ಬೆಂಗಳೂರು: ಬೆಂಗಳೂರಿನಲ್ಲೇ ಉತ್ಕೃಷ್ಟ ಮಟ್ಟದ ಫಿಲ್ಮ್ ಸಿಟಿ ಸ್ಥಾಪನೆಗೆ ಸ್ಥಳ ಗುರುತಿಸಲಾಗಿದೆ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಜತೆ ಚರ್ಚಿಸಿದ ಬಳಿಕ ಸ್ಥಳ ನಿಗದಿ ಪಡಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ (Dr CN Ashwathnarayan) ಬುಧವಾರ ತಿಳಿಸಿದ್ದಾರೆ.
ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ಸಭೆ ಸೇರಿದಂತೆ ಫಿಲ್ಮ್ ಸಿಟಿ, ರೋರಿಚ್ ಆರ್ಟ್ ಅಂಡ್ ಕ್ರಾಫ್ಟ್ ಮ್ಯೂಸಿಯಂ ಸ್ಥಾಪನೆ ಕುರಿತ ಸಭೆಯಲ್ಲಿ ಪಾಲ್ಗೊಂಡ ನಂತರ ಮಾಧ್ಯಮದವರ ಜತೆ ಮಾತನಾಡಿದ ಉಪಮುಖ್ಯಮಂತ್ರಿ ಡಾ. ಸಿ.ಎನ್ ಅಶ್ವತ್ಥನಾರಾಯಣ, "ಬೆಂಗಳೂರಿನಲ್ಲಿ ಫಿಲ್ಮ್ ಸಿಟಿ ಸ್ಥಾಪಿಸಲು ಜಾಗ ಗುರುತು ಮಾಡಲಾಗಿದೆ. ಮುಖ್ಯಮಂತ್ರಿಗಳ ಜತೆ ಈ ವಿಷಯ ಚರ್ಚಿಸಿ ಅವರ ಅನುಮೋದನೆ ಬಳಿಕ ಸ್ಥಳ ನಿಗದಿ ಪಡಿಸಲಾಗುತ್ತದೆ. ವಿಶ್ವ ಹಾಗೂ ದೇಶದಲ್ಲಿರುವ ಹಲವು ಪ್ರಮುಖ ಫಿಲ್ಮ್ ಸಿಟಿಗಳನ್ನು ನೋಡಿದ್ದೇವೆ, ಅವೆಲ್ಲಕ್ಕಿಂತ ವಿಭಿನ್ನ ಹಾಗೂ ವಿಶಿಷ್ಟವಾದಂಥ ಫಿಲ್ಮ್ ಸಿಟಿ ಸ್ಥಾಪಿಸುವುದು ನಮ್ಮ ಸರ್ಕಾರದ ಕನಸು. ಅನಿಮೇಷನ್ ಕೇಂದ್ರ, ಚಿತ್ರ ನಿರ್ಮಾಣ ಹಾಗೂ ನಿರ್ಮಾಣದ ನಂತರ ಪ್ರಕ್ರಿಯೆಗಳಿಗೆ ಅನುಕೂಲವಾಗುವಂಥ ಫಿಲ್ಮ್ ಸಿಟಿ ಸ್ಥಾಪಿಸಬೇಕು. ಪ್ರವಾಸೋದ್ಯಮಕ್ಕೂ ಪೂರಕವಾಗಿರುವಂಥ ಈ ಫಿಲ್ಮ್ ಸಿಟಿ ಹೇಗಿರಬೇಕು, ಅದರ ವಿಸ್ತೀರ್ಣ ಎಷ್ಟಿರಬೇಕು ಎಂಬ ಬಗ್ಗೆ ಚರ್ಚೆ ನಡೆದಿದ್ದು, ಶೀಘ್ರದಲ್ಲೇ ಈ ಬಗ್ಗೆ ಪೂರ್ಣ ಮಾಹಿತಿ ಹಂಚಿಕೊಳ್ಳುತ್ತೇವೆ," ಎಂದು ತಿಳಿಸಿದರು.
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಏಕಿಲ್ಲಾ ಫಿಲ್ಮ್ ಸಿಟಿ?
ಮೈಸೂರಿನಲ್ಲಿ ಫಿಲ್ಮ್ ಸಿಟಿ ಏಕಿಲ್ಲ ಎಂಬ ಪ್ರಶ್ನೆಗೆ ಸ್ಪಷ್ಟನೆ ನೀಡಿದ ಸಚಿವರು, "ಬೆಂಗಳೂರು ನಗರ ವಿಶ್ವಕ್ಕೆ ಅನಿಮೇಷನ್ ಕೊಟ್ಟಿದೆ. 'ಲಯನ್ ಕಿಂಗ್', 'ಅವತಾರ್' ನಂತಹ ಚಿತ್ರಗಳ ಅನಿಮೇಷನ್ ಬೆಂಗಳೂರಿನಲ್ಲೇ ಆಗಿದೆ. ಯಾವುದೇ ಒಂದೆರೆಡು ವಿಷಯಕ್ಕೆ ಸೀಮಿತವಾಗಿರದೇ ಎಲ್ಲವನ್ನು ಒಳಗೊಂಡಂಥ ಅತ್ಯುತ್ತಮವಾದ ಫಿಲ್ಮ್ ಸಿಟಿ ನಿರ್ಮಾಣ ಆಗಬೇಕು ಎಂಬುದಷ್ಟೇ ನಮ್ಮ ಗುರಿ," ಎಂದರು.
*ರೋರಿಚ್ ಆರ್ಟ್ ಕ್ರಾಫ್ಟ್ ವಿಲೇಜ್*
"ದೇವಿಕಾರಾಣಿ ಮತ್ತು ರೋರಿಚ್ ಅವರ ಎಸ್ಟೇಟ್ ಸಿನಿಮಾ, ಕಲೆ, ಸಂಸ್ಕೃತಿ, ಅಧ್ಯಾತ್ಮ, ಪ್ರಕೃತಿ ಸೌಂದರ್ಯವನ್ನು ಒಳಗೊಂಡ ಅದ್ಭುತ ತಾಣ. ಹಾಗಾಗಿ ಅಲ್ಲಿಯೇ ಆರ್ಟ್ ಅಂಡ್ ಕ್ರಾಫ್ಟ್ ವಿಲೇಜ್ ಸ್ಥಾಪಿಸುವ ನಿರ್ಧಾರ ಮಾಡಲಾಗಿದೆ. ಎಸ್ಟೇಟ್ ಅನ್ನು ಇಡೀ ದೇಶವೇ ಹೆಮ್ಮೆಪಡುವಂಥ ಸಾಂಸ್ಕೃತಿಕ ತಾಣವಾಗಿ ಅಭಿವೃದ್ಧಿಪಡಿಸಲಾಗುವುದು,' ಎಂದು ಅವರು ವಿವರಿಸಿದರು.
*ನಾಡಪ್ರಭುವಿನ 80 ಅಡಿ ಪ್ರತಿಮೆ*
"ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ(BS Yediyurappa) ಅವರ ಸೂಚನೆ ಮೇರೆಗೆ ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ಸಭೆ ನಡೆಯಿತು. ಈ ಸಂದರ್ಭದಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾಡಪ್ರಭುವಿನ 80 ಅಡಿ ಎತ್ತರದ ಪ್ರತಿಮೆ ಹಾಗೂ ಕೆಂಪೇಗೌಡರು ಅಂದು ಅಭಿವೃದ್ಧಿಪಡಿಸಿದ್ದ 46 ತಾಣಗಳ ಉಳಿಸಿ ಅವುಗಳ ಪುನರುಜ್ಜೀವನ ಮಾಡುವ ಸಂಬಂಧ ವಿಸ್ತೃತ ಚರ್ಚೆ ನಡೆಯಿತು. ಈ ಎಲ್ಲ 46 ತಾಣಗಳಿಗೆ ಜನ ಭೇಟಿ ಕೊಟ್ಟು, ಅದರ ಮಹತ್ವ ಅರಿಯುವ ಜತೆಗೆ ಈ ನಾಡಿಗೆ ಕೆಂಪೇಗೌಡರ ಕೊಡುಗೆಗಳ ಬಗ್ಗೆಯೂ ತಿಳಿಯಬೇಕು ಎಂಬುದು ನಮ್ಮ ಸರ್ಕಾರದ ಆಶಯ," ಎಂದು ಡಾ. ಅಶ್ವತ್ಥನಾರಾಯಣ ಹೇಳಿದರು.
"ಕೆಂಪೇಗೌಡರ ಹೆಸರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ 23 ಎಕರೆ ಥೀಮ್ ಪಾರ್ಕ್ ಅಭಿವೃದ್ಧಿಪಡಿಸಲಾಗುವುದು. ಅದೇ ಉದ್ಯಾನದಲ್ಲಿ ಕೆಂಪೇಗೌಡರ 80 ಅಡಿಯ ಪ್ರತಿಮೆ ಸ್ಥಾಪನೆಗೆ ಜಾಗ ನಿಗದಿ ಮಾಡಲಾಗಿದೆ. ಸಭೆಯಲ್ಲಿ ಪಾಲ್ಗೊಂಡ ಹೆಸರಾಂತ ಕಂಪನಿಗಳು ಪ್ರತಿಮೆ, ವಿನ್ಯಾಸ, ಪರಿಕಲ್ಪನೆ ಕುರಿತು ಚರ್ಚಿಸಿದವು. ಜತೆಗೆ, 46 ತಾಣಗಳಲ್ಲಿ ಏನೆಲ್ಲ ಕೆಲಸಗಳಾಗಬೇಕು ಎಂಬ ಬಗ್ಗೆಯೂ ಯೋಜನೆ ಸಿದ್ಧವಾಗಿದೆ. ಎಲ್ಲವೂ ನಿಗದಿಯಾದ ಬಳಿಕ ಪರಿಕಲ್ಪನೆ, ಖರ್ಚಾಗುವ ಹಣ, ಯೋಜನೆ ರೂಪಿಸಲಿರುವ ಕಂಪನಿ ಯಾವುದು, ಶಿಲ್ಪಿ ಯಾರು ಮುಂತಾದ ಎಲ್ಲ ವಿಷಯಗಳ ಬಗ್ಗೆ ಮಾಹಿತಿ ನೀಡಲಾಗುವುದು," ಎಂದು ಅವರು ತಿಳಿಸಿದರು.