Tirupati Laddu: ಜಗತ್ತಿನ ಕೋಟ್ಯಂತರ ಹಿಂದೂಗಳ ನಂಬಿಕೆಯ ಕೇಂದ್ರವಾಗಿರುವ ಪ್ರಸಿದ್ಧ ತಿರುಪತಿಯ ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂಬ ವಿವಾದ ಇಡೀ ದೇಶದಲ್ಲಿ ಆಕ್ರೋಶದ ಕಿಚ್ಚನ್ನು ಹಚ್ಚಿದೆ. ಈ ಹಿಂದಿನ ವೈಎಸ್ಆರ್ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ತಿರುಪತಿಯ ಶ್ರೀ ವೆಂಕಟೇಶ್ವರ ದೇವಸ್ಥಾನದಿಂದ ಪ್ರಸಾದವಾಗಿ ನೀಡಲಾದ ಲಡ್ಡುಗಳ ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಇತ್ತೀಚೆಗೆಯಷ್ಟೇ ಹೇಳಿಕೆ ನೀಡಿದ್ದರು. ಈ ಆರೋಪ ಮುನ್ನೆಲೆಗೆ ಬಂದಿದ್ದೇ ತಡ ದೇಶದೆಲ್ಲೆಡೆ ಅಸಮಾಧಾನದ ಛಾಯೆ ಆವರಿಸಿದೆ.
ಇದನ್ನೂ ಓದಿ: ನೌಕೆ, ಸೇನೆ, ವಾಯುಪಡೆಯ ಕಮಾಂಡರ್ಗಳಾದ ಬೆಸ್ಟ್ ಫ್ರೆಂಡ್ಸ್: ಮೂವರು ಸ್ನೇಹಿತರ ಕೈಸೇರಿದ ಸೇನಾಪಡೆ
ಗುಜರಾತ್ನ ಪ್ರಯೋಗಾಲಯದ ವರದಿಯಲ್ಲಿ, "ತಿರುಪತಿ ಲಡ್ಡುವಿನಲ್ಲಿ ಬಳಸುವ ತುಪ್ಪದ ಮಾದರಿಯಲ್ಲಿ ದನದ ಕೊಬ್ಬು, ಮೀನಿನ ಎಣ್ಣೆ ಮತ್ತು ಹಂದಿ ಕೊಬ್ಬು ಅಂಶಗಳು ಇವೆ" ಎಂದು ಉಲ್ಲೇಖಿಸಲಾಗಿದೆ. ಈ ವರದಿ ಬಹಿರಂಗವಾಗುತ್ತಿದ್ದಂತೆ ಕೇಂದ್ರ ಸರ್ಕಾರವು ಮಧ್ಯಪ್ರವೇಶ ಮಾಡಿದ್ದು ಸದ್ಯ ತನಿಖೆ ಚುರುಕುಗೊಳಿಸಲಾಗಿದೆ.
ಅಂದಹಾಗೆ ಈ ವರದಿಯಲ್ಲಿ ತಿರುಪತಿ ದೇವಸ್ಥಾನದಲ್ಲಿ ತಿರುಮಲೇಶನಿಗೆ ಸಮರ್ಪಣೆ ಮಾಡಲಾಗುವ ಲಡ್ಡು ಪ್ರಸಾದದ ಹಿನ್ನೆಲೆ ಏನೆಂಬುದನ್ನು ತಿಳಿದುಕೊಳ್ಳೋಣ.
ವೆಂಕಟೇಶ್ವರ ದೇವರ ಪ್ರಸಾದವಾಗಿ ಲಭ್ಯವಿರುವ ತಿರುಪತಿ ಲಡ್ಡು ತನ್ನ ವಿಶಿಷ್ಟ ರುಚಿ ಮತ್ತು ಪರಿಮಳಕ್ಕೆ ಸಾಕಷ್ಟು ಹೆಸರುವಾಸಿಯಾಗಿದೆ. ಈ ಲಡ್ಡು ಪ್ರಸಾದಕ್ಕೆ ಬರೋಬ್ಬರಿ 300 ವರ್ಷಗಳ ಇತಿಹಾಸವಿರುವುದು ನಿಮಗೆ ತಿಳಿದಿದೆಯೇ? ಐತಿಹಾಸಿಕ ಸತ್ಯಗಳ ಪ್ರಕಾರ, ಲಡ್ಡು ಎಂಬ ಪವಿತ್ರ ನೈವೇದ್ಯವನ್ನು ಮೊದಲ ಬಾರಿಗೆ ಆಗಸ್ಟ್ 2, 1715 ರಂದು ತಯಾರಿಸಲಾಯಿತು. ಇದನ್ನು ದೇವಾಲಯದ ಅಧಿಕಾರಿಗಳು ವೆಂಕಟೇಶ್ವರ ಬೆಟ್ಟದಲ್ಲಿ ಸಿದ್ಧಪಡಿಸಿದ್ದರು ಎಂದು ಹೇಳಲಾಗುತ್ತದೆ.
ಪ್ರಸ್ತುತ ಪ್ರಸಾದವಾಗಿ ಪಡೆಯುತ್ತಿರುವ ಈ ಲಡ್ಡು, ಸುಮಾರು ಆರು ಬಾರಿ ವಿವಿಧ ವಿನ್ಯಾಸಗಳನ್ನು ಪಡೆದಿತ್ತು. ಕೊನೆಗೆ 1940 ರ ಸುಮಾರಿಗೆ ಮದ್ರಾಸ್ ಸರ್ಕಾರದ ಅಡಿಯಲ್ಲಿ ಹೊರಡಿಸಿದ ಆದೇಶದ ಪ್ರಕಾರ ಪ್ರಸ್ತುತ ಆಕಾರವನ್ನು ಪಡೆದುಕೊಂಡಿತು. ಪ್ರಾಚೀನ ಶಾಸನಗಳ ಪ್ರಕಾರ, ಲಡ್ಡುಗಳ ಅಸ್ತಿತ್ವದ ಪುರಾವೆಗಳು 1480 ರಲ್ಲಿ ಕಂಡುಬಂದಿವೆ. ಆ ಸಂದರ್ಭದಲ್ಲಿ ಲಡ್ಡು ಪ್ರಸಾದವನ್ನು "ಮನೋಹರಂ" ಎಂದು ಕರೆಯಲಾಗುತ್ತಿತ್ತು.\
ʼಲಡ್ಡು ರಾಜʼ ಕಲ್ಯಾಣಂ ಅಯ್ಯಂಗಾರ್:
ತಿರುಪತಿ ದೇಗುಲಕ್ಕೆ ಆಗಮಿಸುವ ಭಕ್ತರಿಗೆ ಲಡ್ಡು ಪ್ರಸಾದವನ್ನೇ ನೀಡಬೇಕೆಂದು ಆಲೋಚಿಸಿ, ಅದನ್ನು ಅನುಷ್ಠಾನಗೊಳಿಸಿದವರು ಕಲ್ಯಾಣಂ ಅಯ್ಯಂಗಾರ್. ಇವರ ಈ ಆಲೋಚನೆಯಿಂದ ಅನೇಕ ಜನರಿಗೆ ಉದ್ಯೋಗವೂ ಸಿಕ್ಕಿತ್ತು. ದಾನ ಧರ್ಮಗಳಲ್ಲಿ ಎತ್ತಿದ ಕೈಯಂತಿದ್ದ ಕಲ್ಯಾಣಂ ಅವರನ್ನು ಅಲ್ಲಿನ ಜನರು ʼಕಿರೀಟವಿಲ್ಲದ ರಾಜನಂತೆʼ ಭಾವಿಸಿದ್ದರು ಎನ್ನಲಾಗಿದೆ. ಇದಾದ ಬಳಿಕ ಈ ಲಡ್ಡು ಮಾಡುವ ಪರಂಪರೆಯನ್ನು ಕಲ್ಯಾಣಂ ಅವರು ತಮ್ಮ ಮಗ, ಸಹೋದರ, ಸೋದರ ಮಾವ ಮುಂತಾದವರಿಗೆ ವರ್ಗಾಯಿಸಿದರು.
ಇದಷ್ಟೇ ಅಲ್ಲದೆ, ಈ ಕಲ್ಯಾಣಂ ಅಯ್ಯಂಗಾರ್ ಅವರು, ಪರೋಪಕಾರಿ, ಬಡವರು ಮತ್ತು ದೀನದಲಿತರ ಪರವಾಗಿ ಹೋರಾಡಿದವರು. ಲಲಿತಕಲೆಗಳನ್ನು ಪೋಷಣೆ ಮಾಡಿಕೊಂಡು ಬಂದಿದ್ದ ಅವರು, ತಿರುಮಲದಲ್ಲಿ ಸಂಗೀತ ಮತ್ತು ನೃತ್ಯ ಉತ್ಸವಗಳನ್ನು ಪರಿಚಯಿಸಿದರು. ಈ ಪದ್ಧತಿಯನ್ನು ಇಂದಿಗೂ ತಿರುಮಲದಲ್ಲಿ ಅನುಸರಿಸಲಾಗುತ್ತಿದೆ.
ಏನಿದು ಮಿರಾಸಿದಾರಿ ವ್ಯವಸ್ಥೆ? ಅದರ ಉದ್ದೇಶ ಏನು?
ಕಲ್ಯಾಣಂ ಅಯ್ಯಂಗಾರ್ ಜನಪ್ರಿಯ ಮಿರಾಸಿದಾರಿ ಪದ್ಧತಿಯನ್ನು ಪರಿಚಯಿಸಿದರು. ಇದು ವಂಶಪಾರಂಪರ್ಯ ವ್ಯವಸ್ಥೆಯಾಗಿದ್ದು, ಸಿಹಿತಿಂಡಿಗಳನ್ನು ತಯಾರಿಸುವುದು ಇದರ ಉದ್ದೇಶವಾಗಿತ್ತು. ಇನ್ನು ಅಡುಗೆಮನೆಯಲ್ಲಿ ಲಡ್ಡುಗಳನ್ನು ತಯಾರಿಸುವವರನ್ನು ಗೇಮಕರ ಮಿರಸಿದಾರರು ಎಂದು ಕರೆಯಲಾಗುತ್ತಿತ್ತು. ಈ ಮಿರಾಸಿದಾರರು 2001 ರವರೆಗೆ ಲಡ್ಡುಗಳನ್ನು ತಯಾರಿಸುವ ಮತ್ತು ಪಾಲು ಪಡೆಯುತ್ತಿದ್ದರು. ಅಂದರೆ 51 ಲಡ್ಡುಗಳ ಪ್ರತಿ ಲಾಟ್ನಲ್ಲಿ 11 ಮಿರಾಸಿ ಬ್ರಾಹ್ಮಣ ಕುಟುಂಬಗಳಿಗೆ ನೀಡಲಾಗುತ್ತಿತ್ತು. ಆದರೆ ದಿನ ಕಳೆದಂತೆ ಭಕ್ತಾದಿಗಳ ಹರಿವು ಹೆಚ್ಚಾದಾಗ ಲಡ್ಡು ತಯಾರಿಸುವ ಸಂಖ್ಯೆಯನ್ನು ಹೆಚ್ಚಿಸಬೇಕಾಯಿತು. ಹೀಗಾಗಿ ಮಿರಾಸಿ ಪದ್ದತಿಯನ್ನು ರದ್ದುಗೊಳಿಸುವಂತೆ ಟಿಟಿಡಿ ಆಡಳಿತ ಮಂಡಳಿಯು ಸುಪ್ರೀಂ ಕೋರ್ಟ್ ನಲ್ಲಿ ಕಾನೂನು ಹೋರಾಟ ಮಾಡಿ ಗೆದ್ದಿತು. ಕೊನೆಗೆ 2001ರಲ್ಲಿ ಮಿರಾಸಿದಾರಿ ಪದ್ದತಿಯನ್ನು ರದ್ದುಗೊಳಿಸಲಾಯಿತು.
ಅನೇಕ ವರ್ಷಗಳ ನಂತರ, ದೇವಾಲಯದ ಅಧಿಕಾರಿಗಳು "ಪೋಟು" ಅನ್ನು ಸ್ಥಾಪಿಸಿದರು, ಇದನ್ನು "ದೇವರ ಅಡಿಗೆ ಅಥವಾ ದಿ ಲಾರ್ಡ್ಸ್ ಕಿಚನ್" ಎಂದು ಕರೆಯಲಾಗುತ್ತದೆ. ಅಂದರೆ ಇಲ್ಲಿ ಉರುವಲು (ಕಟ್ಟಿಗೆಯನ್ನು ಸುಟ್ಟು) ಮೂಲಕ ಪ್ರಸಾದವನ್ನು ಸಿದ್ಧಪಡಿಸಲಾಯಿತು. ಇನ್ನು, ಲಡ್ಡುಗಳ ಸಂಖ್ಯೆ ಭಕ್ತರ ಬೇಡಿಕೆಯ ಅರ್ಧಕ್ಕಿಂತ ಕಡಿಮೆ ಇತ್ತು. ಆದ್ದರಿಂದ, ದಿನಕ್ಕೆ 70,000 ಲಡ್ಡುಗಳನ್ನು ತಯಾರಿಸಲು ಮತ್ತೊಂದು ಅಡುಗೆಮನೆಯನ್ನು ಸೇರಿಸಲಾಯಿತು. ಬಳಿಕ ಈ ಕಾರ್ಯದಲ್ಲಿ ವೃತ್ತಿಪರರ ನೆರವು ಕೂಡ ಪಡೆದಿರುವುದು ಬೆಳಕಿಗೆ ಬಂದಿದ್ದು, ಇದೀಗ ಲಡ್ಡುಗಳಿಗೆ ಸಂಬಂಧಿಸಿದ ವಿವಾದವೂ ಹೊರಬಂದಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ