ಮುಂಬೈ: ಶಿವಸೇನಾ ಸಂಸದ ಸಂಜಯ್ ರಾವುತ್ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹಾಗೂ ಭೂಗತ ಪಾತಕಿ ಕರೀಂ ಲಾಲಾ ಕುರಿತು ನೀಡಿದ ಹೇಳಿಕೆಗೆ ಕಾಂಗ್ರೆಸ್ ಅಸಮಾಧಾನ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಸಂಜಯ್ ರಾವುತ್ ಅವರೂ ಕೂಡ ತಮ್ಮ ಹೇಳಿಕೆ ಹಿಂದೆಪಡೆದಿದ್ದಾರೆ. ಆದರೆ, ಕರೀಂ ಲಾಲಾ ಭೇಟಿಗೆ ಹಲವಾರು ರಾಜಕೀಯ ಮುಖಂಡರು ತೆರಳುತ್ತಿದ್ದರು ಮತ್ತು ರಾಜಕೀಯ ಮುಖಂಡರ ಭೇಟಿಗೂ ಕೂಡ ಹಲವಾರು ಬಾರಿ ಕರೀಂ ಲಾಲಾ ಬರುತ್ತಿದ್ದ ಎಂಬುದು ಮಾತ್ರ ನಿಜ. ಏಕೆಂದರೆ ZEE NEWS ಲೈಬ್ರರಿಯಲ್ಲಿ ಕರೀಂ ಲಾಲಾ ಹಾಗೂ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಭಾವಚಿತ್ರಗಳೂ ಕೂಡ ಇವೆ.
ಹಾಜಿ ಮಸ್ತಾನ್ ಪುತ್ರ ಸುಂದರ್ ಶೇಖರ್ ಕೂಡ ಝೀ ನ್ಯೂಸ್ ಜೊತೆ ಮಾತನಾಡುವಾಗ ಕಾಂಗ್ರೆಸ್ ನ ಅನೇಕ ಮುಖಂಡರು ಕರೀಂ ಲಾಲಾ ಮತ್ತು ಹಾಜಿ ಮಸ್ತಾನ್ ಅವರ ಭೇಟಿಗೆ ಬರುತ್ತಿದ್ದರು ಎಂದು ಹೇಳಿದ್ದಾರೆ. ಈ ಕುರಿತು ಮಾತನಾಡಿರುವ ಶೇಖರ್, "ಇದು ನಿಜವಾಗಿದ್ದು, ನಾನು ಇದಕ್ಕೆ ಸಾಕ್ಷಿಯಾಗಿದ್ದೇನೆ ಹಾಗೂ ಅವರೆಲ್ಲರೂ ಕಾಂಗ್ರೆಸ್ ನವರಾಗಿದ್ದರು" ಎಂದಿದ್ದಾರೆ. ಸುಂದರ್ ಶೇಖರ್ ಹಾಜಿ ಮಸ್ತಾನ್ ಅವರ ದತ್ತುಪುತ್ರ ಎಂದು ಹೇಳಲಾಗುತ್ತದೆ. ಆದರೆ, ಹಾಜಿ ಮಸ್ತಾನ್ ಎಂದಿಗೂ ಕೂಡ ಕಾನೂನಾತ್ಮಕವಾಗಿ ಸುಂದರ್ ಶೇಖರ್ ದತ್ತು ಪಡೆದಿಲ್ಲ. ಇಡೀ ಪ್ರಾಂತ್ಯದಲ್ಲಿ ಇಂದಿಗೂ ಕೂಡ ಸುಂದರ್ ಶೇಖರ್ ಅವರು ಹಾಜಿ ಮಸ್ತಾನ್ ಅವರ ದತ್ತುಪುತ್ರ ಎಂದು ಫೇಮಸ್ ಆಗಿದ್ದಾರೆ. ಪ್ರಾಂತ್ಯದಲ್ಲಿರುವ ಹಿರಿಯ ನಾಗರಿಕರು ಹಾಗೂ ಹಿರಿಯ ಪತ್ರಕರ್ತರೂ ಕೂಡ ಹಾಜಿ ಮಸ್ತಾನ್, ಸುಂದರ್ ಶೇಖರ್ ಅವನನ್ನು ತನ್ನ ದತ್ತುಪುತ್ರ ಎಂದೇ ಪರಿಚಯಿಸುತ್ತಿದ್ದ ಎಂದಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಹಿರಿಯ ಪತ್ರಕರ್ತ ಬಲಜೀತ್ ಪರಾಮರ್, ಕರೀಂ ಲಾಲಾ ಹಾಗೂ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಮಧ್ಯೆ 1973 ರಲ್ಲಿ ಒಂದು ಭೇಟಿ ನಡೆದಿತ್ತು ಎಂದಿದ್ದಾರೆ. ಖ್ಯಾತ ನಟ ಹಾಗೂ ಕವಿ ಹರೀಂದ್ರನಾಥ್ ಚಟ್ಟೋಪಾಧ್ಯಾಯ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಲು ನಿರ್ಧರಿಸಿದ್ದ ವೇಳೆ, ಕರೀಂ ಲಾಲಾ ರಾಷ್ಟ್ರಪತಿ ಭವನ ನೋಡುವ ಇಚ್ಛೆ ವ್ಯಕ್ತಪಡಿಸಿದ ಅವರ ಜೊತೆಗೆಯೇ ಕರೆದುಕೊಂಡು ಹೋಗಲು ಮನವಿ ಮಾಡಿದ್ದ. ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಹಲವಾರು ಖ್ಯಾತನಾಮರು ಅಲ್ಲಿ ಉಪಸ್ಥಿತರಿದ್ದರು. ಈ ವೇಳೆ ಕರೀಂ ಲಾಲಾ ಹಾಗೂ ಇಂದಿರಾ ಗಾಂಧಿ ಭೇಟಿಯಾಗಿದ್ದರು ಎಂದಿದ್ದಾರೆ.
ಈ ಎಲ್ಲ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿರುವ ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಬಾಳಾಸಾಹೇಬ್ ಥೋರಾತ್, "ಸಂಜಯ್ ರಾವುತ್ ನೀಡಿರುವ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸುತ್ತೇವೆ. ಭವಿಷ್ಯದಲ್ಲಿ ಅವರು ಇಂತಹ ಹೇಳಿಕೆಗಳನ್ನು ನೀಡಬಾರದು. ಈ ಕುರಿತು ನಾವು ಮುಖ್ಯಮಂತ್ರಿ ಉದ್ಧವ್ ಥಾಕ್ರೆ ಬಳಿಯೂ ಕೂಡ ದೂರು ಸಲ್ಲಿಸಿದ್ದೇವೆ" ಎಂದಿದ್ದಾರೆ. ಅತ್ತ ಸಂಜಯ್ ರಾವುತ್ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿರುವ ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶಮುಖ್, "ಸಂಜಯ್ ರಾವುತ್ ಅವರ ಹೇಳಿಕೆಗಳನ್ನು ಆಲಿಸಿದ ಬಳಿಕ ಆ ಬಗ್ಗೆ ರಾಜ್ಯ ಗೃಹ ಸಚಿವಾಲಯದ ಅಭಿಪ್ರಾಯ ತಾವು ಮಂಡಿಸುತ್ತೇನೆ. ಅವರು ಏನು ಹೇಳಿದ್ದಾರೆ ಎಂಬುದನ್ನು ಕೇಳಿ ಅದರ ತನಿಖೆ ನಡೆಸಿ ಬಳಿಕ ತಾವು ಹೇಳಿಕೆ ನೀಡುತ್ತೇನೆ" ಎಂದಿದ್ದಾರೆ.
ಅತ್ತ ಬಿಜೆಪಿ ಕಾಂಗ್ರೆಸ್ ಹಾಗೂ ಭೂಗತ ಜಗತ್ತಿನ ಮಧ್ಯೆ ಇರುವ ನಂಟಿನ ಆರೋಪಗಳ CBI ತನಿಖೆಯಾಗಬೇಕು ಎಂದು ಆಗ್ರಹಿಸಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಮುಖಂಡ ಕಿರಟ್ ಸೋಮಯ್ಯ, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಇದಕ್ಕೆ ಸ್ಪಷ್ಟನೆ ನೀಡಬೇಕು ಮತ್ತು ರಾಜ್ಯದ ಮುಖ್ಯಮಂತ್ರಿಗಳಾಗಿರುವ ಉದ್ಧವ್ ಠಾಕ್ರೆ ಈ ಪ್ರಕರಣದಲ್ಲಿ CBI ತನಿಖೆಗೆ ಆದೇಶಿಸಬೇಕು ಎಂದಿದ್ದಾರೆ.
ಭೂಗತ ಪಾತಕಿ ಕರೀಂ ಲಾಲಾ ಯಾರು?
ಕರೀಂ ಲಾಲಾ ಮುಂಬೈನ ಭೂಗತ ಲೋಕದ ದೊರೆ ಹಾಗೂ ಪಠಾಣ್ ಗ್ಯಾಂಗ್ ನ ಮುಖ್ಯಸ್ಥನಾಗಿದ್ದ. ಹಾಜಿ ಮಸ್ತಾನ್ ಬರುವ ಮುನ್ನ ಮುಂಬೈನ ಎಲ್ಲ ಅಪರಾಧಿಗಳ ಮುಖ್ಯಸ್ಥನಾಗಿದ್ದ. ಆಫ್ಘಾನಿಸ್ತಾನದಲ್ಲಿ ಹುಟ್ಟಿ ಬೆಳೆದ ಈತ ಪಶ್ತೂನ್ ಸಮುದಾಯದ ಜೊತೆ ಸಂಬಂಧ ಹೊಂದಿದ್ದ. ಸಾಮಾಜಿಕ ಕ್ಲಬ್ ಹೆಸರಿನಲ್ಲಿ ಜುಜೂ ಅಡ್ಡೆ ನಡೆಸುತ್ತಿದ್ದ ಎಂದು ಆರೋಪಿಸಲಾಗಿತ್ತು. ಮುಂಬೈ ಪೋರ್ಟ್ ಮೂಲಕ ಆಭರಣ, ಚಿನ್ನ, ವಜ್ರಗಳ ಕಳ್ಳಸಾಗಾಣಿಕೆ ಮಾಡುತ್ತಿದ್ದ ಎನ್ನಲಾಗಿದೆ. ಸ್ವಾತಂತ್ರ್ಯಕ್ಕೂ ಮುನ್ನ ಕಪ್ಪು ವ್ಯಾಪಾರ ನಡೆಸಿ ಅಪಾರ ಪ್ರಮಾಣದ ಹಣ ಈತ ಸಂಪಾದಿಸಿದ್ದ ಎಂದು ಹೇಳಲಾಗುತ್ತದೆ. ಕರೀಂ ಲಾಲಾ, ಹಾಜಿ ಮಸ್ತಾನ್ ಹಾಗೂ ವರದರಾಜನ್ ಮಧ್ಯೆ ಪಾರುಪತ್ಯಕ್ಕಾಗಿ ಪೈಪೋಟಿ ನಡೆಯುತ್ತಿತ್ತು ಎನ್ನಲಾಗಿದೆ. ದಾವುದ್ ಇಬ್ರಾಹಿಮ್ ಜೊತೆ ಕಪ್ಪು ವ್ಯಾಪಾರದಲ್ಲಿ ಈತ ನಡೆಸಿದ್ದ ಪೈಪೋಟಿ ಒಂದು ಕಾಲದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಈ ವೇಳೆ ದಾವುದ್ ಸಹೋದರ ಶಬ್ಬೀರ್ ಹತ್ಯೆಯಲ್ಲಿ ಪಠಾಣ್ ಗ್ಯಾಂಗ್ ಹೆಸರು ಕೇಳಿಬಂದಿತ್ತು. 2002ರಲ್ಲಿ ಕರೀಂ ಲಾಲಾ ನಿಧನ ಹೊಂದಿದ್ದಾನೆ.