ಬೆಂಗಳೂರು: ಕೇಂದ್ರ ಸರ್ಕಾರ ಅಘೋಷಿತ ತುರ್ತು ಪರಿಸ್ಥಿತಿ ಹೇರಿದೆ. ಇದನ್ನ ನೋಡುತ್ತಿದ್ದರೆ 'ಹಿಟ್ಲರ್ ಆಡಳಿತ' ನೆನಪಿಗೆ ಬರುತ್ತಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ(Siddaramaiah) ವಾಗ್ದಾಳಿ ನಡೆಸಿದ್ದಾರೆ.
ಪೌರತ್ವ ತಿದ್ದುಪಡಿ ಕಾಯಿದೆ(CAA) ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯನ್ನು ಕರ್ನಾಟಕದ ಬಿಜೆಪಿ ಸರ್ಕಾರ ಹತ್ತಿಕ್ಕುತ್ತಿರುವುದನ್ನು ಖಂಡಿಸಿ ಪತ್ರಿಕಾಗೋಷ್ಠಿ ನಡೆಸಿದ ಸಿದ್ದರಾಮಯ್ಯ, ಮಂಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದವರ ಕೈಯಲ್ಲಿ ಮಾರಾಕಾಸ್ತ್ರಗಳಿರಲಿಲ್ಲ. ಅವರು ಯಾವುದೇ ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟ ಮಾಡಿರಲಿಲ್ಲ. ಅವರನ್ನು ಘೋಷಣೆ ಕೂಗುವುದಕ್ಕೆ ಬಿಡಬೇಕಿತ್ತು. ಆದರೆ ಅಲ್ಲಿ ಪೊಲೀಸರೇ ಹಿಂಸಾಚಾರಕ್ಕೆ ಕುಮ್ಮಕ್ಕು ಕೊಟ್ಟಿದ್ದಾರೆ. ಪೊಲೀಸರು ಮೊದಲು ಅನೌನ್ಸ್ ಮೆಂಟ್ ಮಾಡಬೇಕು, ನಂತರ ಟಿಯರ್ ಗ್ಯಾಸ್ ಸಿಡಿಸಬೇಕು. ವಾಟರ್ ಸಿಡಿತ ಮಾಡಬೇಕು, ಲಾಟಿಚಾರ್ಜ್ ಮಾಡಬೇಕು. ಇದ್ಯಾವುದರಿಂದಲೂ ಪರಿಸ್ಥಿತಿ ಕಂಟ್ರೋಲ್ ಆಗದಿದ್ದರೆ ಮಾತ್ರ ಫೈರ್ ಮಾಡಬೇಕು. ಆದರೆ ಮಂಗಳೂರಿನಲ್ಲಿ ಏಕಾಏಕಿ ಫೈರ್ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಇಡೀ ದೇಶಾದ್ಯಂತ ಜನ ಪ್ರತಿಭಟನೆ ಮಾಡುತ್ತಿದ್ದಾರೆ. ಜಾತ್ಯಾತೀತವಾಗಿ ಜನ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಪ್ರಜಾಪ್ರಭುತ್ವ ಆರೋಗ್ಯಕರವಾಗಿರಬೇಕು. ಸರ್ಕಾರಗಳು ಜನವಿರೋಧಿ ನೀತಿ ತಂದತೆ ಅದನ್ನ ಪ್ರತಿಭಟಿಸುವ ಹಕ್ಕು ಜನರಿಗಿದೆ. ಆದರೀಗ ಕರ್ನಾಟಕ ಸರ್ಕಾರ ಶಾಂತಿಯುತ ಪ್ರತಿಭಟನೆಗೆ ಅವಕಾಶ ನೀಡದೆ ಪೊಲೀಸ್ ದೌರ್ಜನ್ಯ ಎಸಗುತ್ತಿದೆ ಎಂದು ಕಿಡಿಕಾರಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ, ಪೌರತ್ವ ತಿದ್ದುಪಡಿ ಕಾಯಿದೆಯನ್ನು 'ಕಂಟ್ರೋವರ್ಸಿಯಲ್ ಕಾಯ್ದೆ' ರಾಜ್ಯಸಭೆ ಕಲಾಪದಲ್ಲಿಯೇ ಹೇಳಿದ್ದಾರೆ. ಎಷ್ಟೇ ಬಹುಮತವಿದ್ದರೂ ಅವರಿಗೆ ಸಂವಿಧಾನ ಹತ್ತಿಕ್ಕುವ ಅಧಿಕಾರವಿಲ್ಲ. ಅನೇಕ ರಾಜ್ಯಗಳಲ್ಲಿ ಜನರ ಆಕ್ರೋಶ ವ್ಯಕ್ತವಾಗಿದೆ. ರಾಜ್ಯದಲ್ಲಿ ಅನಗತ್ಯವಾಗಿ ೧೪೪ ಸೆಕ್ಷನ್ ಹಾಕಿದ್ದಾರೆ. ನಿಷೇಧಾಜ್ಞೆ ಹಾಕಲು ಪೂರಕವಾತಾವರಣವಿರಬೇಕು. ಆದರೆ ಬಿಜೆಪಿ ಸರ್ಕಾರ ಉದ್ದೇಶಪೂರಕವಾಗಿ ಈ ರೀತಿ ಮಾಡಿದ್ದಾರೆ. ಸರ್ಕಾರ ಮತ್ತು ಪೊಲೀಸರ ಪ್ರಜಾಪ್ರಭುತ್ವ ವಿರುದ್ಧದ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಕೇಂದ್ರ ಸಚಿವ ಸುರೇಶ್ ಅಂಗಡಿ 'ಪ್ರತಿಭಟನೆ ಮಾಡಿದ್ರೆ ಗುಂಡಿಕ್ಕಿ ಅಂತಾ ಹೇಳುವುದು ಎಷ್ಟು ಸರಿ? ಇದು ಕೇಂದ್ರ ಮಂತ್ರಿಯಾದವರು ಹೇಳೊ ಮಾತಾ? ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಬಿಜೆಪಿ ರಾಜ್ಯದಲ್ಲಿ ಒಂದು ರೀತಿಯ ಭಯದ ವಾತಾವರಣ ಸೃಷ್ಟಿಸುತ್ತಿದೆ. ನಮ್ಮ ಸರ್ಕಾರದಲ್ಲಿ ಬಂದೂಕು ಬಗ್ಗೆ ಬಳಕೆ ಆಗಿರಲಿಲ್ಲ. ಯಡಿಯೂರಪ್ಪ ಸರ್ಕಾರ ಬಂದ ಮೇಲೆ ಹೀಗೆ ಆಗುತ್ತಿದೆ. ಈ ಹಿಂದೆ ಗೊಬ್ಬರ ಕೇಳಿದ ರೈತನ ಮೇಲೆ ಗೋಲಿ ಬಾರ್ ಮಾಡಿದ್ರು ಅಂತಾ ಸಿದ್ದರಾಮಯ್ಯ, ರಾಜ್ಯ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.