ನಡೆದಿರುವ ಎಲ್ಲಾ ಘಟನಾವಳಿಗಳ ದಾಖಲೆಯ ಚಿತ್ರೀಕರಣವು ಭರದಿಂದ ಸಾಗಿದೆ.
ಈ ಕುರಿತು ಹೇಳಿಕೆ ನೀಡಿದ ಗಿರೀಶ್ ಕಾಸರವಳ್ಳಿ, ಇದರಲ್ಲಿ ಇಡೀ ವಿಧಾನಸೌಧದ ಇತಿಹಾಸವನ್ನು ದಾಖಲು ಮಾಡಲು ಪ್ರಯತ್ನಿಸುತ್ತಿದ್ದೇವೆ. ಅದಕ್ಕಾಗಿಯೇ ಸಾಕ್ಷ್ಯಚಿತ್ರವನ್ನು ನಿರ್ಮಾಣ ಮಾಡಲಾಗುತ್ತಿದೆ. ವಿಧಾನಸೌಧಕ್ಕೆ 60 ವರ್ಷ ತುಂಬಿರುವುದರಿಂದ ಸರ್ಕಾರದ ಕೋರಿಕೆಯಂತೆ ಸಾಕ್ಷ್ಯಚಿತ್ರ ನಿರ್ಮಾಣವಾಗುತ್ತಿದೆ. ವಿಧಾನಸೌಧನ ನಿರ್ಮಾಣಕ್ಕೆ ಖೈದಿಗಳ ಬಳಕೆ ಮಾಡಲಾಗಿದೆ. ಹಲವು ನಾಯಕರು ಈ ಸೌಧದ ನಿರ್ಮಾಣದ ಹಿಂದೆ ಕೆಲಸ ಮಾಡಿದ್ದಾರೆ. ಈ ಸಂದರ್ಭದಲ್ಲಿ ನಡೆದು ಹೋಗಿರುವ ಹಲವು ಘಟನಾವಳಿಗಳನ್ನು ದಾಖಲೆ ಮಾಡುತ್ತೇವೆ. ಇಡೀ ದೇಶದಲ್ಲೇ ಭವ್ಯವಾದ ಸೌಧದ ಕುರಿತು ಇತಿಹಾಸ ಪರಿಚಯಿಸಲು ಈ ಕ್ರಮ ಕೈಗೊಳ್ಳಲಾಗುತ್ತಿದೆ. ವಿಧಾನಸೌಧದ ಬಗ್ಗೆ ಬಹಳ ಜನರಿಗೆ ಮಾಹಿತಿಯೇ ಗೊತ್ತಿಲ್ಲ. ವಿಧಾನ ಸೌಧದ ಕುರಿತು ಮಾಹಿತಿ ಕೊಡುವ ಕಾರಣಕ್ಕಾಗಿ ಸಾಕ್ಷ್ಯಚಿತ್ರ ಮಾಡುತ್ತಿದ್ದೇವೆ ಎಂದು ವಿವರಿಸಿದರು.
ವಿಧಾನ ಸೌಧಕ್ಕೆ 60 ವರ್ಷ ಹಿನ್ನೆಲೆಯಲ್ಲಿ ಅಕ್ಟೋಬರ್ 6 ಮತ್ತು 7 ರಂದು ವಿಶೇಷ ಅಧಿವೇಶನ ನಡೆಯಲಿದೆ. ಈ ಸಭೆಯಲ್ಲಿ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.