ಕನ್ನಡ ಎನೆ ಕುಣಿದಾಡುವುದೆನ್ನೆದೆ
ಕನ್ನಡ ಎನೆ ಕಿವಿ ನಿಮಿರುವುದು ||
ಕಾಮನ ಬಿಲ್ಲನು ಕಾಣುವ ಕವಿಯೊಳು
ತೆಕ್ಕನೆ ಮನ ಮೈ ಮರೆಯುವುದು
ಕನ್ನಡ ಕನ್ನಡ ಹ! ಸವಿಗನ್ನಡ...
ಎಂದು ಕನ್ನಡಿಗರನ್ನು ಸಾಹಿತ್ಯದಲೆಗಳ ಮೇಲೆ ತೇಲುವಂತೆ ಮಾಡಿದ ಶಬ್ಧಮಾಂತ್ರಿಕ.. ಕರುನಾಡಿಗೆ ‘ಜಯಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕಮಾತೆ’ ಎಂಬ ನಾಡಗೀತೆಯ ಪದಪುಂಜಗಳಿಂದ ಕನ್ನಡಮಾತೆಗೆ ಶಬ್ಧಾರ್ಚನೆ ಮಾಡಿದ ಸಹ್ಯಾದ್ರಿ ಸಾಲ ಕವಿಕುಲೋತ್ತಮ ಕುವೆಂಪು, ಕನ್ನಡ ಸಾಹಿತ್ಯ ಲೋಕದ ಅಪ್ಪಟ ಕವಿಕೋಗಿಲೆ. ಕುವೆಂಪುರವರು ಕನ್ನಡ ನಾಡಿನ ಹೆಮ್ಮೆಯ ರಸಕವಿ, ಋಷಿಕವಿ, ರಾಷ್ಟ್ರಕವಿ ಕನ್ನಡದ ಮತ್ತೋರ್ವ ವರಕವಿಗಳಾದ ದ.ರಾ.ಬೇಂದ್ರೆಯವರಿಂದಲೇ ಯುಗದಕವಿ, ಜಗದಕವಿ ಎಂದು ಕೀರ್ತಿತರಾಗಿದ್ದಂತಹವರು. ಕನ್ನಡದ ಹಿರಿಮೆಯನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸ್ತರಗಳಲ್ಲಿ ಎತ್ತಿ ಹಿಡಿದ ಮಹಾನ್ ಚೇತನ. ಕುವೆಂಪು ಒಬ್ಬ ದಾರ್ಶನಿಕ ಲೇಖಕರು. ವರ್ತಮಾನದ ನಿತ್ಯವನ್ನೂ, ತ್ರಿಕಾಲದ ಭವ್ಯವನ್ನೂ, ಭೂಮವನ್ನೂ, ಅಲ್ಪವನ್ನೂ ಒಂದು ಪೂರ್ಣ ದೃಷ್ಟಿಯಲ್ಲಿ ಒಳಗೊಳ್ಳಲು ಪ್ರಯತ್ನಿಸಿದ ತಪಸ್ವಿಗಳು. ‘ಕಾಡಿನ ಕೊಳಲಿದು, ಕಾಡ ಕವಿಯು ನಾ, ನಾಡಿನ ಜನರೊಲಿದಾಲಿಪುದು’ ಎಂಬ ಭಿನ್ನಹದೊಂದಿಗೆ ಕಳೆದ ಶತಮಾನದ 3ನೇಯ ದಶಕದಲ್ಲಿ ಕನ್ನಡ ನವೋದಯವನ್ನು ಪ್ರವೇಶಿಸಿದ ಈ ಕಾಡಿನ ಕವಿ ಅನಂತರ ನಾಡಿನ ಕವಿಯಾಗಿ ಕುವೆಂಪು ಎಂಬ ಮೂರಕ್ಷರದಿಂದಲೇ ಕನ್ನಡಿಗರ ಮನೆ ಮಾತಾದ ರಾಷ್ಟ್ರಕವಿ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ, ಹೊಸಗನ್ನಡ ಸಾಹಿತ್ಯದ ಹಿರಿಯ ಕವಿ. ಕನ್ನಡ ಸಾಹಿತ್ಯವನ್ನು ವಿಶ್ವ ಸಾಹಿತ್ಯ ವೇದಿಕೆಗೆ ಕೊಂಡೊಯ್ದ ವಿಶ್ವಮಾನವ, ಕನ್ನಡದ ಮಹಾನ್ ಚೇತನ.
ಬಾಲ್ಯ ಜೀವನದ ಕಂಪು
ಕುವೆಂಪುರವರು ಹುಟ್ಟಿದ್ದು 29 ಡಿಸೆಂಬರ್ 1904, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕುಪ್ಪಳ್ಳಿಯಲ್ಲಿ. ತಂದೆ ವೆಂಕಟಪ್ಪಗೌಡರು, ತಾಯಿ ಸೀತಮ್ಮ. ಆದರೆ ಕುವೆಂಪುರವರು ಹುಟ್ಟಿದ್ದು ತಾಯಿಯ ತವರಾದ ಚಿಕ್ಕಮಗಳೂರು ಜಿಲ್ಲೆಯ ಹಿರೇಕೊಡಗಿ ಗ್ರಾಮದಲ್ಲಿ. ಮಲೆನಾಡಿನ ಮಡಿಲಿನಲ್ಲಿ ಹುಟ್ಟಿ ಬೆಳೆದ ಕುವೆಂಪುರವರು ಶಾಲಾ-ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಕಲಿತದ್ದಕ್ಕಿಂತ ಹೆಚ್ಚಿನ ವಿಷಯವನ್ನು ಕಲಿಸಿದ್ದು ಮಲೆನಾಡಿನ ಪ್ರಕೃತಿ. ಹೀಗಾಗೆ ಅವರ ಎಲ್ಲಾ ಕೃತಿಗಳಲ್ಲಿ ಮಲೆನಾಡಿನ ಸೊಬಗು ಕಂಗೊಳಿಸುತ್ತದೆ.
ಓದುವಾಗಲೇ ಕವಿಹೃದಯ
SSLC ಓದುವಾಗಲೇ ಕುವೆಂಪುರವರು ಬರೆದಿದ್ದ ‘ಬಿಗಿನರ್ಸ್ ಮ್ಯೂಸ್’ ಎಂಬ ಇಂಗ್ಲಿಷ್ ಕವನ ಸಂಕಲನ ಭಾರತ ಭೇಟಿಗೆ ಬಂದಿದ್ದ ಐರಿಷ್ ಕವಿ ಜೆ.ಹೆಚ್.ಕಸಿನ್ಸ್(James H Cousins) ಮೆಚ್ಚುಗೆಗೆ ಪಾತ್ರವಾಗಿತ್ತು. ನಂತರ ಅವರ ಸಲಹೆಯಂತೆ ಕನ್ನಡದಲ್ಲಿ ಬರೆಯಲಾರಂಭಿಸಿದ ಕುವೆಂಪುರವರು ಬರೆದ ಮೊದಲ ಕನ್ನಡ ಕವನ ಸಂಕಲನ ‘ಅಮಲನ ಕಥೆ’. ಚಿಕ್ಕಂದಿನಿಂದಲೇ ಮಲೆನಾಡಿನ ಪರಿಸರದಲ್ಲಿ ಬೆಳೆದ ಕುವೆಂಪುರವರಿಗೆ ಅಪಾರವಾದ ಪರಿಸರ ಪ್ರೇಮ. ಅವರ ಪರಿಸರ ಪ್ರೀತಿಯೇ ಅವರ ಕಾವ್ಯದಲ್ಲಿ ಜೀವಂತವಾಗಿ ಮೇಳೈಸಿದೆ.
ಮಹಾಮಹಿಮರ ಮಾರ್ಗದರ್ಶನ
ನಾಡು ಕಂಡ ಧೀಮಂತರಾದ ಟಿ.ಎಸ್.ವೆಂಕಣ್ಣಯ್ಯ, ಬಿ.ಎಂ.ಶ್ರೀ, ಎ.ಆರ್.ಕೃಷ್ಣಶಾಸ್ತ್ರೀಯವರ ಒಡನಾಟ, ಮಾರ್ಗದರ್ಶನಗಳು ಅವರ ಸಾಹಿತ್ಯವನ್ನು ಶ್ರೀಮಂತಗೊಳಿಸಿದವು. 1925ರಲ್ಲಿ ಪ್ರಕಟವಾದ ಕುವೆಂಪುರವರ ‘ಬೊಮ್ಮನಹಳ್ಳಿ ಕಿಂದರಿ ಜೋಗಿ’ ನಾಡಿನಾದ್ಯಂತ ಮಕ್ಕಳ ಬಾಯಲ್ಲಿ ನಲಿದಾಡಿತು. ಸೆಂಟ್ರಲ್ ಕಾಲೇಜು ವಿದ್ಯಾರ್ಥಿಯಾಗಿದ್ದ ಕುವೆಂಪುರವರಿಗೆ ಕವಿ ಸಮ್ಮೇಳನದ ಅಧ್ಯಕ್ಷ ಪದವಿಯೂ ಅರಸಿ ಬಂತು.
ವಿಶ್ವಮಾನವ ಸಂದೇಶ
ಕುವೆಂಪು ತಮ್ಮ ಬದುಕಿನ ಸಂದೇಶವೆಂದು ‘ವಿಶ್ವಮಾನವನ’ ಪರಿಕಲ್ಪನೆಯೊಂದನ್ನು ಮಂಡಿಸಿದವರು. ‘ಪ್ರತಿಯೊಂದು ಮಗುವು ಹುಟ್ಟುತ್ತಲೇ ವಿಶ್ವಮಾನವ, ಬೆಳೆಯುತ್ತಾ ನಾವು ಅದನ್ನು ಅಲ್ಪ ಮಾನವನ’ನ್ನಾಗಿ ಮಾಡುತ್ತೇವೆ. ಮತ್ತೇ ಅದನ್ನು ವಿಶ್ವಮಾನವನ್ನಾಗಿ ಮಾಡುವುದೇ ವಿದ್ಯೆಯ ಕರ್ತವ್ಯವಾಗಬೇಕು. ಇದನ್ನು ಕಾರ್ಯಗತಗೊಳಿಸಲು ಅಗತ್ಯವಾದ ಸಪ್ತ ಸೂತ್ರಗಳನ್ನು ಮಂಡಿಸುತ್ತಾ ‘ಮನುಷ್ಯಜಾತಿ ತಾನೊಂದೇ ವಲಂ’ ಎಂಬ ಕವಿ ಪಂಪನ ಸೂತ್ರವನ್ನು ನಿರುಪಾಧಿಕವಾಗಿ ಸ್ವೀಕರಿಸಬೇಕು ಎನ್ನುತ್ತಾರೆ ಕುವೆಂಪು. ಆದರೆ ಮನುಷ್ಯ ಮನುಷ್ಯನಾಗಿ ಬದುಕುವುದೇ ಸಾಧ್ಯವಾಗದಂತಹ ವಿದ್ಯಮಾನಗಳು ಸಂಭವಿಸುತ್ತಿರುವ ಈ ಹೊತ್ತಿನಲ್ಲಿ ಅನೇಕ ವಿಚ್ಛಿದ್ರಕಾರಕ ಶಕ್ತಿಗಳಿಂದ ಮನುಷ್ಯತ್ವವೇ ಚೂರು ಚೂರಾಗುತ್ತಿರುವ ಸಂದರ್ಭದಲ್ಲಿ ಕುವೆಂಪು ಅವರ ವಿಶ್ವಮಾನವ ಕಲ್ಪನೆ ಒಂದು ದೂರದ, ಎತ್ತರದ ಬೆಳಕು ಮಾತ್ರ !.
ಕಾಡು ಕವಿ
ಪಂಪನಿಗೆ ಧರ್ಮ ಮತ್ತು ಕಾವ್ಯಧರ್ಮ ಹೇಗೆ ಬೇರೆ ಬೇರೆಯಾಗಿರಲಿಲ್ಲವೋ ಹಾಗೆಯೇ ಕುವೆಂಪು ಅವರಿಗೆ ಪ್ರಕೃತಿ ಮತ್ತು ಕಾವ್ಯ ಪ್ರಕೃತಿ ಬೇರೆ ಬೇರೆಯಾಗಿರಲಿಲ್ಲ. ಕಣ್ಣಿಗೆ ಕಾಣುವ ಪ್ರಕೃತಿ ಹಾಗೂ ಕಣ್ಣಿಗೆ ಕಾಣದ ಪ್ರಕೃತಿಗಳ ಅಂತರ ಸಂಬಂಧವನ್ನು, ಅಂತರ ವಿರೋಧವನ್ನು ತಮ್ಮ ಕೃತಿಗಳಲ್ಲಿ ಅನುಸಂಧಾನ ಮಾಡುತ್ತಾರೆ. ಕಾಡಿನ ರುದ್ರ ಭೀಕರತೆಯನ್ನು ಸೌಮ್ಯ ಸೌಂದರ್ಯವನ್ನು ತಮ್ಮ ಪಾತ್ರಗಳ ವ್ಯಕ್ತಿತ್ವಗಳ ಬೆಳವಣಿಗೆಗೆ ಭಿತ್ತಿಯಾಗಿ ಬೆಳೆಸುತ್ತಾರೆ. ಕಾಡಿನ ಮಹತ್ವ, ಪ್ರಕೃತಿಯ ಅನಂತತೆಯನ್ನು ಸಾರುತ್ತಾರೆ. ಪ್ರಕೃತಿ ತನಗೋಸ್ಕರ ಇದೆ ಎಂಬ ಯಜಮಾನ ಧೋರಣೆಯನ್ನು ಖಂಡಿಸಿ ತಾನು ಅದರ ಒಂದು ಭಾಗ ಮಾತ್ರ ಎಂಬುದನ್ನು ಮನದಟ್ಟಾಗಿಸಿ ಮನುಷ್ಯ ಸಾಧ್ಯತೆಗಳ ಮಿತಿಯನ್ನು ತೋರಿಸುವುದು ಕುವೆಂಪು ಅವರ ಉದ್ಧೇಶವಾಗಿದೆ.
ಕುವೆಂಪು ತಮ್ಮ ಎರಡು ಕಾದಂಬರಿಗಳಲ್ಲೂ ಮಲೆನಾಡಿನ ಬದುಕನ್ನು ಚಿತ್ರಿಸಿದ್ದಾರೆ. ಹೀಗೆ ಚಿತ್ರಿಸುವಾಗ ಇದು ಸೌಂದರ್ಯ ವರ್ಣನೆ, ಇದು ಕಾಡಿನ ವರ್ಣನೆ, ಇದು ಸಂಪ್ರದಾಯದ ವರ್ಣನೆ ಎಂದೇನು ವಿಭಾಗಿಸಿಲ್ಲ. ಕುವೆಂಪು ಸಾಹಿತ್ಯದಲ್ಲಿ ಪರಿಸರ ಎಂದ ಕೂಡಲೇ ನಮ್ಮ ಮನಸ್ಸಿನಲ್ಲಿ ಮೂಡುವುದು ಅಲ್ಲಿನ ಮರಗಿಡ ಬಳ್ಳಿಗಳು, ನದಿ ತೊರೆಗಳು, ಬೆಟ್ಟ ಗುಡ್ಡಗಳು, ಪ್ರಾಣಿಪಕ್ಷಿಗಳು, ಇನ್ನಿತರ ಸಂಗತಿಗಳನ್ನು ಹೇಗೆ ವರ್ಣಿಸಿದ್ದಾರೆ ಎಂಬುದು ಬೇರೆಲ್ಲಾ ಅವರ ಕೃತಿಗಳಿಗಿಂತ ಕಾದಂಬರಿಗಳಲ್ಲಿ ಇವೆಲ್ಲದರ ವರ್ಣನೆ ಹೆಚ್ಚಾಗಿಯು ಇದೆ.
ಕುವೆಂಪು ಅವರ ಎರಡು ಕಾದಂಬರಿಗಳಲ್ಲಿ ಬರುವ ಪರಿಸರ ಚಿತ್ರಣ, ಕಾಡು, ಗಿಡ, ಮರ, ಬೆಟ್ಟ ಗುಡ್ಡಕ್ಕೆ ಮೀಸಲಿಲ್ಲ, ಅಜ್ಞಾನ, ಮೂಢನಂಬಿಕೆ, ಶೋಷಣೆ ಇವೆಲ್ಲವುಗಳಿಂದ ಮುಕ್ತವಾಗಿ ಬದುಕಲಿಕ್ಕೆ ಬೇಕಾದ ಸಹನೀಯ ವಾತಾವರಣ ನಿರ್ಮಿಸುವುದಾಗಿದೆ. ಒಂದು ಜೀವ ಬದುಕಲಿಕ್ಕೆ ಸಾಧ್ಯವಾಗದಂತಹ ಪರಿಸರ ನಿರ್ಮಾಣವಾಗಿರುವುದನ್ನು ವಿರೋಧಿಸುವ ಮೂಲಕ ಸಮಾನತೆಯ ಕಾಳಜಿಗಳನ್ನು ಎತ್ತಿ ಹಿಡಿಯುವ ಕೆಲಸ ಮಾಡಿದ್ದಾರೆ.
ವಿಚಾರವಾದಿಯ ರೂಪ
ಇಂಗ್ಲಿಷ್ ಶಿಕ್ಷಣ, ಪ್ರಾಚ್ಯ ಪಾಶ್ಚಾತ್ಯ, ತತ್ತ್ವಜ್ಞಾನಗಳ ತಳಸ್ಪರ್ಶಿಯಾದ ತಿಳುವಳಿಕೆ, ಆಧುನಿಕ ವಿಜ್ಞಾನ ಮತ್ತು ಜಾಗತಿಕ ಸಮಾಜವಾದಿ ಚಿಂತನೆಗಳೊಂದಿಗೆ ನಡೆಸಿದ ಸಂವಾದ, ಶ್ರೀ ರಾಮಕೃಷ್ಣ, ವಿವೇಕಾನಂದ, ಗಾಂಧಿ, ಅರವಿಂದ ಮತ್ತು ಲೋಹಿಯಾ ಇಂತಹ ವ್ಯಕ್ತಿತ್ವಗಳ ಚಿಂತನೆಯ ಪ್ರಭಾವ ಇತ್ಯಾದಿಗಳಿಂದ ರೂಪುಗೊಂಡ ಕುವೆಂಪು ಅವರ ವೈಚಾರಿಕತೆಯು ಮನುಷ್ಯ ಚೈತನ್ಯದ ಚಲನಶೀಲತೆಯನ್ನು ಸ್ಥಗಿತಗೊಳಿಸುವ ಎಲ್ಲಾ ವಿಕೃತಿಗಳನ್ನು ವಿರೋಧಿಸುತ್ತಾ, ಮನುಷ್ಯರೆಲ್ಲರ ಘನತೆಯನ್ನು ಎತ್ತಿ ಹಿಡಿಯುವ ಸ್ವರೂಪದ್ದಾಗಿದೆ.
ಕನ್ನಡಕ್ಕೆ ಕುವೆಂಪು ಸಾಹಿತ್ಯ ಕಾಣಿಕೆ
ಕುವೆಂಪು ಅವರು ಬರೆದ ಎರಡು ಕಾದಂಬರಿಗಳಾದ ‘ಕಾನೂರು ಸುಬ್ಬಮ್ಮ ಹೆಗ್ಗಡತಿ’ ಮತ್ತು ‘ಮಲೆಗಳಲ್ಲಿ ಮಧುಮಗಳು’ ಭಾರತೀಯ ಸಾಹಿತ್ಯ ಪ್ರಪಂಚದಲ್ಲೇ ಶ್ರೇಷ್ಠಕೃತಿಗಳೆಂಬ ಪ್ರಶಂಸೆಗೆ ಪಾತ್ರವಾಗಿವೆ. ಕನ್ನಡಕ್ಕೆ ಮೊದಲ ಜ್ಞಾನಪೀಠವನ್ನು ತಂದು ಕೊಟ್ಟ ಹಿರಿಮೆಯನ್ನು ಹೊಂದಿದ ಇವರ ‘ಶ್ರೀ ರಾಮಾಯಣ ದರ್ಶನಂ’ ಮಹಾಕಾವ್ಯ ಸಂಸ್ಕೃತ ಮತ್ತು ಹಿಂದಿ ಭಾಷೆಗೆ ಅನುವಾದಗೊಂಡಿದೆ. ಇವರು ‘ಬೆರಳ್ಗೆ ಕೊರಳ್, ಶೂದ್ರ ತಪಸ್ವಿ, ಸ್ಮಶಾನ ಕುರುಕ್ಷೇತ್ರಂ, ರಕ್ತಾಕ್ಷಿ, ಜಲಗಾರ’ ಮೊದಲಾದ ನಾಟಕಗಳನ್ನು ಬರೆದಿದ್ದಾರೆ. ಜೊತೆಗೆ ಕೊಳಲು, ಅಗ್ನಿಹಂಸ, ಅನಿಕೇತನ, ಅನುತ್ತರಾ, ಇಕ್ಷುಗಂಗೋತ್ರಿ ಕಥನ ಕವನಗಳು. ಕಲಾ ಸುಂದರಿ, ಕಿಂಕಿಣಿ, ಕೃತ್ತಿಕೆ, ಜೇನಾಗುವೆ, ನವಿಲು, ಪಕ್ಷಿಕಾಶಿ, ಚಿತ್ರಾಂಗದಾ ಮೊದಲಾದ ಕವನ ಸಂಕನಗಳು. ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆಗಳನ್ನು ಇವರು ಬರೆದಿದ್ದಾರೆ. ‘ನೆನಪಿನ ದೋಣಿಯಲ್ಲಿ’ ಕುವೆಂಪುರವರ ಆತ್ಮಕಥೆ.
‘ಅನಿಕೇತನ’ ಪದ್ಯದ ಮೂಲಕ ವಿಶ್ವಮಾನವ ಸಂದೇಶವನ್ನು ಸಾರಿದ ಮಹಾಕವಿ ಕುವೆಂಪು, ‘ಮನುಷ್ಯ ಜಾತಿ ತಾನೊಂದೆ ವಲಂ’ ಎಂಬ ಪಂಪನ ತಾತ್ವಿಕತೆಯನ್ನು ವಿಸ್ತರಿಸಿದವರು ಕುವೆಂಪು. ನಮಗೆ ಬೇಕಾಗಿರುವುದು ಆ ಮತ ಈ ಮತ ಅಲ್ಲ, ಮನುಜ ಮತ. ಆ ಪಥ ಈ ಪಥ ಅಲ್ಲ, ಸರ್ವರ ಸರ್ವಸ್ತರರ ಬದುಕು ಎನ್ನುತ್ತಾರೆ ಕುವೆಂಪು. ನಮ್ಮ ಹಳೆಯ ಶಾಸ್ತ್ರ-ಪುರಾಣಗಳನ್ನು ಹೊಸ ಬೆಳಕಿನಲ್ಲಿಟ್ಟು ನೋಡಿ, ಅದರೊಳಗಿನ ಕಸ ಕೊಳೆಗಳನ್ನು ತೆಗೆದೆಸೆದು ಅಲ್ಲಿ ಹೊಸ ದೃಷ್ಟಿಕೋನವನ್ನಿಟ್ಟು ಕಸಿ ಮಾಡಿದರು. ಜಾತಿ ವ್ಯವಸ್ಥೆ, ಅಸ್ಪೃಶ್ಯತೆ ಮತ್ತು ಮೌಢ್ಯಗಳಿಂದ ಮುಕ್ತವಾದ ಸನಾತನ ಧರ್ಮ ಅವರ ಕನಸಾಗಿತ್ತು.
ಬೇಂದ್ರೆಯೂರಲ್ಲಿ ಅಧ್ಯಕ್ಷತೆ
ಕುವೆಂಪುರವರು ಕನ್ನಡ ಸಾಹಿತ್ಯಕ್ಕೆ ಸಲ್ಲಿಸಿದ ಸೇವೆ ಅಪಾರ. ಇವರು ಧಾರವಾಡದಲ್ಲಿ 1957ನೇ ವರ್ಷದಲ್ಲಿ ನಡೆದ 39ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. 1956ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದರು.
ಮೊದಲ ಜ್ಞಾನಪೀಠ
ಇವರ ʼಶ್ರೀ ರಾಮಾಯಣ ದರ್ಶನಂʼ ಕೃತಿಯು ಕನ್ನಡಕ್ಕೆ ಪ್ರಪ್ರಥಮ ಜ್ಞಾನಪೀಠ ಪ್ರಶಸ್ತಿಯನ್ನು ದೊರಕಿಸಿಕೊಟ್ಟಿತು. ಭಾರತ ಸರ್ಕಾರದ ಪದ್ಮವಿಭೂಷಣದಿಂದಲೂ ಪುರಸ್ಕೃತಗೊಂಡ ಇವರು ‘ಜೈ ಭಾರತ ಜನನಿಯ ತನುಜಾತೆ’ ಕನ್ನಡ ನಾಡ ಗೀತೆಯನ್ನು ರಚಿಸಿದ ಮೇರುಕವಿ. ರಾಷ್ಟ್ರಕವಿ ಬಿರುದು ಪಡೆದ ಮಹಾನ್ ಕವಿ. ಸಾಹಿತ್ಯದ ಮೂಲಕವೇ ನಾಡಿನ ಜನ ಮಾನಸವನ್ನು ಅವರಷ್ಟು ಬಲವಾಗಿ ಪ್ರಭಾವಿಸಿದ ಮತ್ತೊಬ್ಬ ಬರಹಗಾರ ಇಲ್ಲ. ಕುವೆಂಪುರವರಿಗೆ ಕುವೆಂಪು ಅವರೇ ಸಾಟಿ!
ಕನ್ನಡ ಸಾಹಿತ್ಯದಲ್ಲಿ 20ನೇ ಶತಮಾನವನ್ನು ‘ಕುವೆಂಪು ಯುಗ’ ಎಂದು ಕರೆಯಲಾಗಿದೆ. ಸುಮಾರು ಮುಕ್ಕಾಲು ಶತಮಾನದ ಕಾಲ ಅವರು ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಅನಭಿಷಿಕ್ತ ಸಾಮ್ರಾಟರಾಗಿ ರಾರಾಜಿಸಿದರು. ಮಲೆನಾಡಿನ ಯಾವುದೋ ಒಂದು ಮೂಲೆಯಲ್ಲಿ ಹುಟ್ಟಿದ ಈ ಕವಿಚೇತನ ಅಸಾಧಾರಣ ಶ್ರದ್ಧಾಭಕ್ತಿಯಿಂದಲೂ, ತಮ್ಮ ಏಕಾಗ್ರತೆಯಿಂದಲೂ, ವ್ಯಾಸಂಗ ಅಭ್ಯಾಸಗಳನ್ನು ನಡೆಸಿ ಒಬ್ಬ ಮಹಾಕವಿಯಾಗಿ, ಚಿಂತನಶೀಲರಾಗಿ, ವಿಚಾರವಾದಿಯಾಗಿ, ವಿಫುಲ ಸಾಹಿತ್ಯ ರಚನೆ ಮಾಡಿ ಕನ್ನಡಿಗರ ಗೌರವಾಧರಗಳಿಗೆ ಪಾತ್ರರಾಗಿದ್ದಾರೆ.
ನಿಮಗೆ ನೀವೇ ಸರಿಸಾಟಿ!
ಕನ್ನಡ, ಕರ್ನಾಟಕದ ಬಗ್ಗೆ ಅವರು ಬರೆದಿರುವ ಭಾವಗೀತೆಗಳು ನಿತ್ಯನೂತನ. ಮನುಜ ಮತ ವಿಶ್ವಪಥವನ್ನು ಸಾರಿದ ಈ ಸಾಹಿತ್ಯ ಶ್ರೇಷ್ಠ ವಿಶ್ವಮಾನವರೆನಿಸಿದವರು. ಮಹಾಕಾವ್ಯ, ನಾಟಕ, ಖಂಡಕಾವ್ಯ, ಕಥನಕಾವ್ಯ, ಭಾವಗೀತೆಯೇ ಮೊದಲಾದ ಹಲವು ಪ್ರಕಾರಗಳಲ್ಲಿ ಅತ್ಯುತ್ತಮ ಕೃತಿಗಳನ್ನು ನೀಡಿದ ಅದ್ವೀತಿಯ. ಕುವೆಂಪು ಅವರಂತೆ ಸರ್ವ ಪ್ರಕಾರಗಳಲ್ಲೂ ಏಕ ಪ್ರಕಾರವಾದ ಸಿದ್ಧಿ ಪಡೆದ ಕವಿಗಳು ಅತಿ ವಿರಳ.
ಕುವೆಂಪು ಆ ಹೆಸರಲ್ಲೇ ಏನೋ ಒಂದು ವಿಧವಾದ ಕಂಪು. ಇದು ಕನ್ನಡದ ಕಂಪು. ಇಪ್ಪತ್ತನೆಯ ಶತಮಾನದ ಕನ್ನಡ ಸಾಹಿತ್ಯ ಏರುಗತಿಯಲ್ಲಿ ಸಾಗಲು ಕುವೆಂಪು ಕಾರಣಕರ್ತರು ಎಂದರೆ ತಪ್ಪಾಗಲಾರದು. ಕವನ, ಕಾವ್ಯ, ಸಣ್ಣಕಥೆಗಳು, ನಾಟಕ, ಕಾದಂಬರಿ, ಮಹಾಕಾವ್ಯ, ವಿಮರ್ಶೆ ಹೀಗೆ ಸಾಹಿತ್ಯದ ಹಲವಾರು ಪ್ರಕಾರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಹಾಗೂ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸುವ ಮೂಲಕ ಅಜರಾಮರವಾಗಿ ಉಳಿದಿದ್ದಾರೆ. ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಖ್ಯಾತಿಯನ್ನು ತಂದುಕೊಟ್ಟಿದ್ದಾರೆ.
ಸಂಸಾರ ನೌಕೆ
ಕುವೆಂಪುರವರು 1937 ಎಪ್ರಿಲ್ 30ರಂದು ಹೇಮಾವತಿಯವರನ್ನು ಕೈ ಹಿಡಿದರು.. ಪೂರ್ಣಚಂದ್ರ ತೇಜಸ್ವಿ ಮತ್ತು ಕೋಕಿಲೋದಯ ಚೈತ್ರ ಎಂಬ ಪುತ್ರರು, ಇಂದುಕಲಾ ಮತ್ತು ತಾರಿಣಿ ಎಂಬ ಇಬ್ಬರು ಪುತ್ರಿಯರಿದ್ದಾರೆ. ರಾಮಕೃಷ್ಣ ಪರಮಹಂಸರ ಜೀವನದಿಂದ ಪ್ರಭಾವಿತರಾದ ಕುವೆಂಪುರವರು ಸ್ವಾಮಿ ಶಿವಾನಂದರಿಂದ ದೀಕ್ಷೆ ಪಡೆದಿದ್ದಾರೆ. ಕುವೆಂಪು ರಾಷ್ಟೀಯ ಪ್ರತಿಷ್ಠಾನ ಇವರು ಜನಿಸಿದ ಮನೆಯನ್ನು ಕವಿಮನೆ ಹೆಸರಿನ ಮ್ಯೂಸಿಯಂ ಮಾಡಿದೆ. 1987ರಲ್ಲಿ ಶಿವಮೊಗ್ಗದಲ್ಲಿ ಕುವೆಂಪುರವರ ಗೌರವಾರ್ಥವಾಗಿ ಕುವೆಂಪು ವಿಶ್ವವಿದ್ಯಾಲಯ ಸ್ಥಾಪಿಸಲಾಯಿತು. ಇಂತಹ ಮಹಾನ್ ಚೇತನ ನ.11 1994ರಲ್ಲಿ ಮೈಸೂರಿನಲ್ಲಿ ಕೊನೆಯುಸಿರೆಳೆದು ಕನ್ನಡ ಮಾತೆಯ ಮಡಿಲು ಸೇರಿಕೊಂಡರು. ಕುಪ್ಪಳಿಯ ಕವಿಶೈಲದಲ್ಲಿ ಇಂದಿಗೂ ಅವರ ಸಮಾಧಿ ಇದೆ. ಅವರು ಹುಟ್ಟಿದ ಮನೆಯನ್ನು ಪ್ರವಾಸಿಗರಿಗೆ ಪ್ರವಾಸಿ ಕ್ಷೇತ್ರವನ್ನಾಗಿಸಿದ್ದಾರೆ.
ವಿಶ್ವ ಮಾನವ ದಿನ
ಕರ್ನಾಟಕ ಸರ್ಕಾರವು 2015ರ ಡಿಸೆಂಬರ್ನಲ್ಲಿ ಕುವೆಂಪು ಜನ್ಮದಿನವಾದ ಡಿಸೆಂಬರ್ 29 ಅನ್ನು "ವಿಶ್ವ ಮಾನವ" ದಿನವನ್ನಾಗಿ ಆಚರಿಸುವುದಾಗಿ ಆದೇಶ ಹೊರಡಿಸಿತು. ಈ ಮೂಲಕ ವಿಶ್ವಮಾನವ ಸಂದೇಶ ಸಾರಿದ ಕವಿಗೆ ಮತ್ತೊಂದು ಗೌರವ ಮುಡಿಗೇರಿತು.
ಡಾ. ಡಿ.ಸಿ.ರಾಮಚಂದ್ರ, ಶ್ರೀ ಕ್ಷೇತ್ರ ಆದಿಚುಂಚನಗಿರಿ, ಲೇಖಕರು
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.