ನವದೆಹಲಿ: ಅಕ್ರಮ ಹಣ ವರ್ಗಾವಣೆ ಮತ್ತು ಬೇನಾಮಿ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ 15 ದಿನಗಳ ಜಾರಿ ನಿರ್ದೇಶನಾಲಯದ ಬಂಧನ ಮತ್ತು 36 ದಿನಗಳ ನ್ಯಾಯಾಂಗ ಬಂಧನದಲ್ಲಿದ್ದ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ಕಡೆಗೂ ದೆಹಲಿ ಹೈಕೋರ್ಟಿನಲ್ಲಿ ಜಾಮೀನು ಸಿಗಲು ಸಾಧ್ಯವಾಗಿದ್ದು ಈ ಮೂರು ಅಂಶಗಳಿಂದ.
1. ಡಿ.ಕೆ. ಶಿವಕುಮಾರ್ ಜಾಮೀನು ನೀಡಿದರೆ ವಿದೇಶಕ್ಕೆ ಹಾರುವಂತಹ (ಫ್ಲೈಟ್ ರಿಸ್ಕ್) ವ್ಯಕ್ತಿಯಲ್ಲ ಎಂದು ಪರಿಗಣಿಸಿದೆ. ಈ ಬಗ್ಗೆ ಜಾರಿ ನಿರ್ದೇಶನಾಲಯದ ವಕೀಲರು ಸಮರ್ಥನೀಯ ವಾದ ಮಾಡದೇ ಇದ್ದದು ಡಿಕೆಶಿಗೆ ಸಹಾಯವಾಗಿದೆ. ಡಿ.ಕೆ. ಶಿವಕುಮಾರ್ ಪರ ವಕೀಲರು ನ್ಯಾಯಲಯಕ್ಕೆ 'ಡಿಕೆಶಿ ಫ್ಲೈಟ್ ರಿಸ್ಕ್' ತೆಗೆದುಕೊಳ್ಳಲ್ಲ ಎಂಬ ಭರವಸೆ ನೀಡಿದ್ದರು.
2. ಡಿ.ಕೆ. ಶಿವಕುಮಾರ್ ಮೇಲೆ ಜಾರಿ ನಿರ್ದೇಶನಾಲಯ ಮಾಡಿದ್ದ ಸಾಕ್ಷ್ಯ ನಾಶದ ಆರೋಪವನ್ನು ದೆಹಲಿ ಹೈಕೋರ್ಟ್ ಒಪ್ಪಿಲ್ಲ. ಡಿ.ಕೆ. ಶಿವಕುಮಾರ್ ಈಗ ಕೇವಲ ಶಾಸಕ. ಯಾವುದೇ ಪ್ರಭಾವಿ ಹುದ್ದೆಯನ್ನು ಹೊಂದಿಲ್ಲ. ಹೀಗಾಗಿ ಸಾಕ್ಷ್ಯ ನಾಶ ಮಾಡುತ್ತಾರೆ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿದೆ.
3. ಡಿ.ಕೆ. ಶಿವಕುಮಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿಗಳ ಮೇಲೆ ಪ್ರಭಾವ ಬೀರುತ್ತಾರೆ ಎಂಬ ಜಾರಿ ನಿರ್ದೇಶನಾಲಯದ ವಾದಕ್ಕೂ ದೆಹಲಿ ಹೈಕೋರ್ಟ್ ಸೊಪ್ಪುಹಾಕಿಲ್ಲ. ಡಿಕೆಶಿ ಈವರೆಗೆ ಆಪ್ತರು, ಕುಟುಂಬಸ್ಥರು ಮತ್ತಿತರ ಸಾಕ್ಷಿಗಳನ್ನು ಸಂರ್ಪಸಿ, ಹಣಕಾಸು ಅವ್ಯವಹಾರದ ಬಗ್ಗೆ ಮಾಹಿತಿ ನೀಡಬೇಡಿ ಎಂಬ ಒತ್ತಡ ಹೇರಿರುವ ಬಗ್ಗೆ ಜಾರಿ ನಿರ್ದೇಶನಾಲಯ ಯಾವುದೇ ದಾಖಲೆಗಳನ್ನು ಸಲ್ಲಿಸಿಲ್ಲ. ಇದು ಇಡಿಗೆ ಹಿನ್ನಡೆಯಾದರೆ ಡಿಕೆಶಿಗೆ ವರದಾನವಾಗಿದೆ.