ಬೆಂಗಳೂರು: ರಾಜ್ಯದಲ್ಲಿ ಲಾಕ್ಡೌನ್ ನಡುವೆಯೂ ಕೊರೋನಾವೈರಸ್ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. ಕೊರೋನಾ ಸೋಂಕು ಹರಡುವಿಕೆ ತಡೆಯಲು ಸರ್ಕಾರ, ವೈದ್ಯರು ಹಾಗೂ ಲಾಕ್ಡೌನ್ (Lockdown) ನಿಭಾಯಿಸಲು ಪೊಲೀಸರು ಹರಸಾಹಸ ಮಾಡುತ್ತಿದ್ದಾರೆ. ಆದರೆ ಇವ್ಯಾವುದರ ಗೊಡವೆಯೂ ಇಲ್ಲದೆ ಸಂಕಷ್ಟದ ಸಮಯದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಮೋಜು ಮಸ್ತಿಯಲ್ಲಿ ತೊಡಗಿದ್ದಾರೆ.
ರಾಜ್ಯದಲ್ಲಿ COVID-19 ಸೋಂಕು ಪರೀಕ್ಷೆಯನ್ನು ಇನ್ನೂ ತೀವ್ರಗೊಳಿಸಬೇಕಿದೆ. ಆದರೆ ಅಗತ್ಯ ಇರುವಷ್ಟು ಕೊರೊನಾವೈರಸ್ (Coronavirus) ಪರೀಕ್ಷೆಯ ಕಿಟ್ ಗಳಿಲ್ಲ. ಪಕ್ಕದ ತಮಿಳುನಾಡಿನಲ್ಲಿ ಈಗಾಗಲೇ ಚೀನಾದಿಂದ ಪರೀಕ್ಷಾ ಕಿಟ್ ಗಳನ್ನು ಆಮದು ಮಾಡಿಕೊಂಡು ಪ್ರತಿಜಿಲ್ಲೆಗೂ ನೀಡಲಾಗಿದೆ. ಕರ್ನಾಟಕದಲ್ಲಿ ಟೆಸ್ಟ್ ಕಿಟ್ ಖರೀದಿಗೆ ತಡವಾಗುತ್ತಿದೆ. ಇದಕ್ಕೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ (Dr K Sudhakar) ಮತ್ತು ಆರೋಗ್ಯ ಸಚಿವ ಬಿ.ಶ್ರೀರಾಮುಲು (B Sriramulu) ನಡುವಿನ ಭಿನ್ನಾಭಿಪ್ರಾಯವೇ ಕಾರಣ ಎಂದು ಹೇಳಲಾಗುತ್ತಿದೆ. ಇಂಥ ಕ್ಲಿಷ್ಟ ಪರಿಸ್ಥಿತಿಯಲ್ಲೂ ಸುಧಾಕರ್ ತಮ್ಮ ಕುಟುಂಬದವರೊಂದಿಗೆ ಜಾಲಿ ಮೂಡಿನಲ್ಲಿದ್ದಾರೆ.
ಹಿಂದಿನ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಜನರಿಗೆ ಸ್ಪಂದಿಸುವ ಕೆಲಸ ಆಗುತ್ತಿಲ್ಲ ಎಂದು ಮೂದಲಿಸಿ ಬಿಜೆಪಿಗೆ ಹಾರಿ ಬಂದಿದ್ದ ಸುಧಾಕರ್ ಈಗ ಸ್ವತಃ ಸಚಿವರಾಗಿದ್ದಾರೆ. ಸ್ವತಃ ವೈದ್ಯರಾಗಿರುವ ಕಾರಣಕ್ಕೆ ಇವರಿಗೆ ವೈದ್ಯಕೀಯ ಶಿಕ್ಷಣ ಇಲಾಖೆಯಂಥ ಮಹತ್ವದ ಖಾತೆಯನ್ನೇ ಕೊಡಲಾಗಿದೆ. ವೈದ್ಯರನ್ನು ದೇವರಿಗೆ ಹೋಲಿಸಲಾಗುತ್ತದೆ. ಆದರೆ ವೈದ್ಯರು ಮತ್ತು ಸಚಿವರೂ ಆಗಿರುವ ಸುಧಾಕರ್ ಜವಾಬ್ದಾರಿ ಮರೆತು, ಜನರ ಕಷ್ಟಗಳನ್ನು ಕಸದ ಬುಟ್ಟಿಗೆ ಎಸೆದು ತಾವು ಮಾತ್ರ ಮಜಾ ಮಾಡುತ್ತಿದ್ದಾರೆ.
ಸುಧಾಕರ್ ಅವರ ಇಂತಹ ನಡೆಗೆ ನಟಿಜನ್ ಗಳು ಅಕ್ರೋಶ ವ್ಯಕ್ತಪಡಿಸಿದ್ದು, ಸರ್ಕಾರದ ಪ್ರಯಾತಿನಿಧಿಯಾಗಿ ಇಂತಹ ಸಂಕಷ್ಟದ ಸಮಯದಲ್ಲಿ ಈಜುಕೊಳದಲ್ಲಿ ನಿಮ್ಮ ಸಾಮಾಜಿಕ ಅಂತರ ಅಯ್ಯೋ ದೇವರೇ, ಎಲ್ಲಾ ವೈದ್ಯರು ಹಾಗೋಒ ಪೊಲೀಸ್ ಇಲಾಖೆಯವರು ಅಷ್ಟು ಕಷ್ಟ ಪಡುವಾಗ ಇದೆಲ್ಲಾ ಬೇಕಿತ್ತಾ. ಹೀಗೆ ಮಾಡಿದ್ದರೂ ಇಂತಹ ಸಮಯದಲ್ಲಿ ಅದನ್ನು ಪೋಸ್ಟ್ ಮಾಡುವ ಅಗತ್ಯವಿರಲಿಲ್ಲ ಎಂದು ಟ್ವೀಟ್ ಬಳಕೆದಾರರೊಬ್ಬರು ಬರೆದಿದ್ದಾರೆ.
ಮಂತ್ರಿಯಾಗಿ, ವೈದ್ಯರಾಗಿ ಯಾವಾಗ ಆನಂದಿಸಬೇಕು ಮತ್ತು ಯಾವಾಗ ಕಷ್ಟಪಟ್ಟು ಕೆಲಸ ಮಾಡಬೇಕು ಎಂಬ ಸಾಮಾನ್ಯ ಜ್ಞಾನವಿಲ್ಲ, ಇದು ನಮ್ಮ ಕರ್ನಾಟಕ ಜನರ ಬಗ್ಗೆ ನಿಮ್ಮ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂದು ಇನ್ನೊಬ್ಬ ಟ್ವೀಟಿಗರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ನಿನಗೆ ನಾಚಿಕೆಯಾಗಬೇಕು!! ನೀವು ರಾಜಕೀಯವಾಗಿ ಮತ್ತು ನೈತಿಕವಾಗಿ ದಿವಾಳಿಯಾಗಿದ್ದೀರಿ! ಸಾಮಾನ್ಯ ಜನರು ಕಠಿಣ ಮತ್ತು ನೋವಿನ ಲಾಕ್ಡೌನ್ನಿಂದ ಬಳಲುತ್ತಿದ್ದಾರೆ, ಆದರೆ ನೀವು ಆನಂದಿಸುತ್ತಿದ್ದೀರಿ ಎಂದು ಛೀಮಾರಿ ಹಾಕಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ ಸುಧಾಕರ ತಮ್ಮ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದಾರೆ.
ಬಹಳ ದಿನಗಳ ಬಳಿಕ ಮಕ್ಕಳೊಂದಿಗೆ ಕಾಲ ಕಳೆಯುತ್ತಿದ್ದೇನೆ ಎಂದು ಕುಟುಂಬವರೊಂದಿಗೆ ಈಜುಕೊಳದಲ್ಲಿರುವ ಫೊಟೋ ಹಂಚಿಕೊಂಡಿದ್ದಾರೆ. ಇವರಂಥೆ ಅದೆಷ್ಟೋ ವೈದ್ಯರು, ಪೊಲೀಸರು, ಪೌರಕಾರ್ಮಿಕರು, ಆಶಾ ಕಾರ್ಯಕರ್ತೆಯರು, ಪಿಡಿಓಗಳು, ಕೆಲ ಹಿರಿಯ ಅಧಿಕಾರಿಗಳು ಕೂಡ ಬಹಳ ದಿನಗಳಿಂದ ಕೊರೋನಾ ಸೋಂಕು ತಡೆಯುವುದರಲ್ಲಿ, ಲಾಕ್ ಡೌನ್ ನಿಯಂತ್ರಿಸುವುದರಲ್ಲಿ, ಅಗತ್ಯ ವಸ್ತುಗಳ ಪೂರೈಕೆ ಮಾಡುವುದರಲ್ಲಿ, ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದಾರೆ. ಅವರು ಕೂಡ ಈಗ ಜಾಲಿ ಮೂಡಿಗೆ ತೆರಳಿದರೆ ರಾಜ್ಯದ ಪರಿಸ್ಥಿತಿ ಏನಾಗಬಹುದು ಸುಧಾಕರ್ ಅವರೇ? ಎಂದು ಪ್ರಶ್ನಿಸಬೇಕಾಗಿದೆ.
ಮೊದಲೆಲ್ಲಾ ಆರೋಗ್ಯ ಸಚಿವ ಶ್ರೀರಾಮುಲು ಜೊತೆ ಭಿನ್ನಾಭಿಪ್ರಾಯಕ್ಕಿಳಿದಿದ್ದರು. ಇದರಿಂದ ಸ್ವಲ್ಪ ಸಮಸ್ಯೆ ಆಗಿತ್ತು. ಆನಂತರ ಉಪ ಮುಖ್ಯಮಂತ್ರಿ ಡಾ. ಅಶ್ವಥನಾರಾಯಣ ಜೊತೆ ಸ್ಪರ್ಧೆಗಿಳಿದರು. ಇವರ ಕಚ್ಚಾಟ ನೋಡಲಾಗದೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೊರೋನಾ ವಿಷಯದಲ್ಲಿ ಮಾಧ್ಯಮಗಳಿಗೆ ಮಾಹಿತಿ ತಿಳಿಸುವ ಜವಾಬ್ದಾರಿಯನ್ನು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ನೀಡಬೇಕಾಯಿತು. ಈಗ ಇಡೀ ಕರ್ನಾಟಕ ಕೊರೋನಾ ಕಷ್ಟಕ್ಕೆ ಕುಗ್ಗಿಹೋಗುತ್ತಿರುವ ಸಂಸಕಷ್ಟದಲ್ಲಿರುವಾಗ ಸಚಿವ ಸುಧಾಕರ್ ತಮ್ಮ ಮಕ್ಕಳೊಂದಿಗೆ ಮೋಜು-ಮಸ್ತಿಯಲ್ಲಿ ತೊಡಗಿರುವುದು ವಿಪರ್ಯಾಸವಾಗಿದೆ.