"ಅಮಿತ್ ಶಾ ಅವರು ಹಸಿ ಹಸಿ ಸುಳ್ಳು ಹೇಳುತ್ತಾರೆ ಎಂದು ನಾವು ಖಂಡಿತ ಭಾವಿಸಿರಲಿಲ್ಲ"

ಚುನಾವಣಾ ಪ್ರಚಾರಕ್ಕಾಗಿ ರಾಜ್ಯಕ್ಕೆ ಆಗಮಿಸಿರುವ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರು ಬರ ಪರಿಹಾರ ನೀಡದಿರುವ ಬಗ್ಗೆ ಜನರಿಗೆ ಸುಳ್ಳು ಮಾಹಿತಿ ನೀಡಿರುವುದು ನನ್ನ ಗಮನಕ್ಕೆ ಬಂದಿದೆ.

Written by - Prashobh Devanahalli | Last Updated : Apr 2, 2024, 08:29 PM IST
  • ಕರ್ನಾಟಕದ ಬರ ಪರಿಹಾರ ಮನವಿಯ ಮೇರೆಗೆ ಕೇಂದ್ರದ ಬರ ಅಧ್ಯಯನ ತಂಡ ಕಳೆದ ವರ್ಷ ಅಕ್ಟೋಬರ್ 06 ರಂದು ರಾಜ್ಯಕ್ಕೆ ಆಗಮಿಸಿತ್ತು.
  • ಮೂರು ತಂಡಗಳಾಗಿ ರಾಜ್ಯಾದ್ಯಂತ ಮೂರು ದಿನಗಳ ಪ್ರವಾಸ ಕೈಗೊಂಡ ತಂಡ ಬರ ಅಧ್ಯಯನ ನಡೆಸಿತ್ತು.
  • ಈ ಬಗ್ಗೆ ಅದೇ ದಿನ ಪತ್ರಿಕಾಗೋಷ್ಠಿ ನಡೆಸಿ ಮಾಧ್ಯಮ ಮಿತ್ರರಿಗೂ ಮಾಹಿತಿ ನೀಡಲಾಗಿತ್ತು.
"ಅಮಿತ್ ಶಾ ಅವರು ಹಸಿ ಹಸಿ ಸುಳ್ಳು ಹೇಳುತ್ತಾರೆ ಎಂದು ನಾವು ಖಂಡಿತ ಭಾವಿಸಿರಲಿಲ್ಲ" title=

ಬೆಂಗಳೂರು: ಚುನಾವಣಾ ಪ್ರಚಾರಕ್ಕಾಗಿ ರಾಜ್ಯಕ್ಕೆ ಆಗಮಿಸಿರುವ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರು ಬರ ಪರಿಹಾರ ನೀಡದಿರುವ ಬಗ್ಗೆ ಜನರಿಗೆ ಸುಳ್ಳು ಮಾಹಿತಿ ನೀಡಿರುವುದು ನನ್ನ ಗಮನಕ್ಕೆ ಬಂದಿದೆ. ಚುನಾವಣಾ ಭಾಷಣದ ವೇಳೆ “ಕರ್ನಾಟಕ ಸರ್ಕಾರ ಬರ ಪರಿಹಾರಕ್ಕೆ ಮನವಿ ಸಲ್ಲಿಸಲು ಮೂರು ತಿಂಗಳು ತಡ ಮಾಡಿದ ಕಾರಣದಿಂದಾಗಿ ಕೇಂದ್ರ ಸರ್ಕಾರ ನಿಗದಿತ ಸಮಯಕ್ಕೆ ಪರಿಹಾರ ಬಿಡುಗಡೆ ಮಾಡಲಾಗಿಲ್ಲ” ಎಂದು ಅಮಿತ್ ಶಾ ಸುಳ್ಳು ಹೇಳಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರ ಹಾಗೂ ಕಂದಾಯ ಇಲಾಖೆಯ ಜವಾಬ್ದಾರಿಯುತ ಸ್ಥಾನದಲ್ಲಿದ್ದು, ಈ ರಾಜಕೀಯ ಪ್ರೇರಿತ ಸುಳ್ಳು ಹೇಳಿಕೆಗೆ ಸ್ಪಷ್ಟೀಕರಣ ನೀಡಲೇಬೇಕಾದ ಜವಾಬ್ದಾರಿ ನನ್ನ ಮೇಲಿದೆ. ಹೀಗಾಗಿ ಈ ಬಗ್ಗೆ ಸ್ಪಷ್ಟೀಕರಣ ನೀಡುತ್ತಿದ್ದೇನೆ ಎಂದು ಸಚಿವ ಕೃಷ್ಣಾ ಬೈರೆಗೌಡ ಹೇಳಿದ್ದಾರೆ.

ಸ್ಪಷ್ಟೀಕರಣ:

“ಈ ವರ್ಷ ರಾಜ್ಯಾದ್ಯಂತ ತೀವ್ರ ಮಳೆ ಕೊರತೆ ಎದುರಾಗಿದ್ದು, ಅಂದಾಜಿನ ಪ್ರಕಾರ 40 ಲಕ್ಷ ಹೆಕ್ಟೇರ್ ಕೃಷಿ ಬೆಳೆ ಹಾಗೂ 2 ಲಕ್ಷ ಹೆಕ್ಟೇರ್ ನಷ್ಟು ತೋಟಗಾರಿಕೆ ಬೆಳೆ ಹಾನಿಯಾಗಿದೆ. ಹೀಗಾಗಿ ಕಳೆದ ವರ್ಷ ಆಗಸ್ಟ್ ಎರಡನೇ ವಾರದಲ್ಲೇ ಸಮೀಕ್ಷೆ ನಡೆಸಿ ಕೇಂದ್ರದ ಮಾನದಂಡದ ಪ್ರಕಾರ ಸೆಪ್ಟೆಂಬರ್.13 ರಂದೇ ಬರ ಘೋಷಿಸಲಾಗಿತ್ತು. ಮೊದಲ ಹಂತದಲ್ಲಿ 195 ತಾಲೂಕುಗಳು ಹಾಗೂ ಎರಡನೇ ಹಂತದಲ್ಲಿ 28 ತಾಲೂಕುಗಳೂ ಸೇರಿ ಒಟ್ಟು 223 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಲಾಗಿತ್ತು.  

ಕಳೆದ ವರ್ಷ ಸೆ.22ಕ್ಕೆ 18,200 ಕೋಟಿ ಪರಿಹಾರ ಕೋರಿ ಕೇಂದ್ರಕ್ಕೆ ಮೊದಲ ಮನವಿ (ಮೆಮೊರಾಂಡಂ) ಸಲ್ಲಿಸಲಾಯಿತು. ಒಂದು ವಾರದ ಅವಧಿಯಲ್ಲಿ ಬರ ಪರಿಹಾರ ಕೋರಿ ಮತ್ತೊಂದು ಮನವಿಯನ್ನೂ ಸಲ್ಲಿಸಲಾಗಿದೆ. 
ಕಳೆದ ವರ್ಷ ದೇಶದ ಹಲವು ರಾಜ್ಯಗಳು ಬರಕ್ಕೆ ತುತ್ತಾಗಿದ್ದವು. ಕೇರಳ, ಬಿಹಾರ, ಜಾರ್ಖಂಡ್, ಮಣಿಪುರ, ಮಿಜೋರಾಂ, ತಮಿಳುನಾಡು ಸೇರಿದಂತೆ 12 ರಾಜ್ಯಗಳಲ್ಲಿ ಮುಂಗಾರು ಅವಧಿಯ ಹಾಗೂ 18 ರಾಜ್ಯಗಳಲ್ಲಿ ಹಿಂಗಾರಿನ ಬರ ಇತ್ತು. ಆದರೆ, ಈ ಯಾವ ರಾಜ್ಯಗಳೂ “ಬರ” ಘೋಷಣೆ ಮಾಡುವ ಮುನ್ನವೇ ದೇಶದಲ್ಲೇ ಮೊದಲ ರಾಜ್ಯವಾಗಿ ಕರ್ನಾಟಕ ಮಾತ್ರ ಮುಂಜಾಗ್ರತಾ ಕ್ರಮವಾಗಿ ಬರ ಘೋಷಿಸಿತ್ತು ಎಂಬ ವಿಚಾರವನ್ನು ನಾನು ಇಲ್ಲಿ ಉಲ್ಲೇಖಿಸಲು ಇಚ್ಛಿಸುತ್ತೇನೆ.

ಕರ್ನಾಟಕದ ಬರ ಪರಿಹಾರ ಮನವಿಯ ಮೇರೆಗೆ ಕೇಂದ್ರದ ಬರ ಅಧ್ಯಯನ ತಂಡ ಕಳೆದ ವರ್ಷ ಅಕ್ಟೋಬರ್ 06 ರಂದು ರಾಜ್ಯಕ್ಕೆ ಆಗಮಿಸಿತ್ತು. ಮೂರು ತಂಡಗಳಾಗಿ ರಾಜ್ಯಾದ್ಯಂತ ಮೂರು ದಿನಗಳ ಪ್ರವಾಸ ಕೈಗೊಂಡ ತಂಡ ಬರ ಅಧ್ಯಯನ ನಡೆಸಿತ್ತು. ಅಲ್ಲದೆ, ಬರ ಅಧ್ಯಯನದ ನಂತರ ರಾಜ್ಯ ಸರ್ಕಾರದ ಜೊತೆಗೂ ಅಕ್ಟೋಬರ್ 09 ರಂದು ಸಭೆ ನಡೆಸಿದ್ದ ಕೇಂದ್ರದ ತಂಡ ನಾವು ಮಾಡಿದ ಮನವಿ ವಸ್ತುಸ್ಥಿತಿಯಿಂದ ಕೂಡಿದೆ ಎಂದು ತಿಳಿಸಿತ್ತು. ಈ ಬಗ್ಗೆ ಅದೇ ದಿನ ಪತ್ರಿಕಾಗೋಷ್ಠಿ ನಡೆಸಿ ಮಾಧ್ಯಮ ಮಿತ್ರರಿಗೂ ಮಾಹಿತಿ ನೀಡಲಾಗಿತ್ತು.

ಅಧ್ಯಯನದ ಬೆನ್ನಿಗೆ ದೆಹಲಿಗೆ ಹಿಂತಿರುಗಿದ ಬರ ಅಧ್ಯಯನ ತಂಡ ಕೇಂದ್ರಕ್ಕೆ ಒಂದು ವಾರದಲ್ಲೇ ವರದಿಯನ್ನೂ ಸಲ್ಲಿಸಿದೆ. ಎನ್ಡಿಆರ್ಎಫ್ ನಿಯಮದ ಅನ್ವಯ ಕೇಂದ್ರ ಬರ ಅಧ್ಯಯನ ತಂಡ ವರದಿ ನೀಡಿದ ತಕ್ಷಣ ಕೇಂದ್ರ ಗೃಹ ಸಚಿವರು, ಹಣಕಾಸು ಸಚಿವರು ಹಾಗೂ ಕೃಷಿ ಸಚಿವರು ಸಭೆ ನಡೆಸಿ ಬರ ಪರಿಹಾರ ಬಿಡುಗಡೆ ಮಾಡುವ ಸಂಬಂಧ ನಿರ್ಧಾರ ತೆಗೆದುಕೊಳ್ಳಬೇಕು. ಆದರೆ, ಆ ಸಭೆ ಈವರೆಗೂ ನಡೆದಿಲ್ಲ ಎಂಬುದೇ ವಾಸ್ತವ ಸಂಗತಿ.

ರಾಜ್ಯದ ರೈತರು ಬರದಿಂದ ತತ್ತರಿಸುತ್ತಿದ್ದಾರೆ ಹೀಗಾಗಿ ಶೀಘ್ರ ಬರ ಪರಿಹಾರ ವಿತರಿಸಿ ಎಂದು ಮನವಿ ಮಾಡುವ ಸಂಬಂಧ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರ ಭೇಟಿಗೆ ಮನವಿ ಮಾಡಲಾಗಿತ್ತು. ಆದರೆ, ಅವರು ಭೇಟಿಗೆ ಅವಕಾಶ ನೀಡದ ಕಾರಣ ಕಳೆದ ವರ್ಷ ಅಕ್ಟೋಬರ್ 25ರಂದು ಕರ್ನಾಟಕದ ಕೃಷಿ ಸಚಿವ ಎನ್.ಚಲುವರಾಯ ಸ್ವಾಮಿ, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನೊಳಗೊಂಡ ನಿಯೋಗದೊಂದಿಗೆ ಕೇಂದ್ರ ಕೃಷಿ ಕಾರ್ಯದರ್ಶಿ ಮನೋಜ್ ಕುಮಾರ್ ಅಹುಜಾ ಮತ್ತು ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ಅವರೊಂದಿಗೆ ಪ್ರತ್ಯೇಕ ಸಭೆ ನಡೆಸಿ ಶೀಘ್ರ ಬರ ಪರಿಹಾರಕ್ಕೆ ಮನವಿ ಮಾಡಲಾಗಿತ್ತು.

ಈ ನಡುವೆ ಇದೇ ಅವಧಿಯಲ್ಲಿ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಧಾನಿ ಮೋದಿ ಅವರ ಭೇಟಿಗೆ ಅವಕಾಶ ಕೋರಿ ಎರಡು ಪತ್ರ ಬರೆದಿದ್ದರು. ಆದರೆ, ಅವರ ಭೇಟಿಗೆ ಅವಕಾಶ ನೀಡಲಾಗಿರಲಿಲ್ಲ. 

ಕಳೆದ ವರ್ಷ ನವೆಂಬರ್ 24 ರಂದು ಕರ್ನಾಟಕದ ಕೃಷಿ ಸಚಿವ ಎನ್.ಚಲುವರಾಯ ಸ್ವಾಮಿ ಅವರೊಂದಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ರಾಜ್ಯದ ಬರ ಪರಿಸ್ಥಿತಿ ಕುರಿತು ಚರ್ಚಿಸಲಾಗಿತ್ತು. ಅಲ್ಲದೆ, ಶೀಘ್ರ ಬರ ಪರಿಹಾರ ಬಿಡುಗಡೆಗೆ ಮನವಿ ಮಾಡಲಾಗಿತ್ತು. ಸಚಿವರು ಚರ್ಚೆ ವೇಳೆ ಸಕಾರಾತ್ಮಕವಾಗಿ ಸ್ಪಂದಿಸಿದ್ದರಾದರೂ ಇದರಿಂದ ರಾಜ್ಯಕ್ಕೆ ಯಾವುದೇ ಉಪಯೋಗವಾಗಿರಲಿಲ್ಲ.

ಕಳೆದ ವರ್ಷ ಡಿಸೆಂಬರ್ 19 ರಂದು ಕೊನೆಗೂ ಸ್ವತಃ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತ್ತು. ಈ ವೇಳೆ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ಜೊತೆಗೆ ನಾನೂ ಸಹ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ್ದೆ. ಸಭೆಯಲ್ಲಿ ಕರ್ನಾಟಕದ ಬರ ಪರಿಸ್ಥಿತಿಯ ಕುರಿತು ಪ್ರಧಾನಿಗೆ ವಿವರಿಸಲಾಗಿತ್ತು. ಶೀಘ್ರವೇ 18,177.44 ಕೋಟಿ ರೂ. ಪರಿಹಾರ ಬಿಡುಗಡೆಗೂ ಮನವಿ ಮಾಡಲಾಗಿತ್ತು. ಆದರೆ, ಕೇಂದ್ರ ಸರ್ಕಾರ ಈವರೆಗೆ ಹಣ ಬಿಡುಗಡೆ ಮಾಡಿಲ್ಲ.

ಹೀಗಾಗಿ ಕರ್ನಾಟಕ ಸರ್ಕಾರ ಬೇರೆ ದಾರಿ ಕಾಣದೆ ಬರ ಪರಿಹಾರ ಹಣ ಬಿಡುಗಡೆ ಮಾಡುವಂತೆ ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಕೇಂದ್ರದಿಂದ ಬರ ಪರಿಹಾರವನ್ನು ಪಡೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಳೆದ ವರ್ಷ ಸೆಪ್ಟೆಂಬರ್ ತಿಂಗಳಿನಿಂದ ಈ ಕ್ಷಣದ ವರೆಗೆ ಸಾಂವಿಧಾನಿಕ ಮಾದರಿಯಲ್ಲಿ ಹೋರಾಟ ನಡೆಸುತ್ತಿದೆಯೇ ವಿನಃ ಈ ವಿಚಾರದಲ್ಲಿ ರಾಜಕೀಯ ಮಾಡಿರಲಿಲ್ಲ. ಇಂತಹ ಸೂಕ್ಷ್ಮ ವಿಚಾರದಲ್ಲಿ ರಾಜಕೀಯ ಮೇಲಾಟ ಸರಿಯಲ್ಲ ಎಂಬುದು ನಮ್ಮ ಅಭಿಪ್ರಾಯ. ರೈತರಿಗೆ ನೆರವು ನೀಡುವ ವಿಚಾರದಲ್ಲಿ ರಾಜಕೀಯ ಸರಿಯಲ್ಲ…!

ಆದರೆ, ತೆರಿಗೆ ಹಂಚಿಕೆ, ವಿಶೇಷ ಅನುದಾನ ಬಿಡುಗಡೆ ಸೇರಿದಂತೆ ಹಲವು ವಿಚಾರಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕರ್ನಾಟಕದ ವಿರುದ್ಧ ಮಲತಾಯಿ ಧೋರಣೆ ಅನುಸರಿಸುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರವೇ. ಆದರೆ, ರೈತರಿಗೆ ಬರ ಪರಿಹಾರ ನೀಡುವ ವಿಚಾರವನ್ನೂ ಕೇಂದ್ರ ಸರ್ಕಾರ ರಾಜಕೀಯಗೊಳಿಸಿ ಕರ್ನಾಟಕವನ್ನು ಶೋಷಣೆಗೆ ಈಡುಮಾಡುತ್ತದೆ ಎಂದು ನಾವು ಭಾವಿಸಿರಲಿಲ್ಲ. ಇನ್ನೂ ಜನರ ಮತಗಳನ್ನು ಗಳಿಸುವ ನಿಟ್ಟಿನಲ್ಲಿ ಇದೇ ವಿಚಾರವನ್ನು ಮುಂದಿಟ್ಟು ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರು ಹಸಿ ಹಸಿ ಸುಳ್ಳು ಹೇಳುತ್ತಾರೆ ಎಂದು ನಾವು ಖಂಡಿತ ಭಾಸಿರಲಿಲ್ಲ. ಅವರ ಈ ವರ್ತನೆಗೆ ನಾನು ವಿಷಾದಿಸುತ್ತೇವೆ.

Trending News