ನವದೆಹಲಿ: ಜನವರಿ 10ಕ್ಕೆ ಬಾಕ್ಸ್ ಆಫೀಸ್ ಮೇಲೆ ಏಕಕಾಲಕ್ಕೆ ಬಾಲಿವುಡ್ ನ ಎರಡು ಬಹುನಿರೀಕ್ಷಿತ ಚಿತ್ರಗಳು ಬಿಡುಗಡೆಯಾಗಿವೆ. ಇವುಗಳಲ್ಲಿ ಖ್ಯಾತ ನಟ ಅಜಯ್ ದೇವಗನ್ ಅಭಿನಯದ 'ತಾನಾಜಿ:ದಿ ಅನ್ಸಂಗ್ ವಾರಿಯರ್' ಹಾಗೂ ಖ್ಯಾತ ನಟಿ ದೀಪಿಕಾ ಪಡುಕೋಣೆ ಅಭಿನಯದ 'ಛಪಾಕ್' ಚಿತ್ರ ಶಾಮೀಲಾಗಿವೆ. ಈ ಚಿತ್ರಗಳು ಬಿಡುಗಡೆಗೂ ಮುನ್ನವೇ ಬಾಕ್ಸ್ ಆಫೀಸ್ ಮೇಲೆ ಪರಸ್ಪರ ಜಬರ್ದಸ್ತ್ ಟಕ್ಕರ್ ನೀಡಲಿವೆ ಎಂದು ಅಂದಾಜಿಸಲಾಗಿತ್ತು. ಆದರೆ, ಬಿಡುಗಡೆಯಾದ ಬಳಿಕ 'ತಾನಾಜಿ-ದಿ ಅನ್ಸಂಗ್ ವಾರಿಯರ್' ಎದುರು 'ಛಪಾಕ್' ಚಿತ್ರ ಎಲ್ಲಿಯೂ ನಿಲ್ಲುವುದಿಲ್ಲ ಎಂಬುದು ಇದೀಗ ಸಾಬೀತಾಗಿದೆ. ಹೀಗಂತ ನಾವು ನಿಮಗೆ ಹೇಳುತ್ತಿಲ್ಲ. ಈ ಎರಡೂ ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ನಡೆಸಿದ ಕಲೆಕ್ಷನ್ ಹೇಳುತ್ತಿದೆ.
ಬಾಕ್ಸ್ ಆಫೀಸ್ ಇಂಡಿಯಾ ವರದಿಯ ಪ್ರಕಾರ 'ತಾನಾಜಿ:ದಿ ಅನ್ಸಂಗ್ ವಾರಿಯರ್' ಬಿಡುಗಡೆಯಾದ ಮೊದಲನೆಯ ದಿನ ರೂ.14.50 ಕೋಟಿ ಗಳಿಕೆ ಮಾಡಿದ್ದರೆ, ಇನ್ನೊಂದೆಡೆ ದೀಪಿಕಾ ಅಭಿನಯದ ಚಿತ್ರ 'ಛಪಾಕ್' ಮೊದಲ ದಿನ ಕೇವಲ 4.50 ಕೋಟಿ ರೂ. ಕಲೆ ಹಾಕಿದೆ. ಆದರೆ, ಎರಡನೇ ದಿನ ಈ ಚಿತ್ರ 6ಕೋಟಿ ರೂ. ಕಲೆ ಹಾಕಿದ್ದರೆ, 'ತಾನಾಜಿ' ಎರಡನೇ ದಿನ ರೂ. 20 ಕೋಟಿ ರೂ. ಬಾಚಿದೆ. ಒಟ್ಟಾರೆ ಹೇಳುವುದಾದರೆ, ಬಿಡುಗಡೆಯಾದ ಮೊದಲ ಎರಡು ದಿನಗಳಲ್ಲಿ 'ತಾನಾಜಿ' 34.50ಕೋಟಿ ರೂ.ಗಳನ್ನು ಕಲೆಹಾಕಿದ್ದಾರೆ, 'ಛಪಾಕ್' ಕೇವಲ 10.50 ಕೋಟಿ ರೂ.ಗಳಿಕೆ ಮಾಡಿದೆ.
'ತಾನಾಜಿ: ದಿ ಅನ್ಸಂಗ್ ವಾರಿಯರ್' ಹಾಗೂ 'ಛಪಾಕ್' ಈ ಎರಡು ಚಿತ್ರಗಳು ನಿಜ ಜೀವನದ ಕಥೆಗಳನ್ನು ಆಧರಿಸಿವೆ. ಅಜಯ್ ದೇವಗನ್ ಅವರ ಚಿತ್ರ 'ತಾನಾಜಿ', ತಾನಾಜಿ ಮಾಲುಸರೆ ಹೆಸರಿನ ಯೋಧನ ಕಥೆ ಆಧರಿಸಿದ್ದರೆ, ದೀಪಿಕಾಳ 'ಛಪಾಕ್' ಆಸಿಡ್ ಅಟ್ಯಾಕ್ ನಿಂದ ಬದುಕುಳಿದ ಲಕ್ಷ್ಮಿ ಅಗರ್ವಾಲ್ ಅವರ ಜೀವನವನ್ನು ಆಧರಿಸಿದ ಕಥಾ ಹಂದರ ಹೊಂದಿದೆ. 'ತಾನಾಜಿ' ಚಿತ್ರದಲ್ಲಿ ಅಜಯ್ ದೇವಗನ್ ಜೊತೆಗೆ ಸೈಫ್ ಅಲಿ ಖಾನ್, ಕಾಜೋಲ್, ಶರದ್ ಕೆಳಕರ್, ನೇಹಾ ಶರ್ಮಾ ಹಾಗೂ ಪದ್ಮಾವತಿ ರಾವ್ ಅವರೂ ಕೂಡ ಮುಖ್ಯ ಭೂಮಿಕೆಯಲ್ಲಿ ಕಂಡು ಬಂದಿದ್ದಾರೆ. ಇನ್ನೊಂದೆಡೆ ಮೇಘನಾ ಗುಲ್ಜಾರ್ ನಿರ್ದೇಶನದ 'ಛಪಾಕ್' ದೀಪಿಕಾ ಪಡುಕೋಣೆ ಜೊತೆಗೆ ವಿಕ್ರಾಂತ್ ಮೆಸ್ಸಿ, ಮಧುರಜೀತ್ ಹಾಗೂ ಅಂಕಿತ್ ಭಿಷ್ಟ ಅವರು ಪ್ರಮುಖ ಪಾತ್ರದಲ್ಲಿದ್ದಾರೆ.