ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳು ಇನ್ನಿಲ್ಲ, ಗಣ್ಯರಿಂದ ಸಂತಾಪ ಸೂಚನೆ

ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಶ್ರೀ ವಿಶ್ವೇಶ ತೀರ್ಥ ಶ್ರೀಗಳು ಕೊನೆಯುಸಿರೆಳೆದಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿತ್ತು.

Written by - Nitin Tabib | Last Updated : Dec 29, 2019, 12:49 PM IST
ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳು ಇನ್ನಿಲ್ಲ, ಗಣ್ಯರಿಂದ ಸಂತಾಪ ಸೂಚನೆ title=
Photo Courtesy: ANI

ಬೆಂಗಳೂರು: ಉಡುಪಿಯ ಪೇಜಾವರ ಮಠದ ಮುಖ್ಯಸ್ಥರಾಗಿದ್ದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಗಳು ನಿಧನರಾಗಿದ್ದಾರೆ. ಪೇಜಾವರ ಶ್ರೀಗಳು ಎಂದೇ ಖ್ಯಾತ ಶ್ರೀ ವಿಶ್ವೇಶತೀರ್ಥ ಸ್ವಾಮಿಗಳಿಗೆ 88 ವರ್ಷ ವಯಸ್ಸಾಗಿತ್ತು.  ಕಳೆದ ಹಲವಾರು ದಿನಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಮಣಿಪಾಲದ MC ಮಣಿಪಾಲ್ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. 

ಆದರೆ ಅವರ ಆರೋಗ್ಯದಲ್ಲಿ ಯಾವುದೇ ವಿಶೇಷ ಬದಲಾವಣೆ ಕಂಡುಬಂದಿರಲಿಲ್ಲ ಮತ್ತು ಆರೋಗ್ಯ ಸ್ಥಿತಿ ಗಂಭೀರ ಹಾಗೂ ಸ್ಥಿರವಾಗಿ ಮುಂದುವರೆದಿತ್ತು. ಈ ಹಿನ್ನೆಲೆಯಲ್ಲಿ ಸ್ವಾಮೀಜಿ ಅವರ ಅಂತಿಮ ಇಚ್ಛೆಯಂತೆ ಅವರನ್ನು ರವಿವಾರ ಬೆಳಗ್ಗೆ ಮಠಕ್ಕೆ ವಾಪಸ್ ಕರೆತರಲಾಗಿದ್ದು, ಮಠದಲ್ಲಿ ಅವರು ಕೊನೆಯುಸಿರೆಳೆಡಿದ್ದಾರೆ.

ಹಿಂದೂ ಫಿಲಾಸಾಫಿಯ ದ್ವೈತ ಸಿದ್ಧಾಂತವನ್ನು ಪೇಜಾವರ ಮಠ ಪ್ರತಿಪಾದಿಸುತ್ತದೆ. ಶ್ರೀ ವಿಶ್ವೇಶ ತೀರ್ಥರು ಮಠದ 32ನೇ ಮಠಾಧೀಶರಾಗಿದ್ದರು. ಪೇಜಾವರ ಮಠದ ಆಧೀನ 8 ಇತರೆ ಮಠಗಳು ಬರುತ್ತವೆ(ಅಷ್ಟಮಠಗಳು). ಈ ಎಲ್ಲಾ ಮಠಗಳಿಗೆ ಪೇಜಾವರ ಮಠಾಧೀಶರೇ ಮುಖ್ಯಸ್ತರು.

ಮಾಜಿ ಕೇಂದ್ರ ಸಚಿವೆ ಹಾಗೂ ಬಿಜೆಪಿ ಮುಖಂಡೆ ಉಮಾ ಭಾರತಿ ಶ್ರೀ ವಿಶ್ವೇಶ ತೀರ್ಥರಿಗೆ ತಮ್ಮ  ಗುರುವಿನ ಸ್ಥಾನ ನೀಡಿದ್ದಾರೆ ಹಾಗೂ ಕಳೆದ ಹಲವಾರು ದಿನಗಳಿಂದ ಉಮಾ ಭಾರತಿ ಉಡುಪಿಯಲ್ಲಿಯೇ ವಾಸವಾಗಿದ್ದು, ಶ್ರೀಗಳ ಆರೋಗ್ಯ ಚೇತರಿಕೆಗೆ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಸ್ವಾಮೀಜಿ ಅವರ ಅನಾರೋಗ್ಯ ಸ್ಥಿತಿ ಹಿನ್ನೆಲೆ ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೂಡ ಆಸ್ಪತ್ರೆಗೆ ಭೇಟಿ ನೀಡಿ ಶ್ರೀಗಳ ಆರೋಗ್ಯದ ವಿಚಾರಣೆ ನಡೆಸಿದ್ದರು. ಸದ್ಯ ಮುಖ್ಯಮಂತ್ರಿಗಳು ಉಡುಪಿಯಲ್ಲಿಯೇ ಬೀಡುಬಿಟ್ಟಿದ್ದಾರೆ.  

ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಸ್ವತಃ ವಿಶ್ವೇಶತೀರ್ಥ ಶ್ರೀಗಳೇ ದೆಹಲಿಗೆ ಭೇಟಿ ನೀಡಿ ಮೋದಿ ಅವರಿಗೆ ಆಶೀರ್ವಾದ ಮಾಡಿದ್ದರು. ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜೀ ಅವರೂ ಕೂಡ ರಾಷ್ಟ್ರಪತಿಯಾಗಿದ್ದ ವೇಳೆ ಉಡುಪಿಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅವರು ವಿಶೇಷವಾಗಿ ಪೇಜಾವರ ಶ್ರೀಗಳ ದರ್ಶನ ಪಡೆದಿದ್ದರು. 

1931ರಲ್ಲಿ ಜನಿಸಿದ್ದ ಶ್ರೀ ವಿಶ್ವೇಶತೀರ್ಥರು ತಮ್ಮ 8ನೇ ವರ್ಷದಲ್ಲಿಯೇ ಸನ್ಯಾಸಾಶ್ರಮದ ದೀಕ್ಷೆ ಪಡೆದುಕೊಂಡಿದ್ದರು. ಧರ್ಮದ ಜೊತೆಗೆ ರಾಜಕೀಯದ ಕುರಿತು ಕೂಡ ಅವರು ಚರ್ಚೆಗಳನ್ನು ನಡೆಸುತ್ತಿದ್ದರು. ಒಂದೆಡೆ ಸನಾತನ ಧರ್ಮದೆಡೆಗೆ ಸಮರ್ಪಿದರಾಗಿದ್ದ ಪೇಜಾವರ ಶ್ರೀಗಳು ಇನ್ನೊಂದೆಡೆ ರಮಜಾನ್ ಹಬ್ಬದ ಸಂದರ್ಭದಲ್ಲಿ ಮುಸ್ಲಿಂ ಬಾಂಧವರಿಗಾಗಿ ಮಠದಲ್ಲಿ ಪ್ರಾರ್ಥನೆ ಸಲ್ಲಿಸಲು ಹಾಗೂ ಇಫ್ತಾರ್ ಕೂಟ ಆಯೋಜಿಸಲು ಅವಕಾಶ ಕಲ್ಪಿಸಿ ಧಾರ್ಮಿಕ ಸಾಮರಸ್ಯದ ಪರಿಚಯ ನೀಡಿದ್ದರು.

ಪೇಜಾವರ ಶ್ರೀಗಳ ನಿಧನಕ್ಕೆ ಸಿಎಂ ಸಂತಾಪ ಸೂಚನೆ
ಉಡುಪಿಯ ಶ್ರೀಕೃಷ್ಣಮಠದಲ್ಲಿ ಪೇಜಾವರ ಶ್ರೀಗಳ ಅಂತಿಮ ದರ್ಶನ ಪಡೆದ ಸಿಎಂ ಬಿ. ಎಸ್ ಯಡಿಯೂರಪ್ಪ, ಸ್ವಾಮೀಜಿಗಳನ್ನು ಕಳೆದುಕೊಂಡ ರಾಜ್ಯ ಮತ್ತು ದೇಶ ಬಡವಾಗಿದೆ ಎಂದಿದ್ದಾರೆ. ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣಕ್ಕಾಗಿ ನಡೆದ ಚಳುವಳಿಯಲ್ಲಿ ಸ್ವಾಮೀಜಿಗಳ ಜೊತೆಗಿದ್ದವರಲ್ಲಿ ನಾನೂ ಶಾಮೀಲಾಗಿದ್ದೆ . ಸಮಾಜದ ಒಳಿತಿಗಾಗಿ ಸದಾ ಪ್ರವಾಸದಲ್ಲಿರುತ್ತಿದ್ದ ಇಂತಹ ಅಪರೂಪದ ಯತಿಗಳನ್ನು ಕಳೆದುಕೊಂಡು ಈ ದೇಶ ಬಡವಾಗಿದೆ ಎಂದಿದ್ದಾರೆ.

ಕೃಷ್ಣೈಕ್ಯರಾದ ಪೇಜಾವರ ಶ್ರೀಗಳಿಗೆ ಪ್ರಧಾನಿ ಸಂತಾಪ ಸೂಚನೆ
ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರ ನಿಧನಕ್ಕೆ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯ ಮೂಲಕ ಸಂತಾಪ ಸೂಚಿಸಿರುವ ಪ್ರಧಾನಿ ನರೇಂದ್ರ ಮೋದಿ,  "ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಗಳು ಲಕ್ಷಾಂತರ ಜನರ ಹೃದಯ ಮತ್ತು ಮನಸ್ಸಿನಲ್ಲಿ ಒರ್ವ ಮಾರ್ಗದರ್ಶಕ ಕಿರಣವಾಗಿ ಚಿರಕಾಲ ಉಳಿಯಲಿದ್ದಾರೆ. ಸೇವೆ ಮತ್ತು ಆಧ್ಯಾತ್ಮಿಕತೆಯ ಶಕ್ತಿ ಕೇಂದ್ರವಾಗಿದ್ದ ಅವರು, ಅತ್ಯಂತ ನ್ಯಾಯಯುತ ಮತ್ತು ಸಹಾನೂಭೂತಿಯಿಂದ ಒಳಗೊಂಡ ಸಮಾಸ್ಜಕ್ಕಾಗಿ ನಿರಂತರವಾಗಿ ಶ್ರಮಿಸಿದ್ದಾರೆ. ಓಂಶಾಂತಿ" ಎಂದು ಟ್ವೀಟ್ ಮಾಡಿದ್ದರೆ. ಅಷ್ಟೇ ಅಲ್ಲ ಶ್ರೀಗಳ ಜೊತೆಗಿನ ತಮ್ಮ ಒಡನಾಟವನ್ನು ಸ್ಮರಿಸಿಕೊಂಡಿರುವ ಪ್ರಧಾನಿಗಳು "ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ  ಅವರಿಂದ ತಮಗೆ ಕಲಿಯುವ ಸಾಕಷ್ಟು ಅವಕಾಶಗಳು ದೊರೆತಿದ್ದು, ನನಗೆ ಸಿಕ್ಕ ಆಶಿರ್ವಾದ ಎಂದು ನಾನು ಭಾವಿಸುತ್ತೇನೆ. ಇತ್ತೀಚೆಗಷ್ಟೇ ಗುರು ಪೌರ್ಣಿಮೆಯ ವಿಶೇಷ ದಿನದಂದು ತಾವು ಶ್ರೀಗಳ ದರ್ಶನ ಪಡೆದಿರುವುದು ಒಂದು ಸ್ಮರಣೀಯ ಅನುಭವವಾಗಿತ್ತು. ಅವರು ಹೊಂದಿದ ಅಪಾರ ಜ್ಞಾನ ಅವರಲ್ಲಿ ಎದ್ದುಕಾಣುತ್ತಿತ್ತು.   ಶ್ರೀಗಳ ಕುರಿತಾದ ನನ್ನ ಆಲೋಚನೆಗಳು ಶ್ರೀಗಳ ಅಸಂಖ್ಯಾತ ಅನುಯಾಯಿಗಳ ಜೊತೆಗೆ ಇರಲಿವೆ " ಎಂದು ಪ್ರಧಾನಿ ಹೇಳಿದ್ದಾರೆ.

ಪೇಜಾವರ ಶ್ರೀಗಳ ಅಗಲಿಕೆಗೆ ಸಂತಾಪ ಸೂಚಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ 
ಉಡುಪಿಯ ಪೇಜಾವರ ಮಠದ ಶ್ರೀ ಶ್ರೀ ವಿಶ್ವೇಶತೀರ್ಥ ಸ್ವಾಮಿ ಅವರ ನಿಧನದ ಸುದ್ದಿ ತಿಳಿದು ತೀವ್ರ ನೋವಾಗಿದೆ. ಅವರು ಮಾನವೀಯತೆ, ದಯೆ ಮತ್ತು ಜ್ಞಾನದ ಶಕ್ತಿಕೇಂದ್ರವಾಗಿದ್ದರು. ಜನರ ಹಾಗೂ ಸಮಾಜದ ಒಳಿತಿಗಾಗಿ ಅವರು ನೀಡಿದ ನಿಸ್ವಾರ್ಥ ಕೊಡುಗೆಗೆ ಸರಿಸಾಟಿ ಯಾವುದು ಇಲ್ಲ." ಎಂದಿದ್ದಾರೆ. ಈ ಕುರಿತು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿರುವ ಶಾ, " ಸಕಾರಾತ್ಮತೆಯ ಕೇಂದ್ರವಾಗಿದ್ದ, ಶ್ರೀವಿಶ್ವೇಶತೀರ್ಥ ಸ್ವಾಮಿಜಿಗಳ ಬೋಧನೆಗಳು ಮತ್ತು ಆಲೋಚನೆಗಳು ಯಾವಾಗಲು ನಮಗೆ ಮಾರ್ಗದರ್ಶನ ನೀಡುತ್ತಲೇ ಇರಲಿವೆ. ನಾನೂ ಕೂಡ ಅವರ ಆಶೀರ್ವಾದ ಪಡೆದ ಅದೃಷ್ಟಶಾಲಿ. ಅವರ ನಿಧನ ಆಧ್ಯಾತ್ಮಿಕ್ಕ ಜಗತ್ತಿಗೆ ತುಂಬಲಾರದ ನಷ್ಟ. ಅವರ ಅನುಯಾಯಿಗಳ ದುಃಖದಲ್ಲಿ ನಾನೂ ಕೂಡ ಸಹಭಾಗಿ" ಎಂದಿದ್ದಾರೆ.

ಪೇಜಾವರ ಶ್ರೀಗಳ ನಿಧಾನಕ್ಕೆ ಕಂಬನಿ ಮಿಡಿದ ಅವರ ಶಿಷ್ಯೆ ಉಮಾ ಭಾರತಿ
ಅಯೋಧ್ಯೆಯಲ್ಲಿ ಭವ್ಯರಾಮಮಂದಿರ ನಿರ್ಮಾಣಕ್ಕಾಗಿ ನಡೆದ ಚಳುವಳಿಯಲ್ಲಿ ಪೇಜಾವರ ಶೀಗಳ ಜೊತೆಗಿದ್ದ ಹಾಗೂ ಅವರನ್ನು ತಮ್ಮ ಗುರು ಎಂದೇ ಭಾವಿಸುವ ಮಾಜಿ ಕೇಂದ್ರ ಸಚಿವೆ ಉಮಾ ಭಾರತಿ, ಪೇಜಾವರ ಶೀಗಳ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಕಳೆದ ಹಲವು ದಿನಗಳಿಂದ ಉಮಾ ಭಾರತಿ ಉಡುಪಿಯಲ್ಲಿಯೇ ವಾಸವಾಗಿದ್ದು, ಶ್ರೀಗಳ ಶೀಘ್ರ ಚೇತರಿಕೆಗೆ ಪ್ರಾರ್ಥನೆ ಸಲ್ಲಿಸುತ್ತಿದ್ದರು.

ಶ್ರೀ ವಿಶ್ವೇಶತೀರ್ಥರ ಅಗಲಿಕೆಗೆ ಗಣ್ಯರ ಸಂತಾಪ ಸೂಚನೆ 
ಶ್ರೀ ವಿಶ್ವೇಶತೀರ್ಥರ ನಿಧಾನಕ್ಕೆ ಸಂತಾಪ ಸೂಚಿಸಿರುವ ಮಾಜಿ ಸಿಎಂ ಸಿದ್ಧರಾಮಯ್ಯ "ಹಿಂದೂ ಧರ್ಮದ ಸುಧಾರಣೆಗೆ ಅವಿರತವಾಗಿ ಪ್ರಯತ್ನ ಮಾಡುತ್ತಾ ಬಂದ.. ನೇರ ನಡೆ-ನುಡಿ ಮೂಲಕ ಎಲ್ಲರ ಪ್ರೀತಿ-ಅಭಿಮಾನಕ್ಕೆ ಪಾತ್ರರಾಗಿದ್ದ.. ಸದಾ ಹೊಸ ಆಲೋಚನೆಗಳ ಪ್ರಯೋಗಶೀಲ ಮನಸ್ಸು ಹೊಂದಿದ ಪೂಜ್ಯರಾದ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳ ನಿಧನಕ್ಕೆ ನನ್ನ ಸಂತಾಪಗಳು" ಎಂದಿದ್ದಾರೆ.

ವಿಶ್ವೇಶತೀರ್ಥರು ಕೃಷ್ಣೈಕ್ಯರಾದ ಬಳಿಕ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆ ಮೂಲಕ ಟ್ವೀಟ್ ಮಾಡಿರುವ ಮಾಜಿ ಪ್ರಧಾನಿ ದೇವೇಗೌಡ, " ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಗಳು ಕೃಷ್ಣೈಕ್ಯರಾದರು ಎಂಬ ವಿಷಯ ತೀವ್ರ ಆಘಾತವನ್ನುಂಟುಮಾಡಿದೆ. ಸಮಾಜದ ಅಸಮಾನತೆಗಳ ವಿರುದ್ಧ ಧ್ವನಿಯಾಗಿದ್ದ ಶ್ರೀಗಳ ಚಿಂತನೆಗಳು ನಮ್ಮೆಲ್ಲರಿಗೂ ಮಾದರಿ. ಶ್ರೀಗಳ ಭಕ್ತವೃಂದಕ್ಕೆ ಈ ಯುಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ" ಎಂದಿದ್ದಾರೆ.

ಮತ್ತೋರ್ವ ಮಾಜಿ ಸಿಎಂ ಕುಮಾರಸ್ವಾಮಿ ಅವರೂ ಕೂಡ ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದು, "ಪರಮಪೂಜ್ಯ ಉಡುಪಿ ಪೇಜಾವರ ಮಠಾಧೀಶರಾದ ಶ್ರೀ ಶ್ರೀ ಶ್ರೀ ವಿಶ್ವೇಶ ತೀರ್ಥ ಶ್ರೀಪಾದಂಗಳವರ ನಿಧನಕ್ಕೆ ಕಂಬನಿ ಮಿಡಿಯುತ್ತೇನೆ. ಸದಾ ಜೀವನೋತ್ಸಾಹದ ಚಿಲುಮೆಯಂತಿದ್ದ ಶ್ರೀಗಳು ಸಮಾಜಮುಖಿ ನಿಲುವಿನ ಶ್ರೇಷ್ಠ ಸಂತರಾಗಿದ್ದರು. ಸಮಾಜಕ್ಕೆ ಮಾರ್ಗದರ್ಶಕರಾಗಿದ್ದ ಶ್ರೀಗಳ ನಿಧನದಿಂದ ನಾಡು ಬಡವಾಗಿದೆ" ಎಂದಿದ್ದಾರೆ. 

ಶ್ರೀಗಳ ನಿಧನಕ್ಕೆ ಕಂಬನಿ ಮಿಡಿದಿರುವ ಬಿಜೆಪಿ ಮುಖಂಡೆ ಮತ್ತು ಸಂಸದೆ ಶೋಭಾ ಕರಂದ್ಲಾಜೆ " ಶ್ರೀ ಕೃಷ್ಣನಲ್ಲಿ ಲೀನವಾದ ಶ್ರೀ ವಿಶ್ವೇಶ ತೀರ್ಥರು!.. ಹಿಂದೂ ಸಮಾಜವನ್ನು ಒಗ್ಗೂಡಿಸಿ, ರಾಮಜನ್ಮಭೂಮಿಯ ನೇತೃತ್ವ ವಹಿಸಿ, ನಮಗೆಲ್ಲರಿಗೂ ಮಾರ್ಗದರ್ಶಕರಾಗಿದ್ದ ಋಷಿ ಶ್ರೇಷ್ಠರ ಅಗಲಿಕೆ ದೇಶಕ್ಕೆ ತುಂಬಲಾರದ ನಷ್ಟ. ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಶ್ರೀಕೃಷ್ಣನು ನಮಗೆಲ್ಲರಿಗೂ ನೀಡಲಿ ಎಂದು ಪ್ರಾರ್ಥಿಸುತ್ತೇನೆ"  ಎಂದು ಟ್ವೀಟ್ ಮಾಡಿದ್ದಾರೆ. 

Trending News