ನವದೆಹಲಿ: 2020 ರ ಫೆಬ್ರವರಿ 8 ರಂದು ದೆಹಲಿ ವಿಧಾನಸಭೆ ಚುನಾವಣೆ(Delhi assembly election) ನಡೆಯಲಿದೆ ಎಂದು ಸೋಮವಾರ (ಜನವರಿ 6) ಚುನಾವಣಾ ಆಯೋಗ ಘೋಷಿಸಿದ ಸ್ವಲ್ಪ ಸಮಯದ ನಂತರ ಮಾತನಾಡಿದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್(Arvind Kejriwal) ಕಳೆದ ಐದು ವರ್ಷಗಳಲ್ಲಿ ಆಮ್ ಆದ್ಮಿ ಪಕ್ಷ (AAP) ಮಾಡಿದ ಕಾರ್ಯಗಳ ಮೇಲೆ ದೆಹಲಿಯಲ್ಲಿ ಮುಂಬರುವ ಚುನಾವಣೆ ನಡೆಯಲಿದೆ ಎಂದು ಹೇಳಿದರು.
"ಬಿಜೆಪಿ ದೆಹಲಿ ಪೊಲೀಸ್, ಮಹಾನಗರ ಪಾಲಿಕೆ ಮತ್ತು ಡಿಡಿಎಯನ್ನು ನಿಯಂತ್ರಿಸುತ್ತದೆ. ಆದರೆ ನಮ್ಮ ಪಕ್ಷವು ಶಿಕ್ಷಣ, ವಿದ್ಯುತ್, ರಸ್ತೆಗಳು, ನೀರು ಸರಬರಾಜು ಮತ್ತು ನಿರ್ಮಾಣ ಕಾರ್ಯಗಳನ್ನು ನಿಯಂತ್ರಿಸುತ್ತದೆ. ದೆಹಲಿಯ ಜನರು ಈಗ ಯಾವ ಪಕ್ಷ ಉತ್ತಮ ಕೆಲಸ ಮಾಡಿದೆ ಎಂಬುದನ್ನು ನಿರ್ಧರಿಸುತ್ತಾರೆ. ನಾವು ಯಾವುದೇ ಕೆಲಸ ಮಾಡಿಲ್ಲ ಎಂದು ನೀವು ಭಾವಿಸಿದರೆ, ನಮಗೆ ಮತ ಹಾಕಬೇಡಿ" ಎಂದು ಕೇಜ್ರಿವಾಲ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ದೆಹಲಿ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (CAA) ಸಮಸ್ಯೆಯಾಗುತ್ತದೆಯೇ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕೇಜ್ರಿವಾಲ್, ದೆಹಲಿಯಲ್ಲಿ ಸಿಎಎ ಯಾವುದೇ ಪಾತ್ರವನ್ನು ವಹಿಸುವುದಿಲ್ಲ ಮತ್ತು ರಾಷ್ಟ್ರ ರಾಜಧಾನಿಯ ಜನರು ಅಭಿವೃದ್ಧಿಗೆ ಮಾತ್ರ ಮತ ಚಲಾಯಿಸುತ್ತಾರೆ ಎಂದು ವಿಶ್ವಾಸದಿಂದ ನುಡಿದರು.
"ನಾನು ಇಡೀ ದೆಹಲಿಗಾಗಿ ಕೆಲಸ ಮಾಡಿದ್ದೇನೆ - ನಮ್ಮ ಬೆಂಬಲಿಗರು ಯಾರು, ಯಾರು ಬಿಜೆಪಿ ಮತ್ತು ಕಾಂಗ್ರೆಸ್ ಬೆಂಬಲಿಗರು ಎಂದು ಎಂದಿಗೂ ನೋಡಿಲ್ಲ. ದೆಹಲಿ ಚುನಾವಣೆಗಳು ಪೌರತ್ವ ತಿದ್ದುಪಡಿ ಕಾಯ್ದೆಯ ಮೇಲೆ ನಡೆಯುವುದಿಲ್ಲ. ದೆಹಲಿಯಲ್ಲಿ ರಸ್ತೆಗಳು, ವಿದ್ಯುತ್, ನೀರು ಮತ್ತು ಅಭಿವೃದ್ಧಿಯ ಮೇಲೆ ಹೋರಾಡಲಾಗುವುದು" ಎಂದು ದೆಹಲಿ ಮುಖ್ಯಮಂತ್ರಿ ಹೇಳಿದರು.
ಎಎಪಿ ವಿಜಯದ ವಿಶ್ವಾಸದಿಂದ ಕಾಣಿಸಿಕೊಂಡ ಕೇಜ್ರಿವಾಲ್, ದೆಹಲಿಯ ಜನರು ಎಎಪಿಗೆ ಮತ ಚಲಾಯಿಸಲು ನಿರ್ಧರಿಸಿದ್ದಾರೆ ಮತ್ತು ಈ ಬಾರಿ 70 ಸ್ಥಾನಗಳಲ್ಲಿ 67 ಕ್ಕೂ ಹೆಚ್ಚು ಸ್ಥಾನಗಳನ್ನು ಪಕ್ಷ ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ದೆಹಲಿ ವಿಧಾನಸಭಾ ಚುನಾವಣೆಗಳು ಅರವಿಂದ್ ಕೇಜ್ರಿವಾಲ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನಡುವಿನ ನೇರ ಹೋರಾಟ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ದೆಹಲಿ ಸಿಎಂ, ಪ್ರಧಾನಿ ಮೋದಿ ಪ್ರಧಾನ ಮಂತ್ರಿ ಸ್ಥಾನದಿಂದ ದೆಹಲಿ ಮುಖ್ಯಮಂತ್ರಿಯಾಗುವ ಸಾಧ್ಯತೆಯಿಲ್ಲ ಎಂದು ಹಾಸ್ಯ ಚಟಾಕಿ ಹಾರಿಸಿದರು. "ಸಿಎಂ ಆಗಲು ಪ್ರಧಾನಿ ತಮ್ಮ ಸ್ಥಾನವನ್ನು ತ್ಯಜಿಸುವುದಿಲ್ಲ. ಅದು ಹೇಗೆ ಸಂಭವಿಸುತ್ತದೆ ಎಂದು ನನಗೆ ಕಾಣುತ್ತಿಲ್ಲ" ಎಂದರು.
ಇದಕ್ಕೂ ಮುನ್ನ ಸೋಮವಾರ, ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಸುನಿಲ್ ಅರೋರಾ ಅವರು ಪತ್ರಿಕಾಗೋಷ್ಠಿ ನಡೆಸಿ 2020 ರ ಫೆಬ್ರವರಿ 8 ರಂದು ದೆಹಲಿಯಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಫೆಬ್ರವರಿ 11 ರಂದು ಮತ ಎಣಿಕೆ ನಡೆಯಲಿದೆ ಎಂದು ಘೋಷಿಸಿದರು. 2020 ರ ಜನವರಿ 14 ರಂದು ಅಧಿಸೂಚನೆ ಹೊರಡಿಸಲಾಗುವುದು ಮತ್ತು ಕೊನೆಯ ನಾಮನಿರ್ದೇಶನ 2020 ಜನವರಿ 21 ಎಂದು ಅರೋರಾ ಹೇಳಿದರು. ನಾಮನಿರ್ದೇಶನದ ಪರಿಶೀಲನೆ ಜನವರಿ 22 ರಂದು ನಡೆಯಲಿದೆ. ನಾಮಪತ್ರಗಳನ್ನು ಹಿಂಪಡೆಯಲು ಜನವರಿ 24 ಕೊನೆಯ ದಿನಾಂಕ ಆಗಿರುತ್ತದೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಿಇಸಿ ಅರೋರಾ, ದೆಹಲಿಯಾದ್ಯಂತ ಮತದಾನ ಪ್ರಕ್ರಿಯೆ ಸುಗಮವಾಗಿ ನಡೆಯುವಂತೆ 90,000 ಪೊಲೀಸರನ್ನು ನಿಯೋಜಿಸಲಾಗುವುದು. ಮತದಾನ ಕರ್ತವ್ಯದಲ್ಲಿ ಅಧಿಕಾರಿಗಳ ಯಾವುದೇ ಹೆಚ್ಚುವರಿ ನಿಯೋಜನೆಯನ್ನು ಹೆಚ್ಚುವರಿ ಕಾರ್ಯದರ್ಶಿ ನಿಭಾಯಿಸುತ್ತಾರೆ. ಚುನಾವಣಾ ವೇಳಾಪಟ್ಟಿಯ ಘೋಷಣೆ ಎಂದರೆ ದೆಹಲಿಯಲ್ಲಿ ಮಾದರಿ ನೀತಿ ಸಂಹಿತೆ ಕೂಡಲೇ ಜಾರಿಗೆ ಬರಲಿದೆ ಎಂದು ಅರೋರಾ ಮಾಧ್ಯಮಗಳಿಗೆ ತಿಳಿಸಿದರು.