ನವದೆಹಲಿ: ವಿಶ್ವದ ಖ್ಯಾತ ಸರ್ಚ್ ಇಂಜಿನ್ ದೈತ್ಯ ಗೂಗಲ್ ನಿತ್ಯ ತನ್ನ ತಂತ್ರಜ್ಞಾನದಲ್ಲಿ ಹೊಸ ಹೊಸ ಬದಲಾವಣೆಗಳನ್ನು ತರುವ ಪ್ರಯತ್ನದಲ್ಲಿ ನಿರತವಾಗಿದೆ. ಇತ್ತೀಚೆಗಷ್ಟೇ ಕ್ಯಾನ್ಸರ್ ನಂತಹ ಮಾರಕ ರೋಗದ ನಿಖರ ಮಾಹಿತಿ ನೀಡುವ ತಂತ್ರಜ್ಞಾನದಿಂದ ಸುದ್ದಿ ಮಾಡಿರುವ ಗೂಗಲ್, ಇದೀಗ ಮತ್ತೊಂದು ಹೊಸ ತಂತ್ರಜ್ಞಾನ ಪರಿಚಯಿಸುವ ತಯಾರಿಯಲ್ಲಿ ತೊಡಗಿದೆ. ಇದುವರೆಗೆ ಈ ತಂತ್ರಜ್ಞಾನದ ಕುರಿತಾದ ಎಲ್ಲ ಪರೀಕ್ಷೆಗಳು ಸಕಾರಾತ್ಮಕವಾಗಿ ಸಾಬೀತಾಗಿವೆ.
ಕೃತಕ ಬುದ್ಧಿಮತ್ತೆ ಮೂಲಕ ಸಿಗಲಿದೆ ನಿಖರ ಅಲರ್ಟ್
ಇತ್ತೀಚೆಗಷ್ಟೇ ಗೂಗಲ್ ಒಂದು ಬ್ಲಾಗ್ ಪೋಸ್ಟ್ ಮೂಲಕ ಹೊಸ ತಂತ್ರಜ್ಞಾನ ಆವಿಷ್ಕರಿಸಿರುವುದಾಗಿ ಪ್ರಕಟಿಸಿತ್ತು. ಈ ಹೊಸ ಆವಿಷ್ಕಾರದ ಪ್ರಕಾರ ಗೂಗಲ್ ಕೃತಕ ಬುದ್ಧಿಮತ್ತೆ ಮತ್ತು ಮಷೀನ್ ಲರ್ನಿಂಗ್ ಸಹಾಯದಿಂದ ಹವಾಮಾನದ ನಿಖರ ಮಾಹಿತಿ ನೀಡುವಲ್ಲಿ ಯಶಸ್ವಿಯಾಗಿದೆ. ಈ ಕುರಿತು ಮಾಹಿತಿ ನೀಡಿರುವ ಸಂಶೋಧಕರು, ಇತ್ತೀಚೆಗಷ್ಟೇ ಈ ತಂತ್ರಜ್ಞಾನ ಆರು ಗಂಟೆ ಮುಂಚಿತವಾಗಿ ಮಳೆಯ ಕುರಿತು ಒಂದು ಪೂರ್ವಾನುಮಾನ ನೀಡಿತ್ತು. ಅದು ನಂತರ ತುಂಬಾ ನಿಖರ ಮತ್ತು ನಿಜ ಎಂದು ಸಾಬೀತಾಗಿದೆ ಎಂದಿದ್ದಾರೆ.
ಮೂಲಗಳ ಪ್ರಕಾರ ಅತಿ ಶೀಘ್ರದಲ್ಲಿಯೇ ಗೂಗಲ್ ಹವಾಮಾನ ಮುನ್ಸೂಚನೆ ಕ್ಷೇತ್ರಕ್ಕೆ ಕಾಲಿಡಲಿದೆ ಎನ್ನಲಾಗಿದೆ. ಆದರೆ ಇದುವರೆಗೆ ಸಂಸ್ಥೆ ಸದ್ಯ ಚಾಲ್ತಿಯಲ್ಲಿರುವ ಸೇವೆಗಳ ಪಟ್ಟಿಯಲ್ಲಿ ಇದನ್ನು ಸೇರಿಸಿಲ್ಲ. ಆದರೆ, ಶೀಘ್ರದಲ್ಲಿಯೇ ವಿಶ್ವಾದ್ಯಂತ ಕಂಪನಿ ಇದಕ್ಕೆ ಸಂಬಂಧಿಸಿದ ಸೇವೆಗಳನ್ನು ಬಿಡುಗಡೆಗೊಳಿಸಲಿದೆ ಎನ್ನಲಾಗುತ್ತಿದೆ. ಅಷ್ಟೇ ಅಲ್ಲ ಗೂಗಲ್ ಒದಗಿಸಲಿರುವ ಈ ಸೇವೆ ಕಮರ್ಷಿಯಲ್ ಆಗಿರಲಿದೆ ಎಂದೂ ಕೂಡ ಹೇಳಲಾಗುತ್ತಿದೆ. ಹವಾಮಾನ ಮುನ್ಸೂಚನೆಯಂತಹ ಈ ಸೇವೆಯಿಂದ ಕೃಷಿ ಕ್ಷೇತ್ರಕ್ಕೆ ತುಂಬಾ ಲಾಭವಾಗಲಿದೆ.
ಸದ್ಯದ ಪರಿಸ್ಥಿತಿಯಲ್ಲಿ ಹವಾಮಾನ ವರದಿಗಳು ಯಾಕೆ ಬೇಗ ಸಿಗುತ್ತಿಲ್ಲ?
ಈ ಕುರಿತು ಮಾತನಾಡಿರುವ ಗೂಗಲ್ ಅಧಿಕಾರಿಗಳು ಸದ್ಯ ಸೆಲೆಲೈಟ್ ನಿಂದ ಸಿಕ್ಕ ದತ್ತಾಂಶಗಳನ್ನು ಸೂಪರ್ ಕಂಪ್ಯೂಟರ್ ಮೂಲಕ ಪ್ರೋಸೆಸ್ ಮಾಡಿ ಮಾಹಿತಿ ಪಡೆಯಲಾಗುತ್ತದೆ. ಆದರೆ, ಇದು ಹಲವು ಹಂತಗಳ ಪ್ರಕ್ರಿಯೆಯಾಗಿರುವುದರಿಂದ ಮಾಹಿತಿ ಸಿಗುವಲ್ಲಿ ವಿಳಂಬವಾಗುತ್ತದೆ ಎಂದಿದ್ದಾರೆ. ಈ ಜಟಿಲ ಪ್ರಕ್ರಿಯೆಗಳನ್ನು ದೂರಗೊಳಿಸಿ ನೇರವಾಗಿ ರೇಡಾರ್ ನೀಡುವ ದತ್ತಾಂಶಗಳನ್ನು ಪಡೆದು ನಿಖರ ಮಾಹಿತಿ ನೀಡುವಲ್ಲಿ ಹೊಸ ತಂತ್ರಜ್ಞಾನ ಯಶಸ್ವಿಯಾಗಿದೆ ಎಂದು ಗೂಗಲ್ ಹೇಳಿಕೊಂಡಿದೆ. ಗೊಗಲ್ ನ ಹೊಸ ತಂತ್ರಜ್ಞಾನ ಇದುವರೆಗೆ ನಡೆಸಲಾಗಿರುವ ಹಲವು ಪರೀಕ್ಷೆಗಳಲ್ಲಿ ನಿಖರ ಎಂದು ಸಾಬೀತಾಗಿದೆ.