ನ್ಯೂಯಾರ್ಕ್: ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರಿಗೆ ಸ್ವಚ್ಛ ಭಾರತ್ ಅಭಿಯಾನಕ್ಕಾಗಿ 'ಗ್ಲೋಬಲ್ ಗೋಲ್ಕೀಪರ್' ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್ ಈ ಪ್ರಶಸ್ತಿಯನ್ನು ನೀಡಿದೆ. ಬಿಲ್ ಗೇಟ್ಸ್ ಈ ಪ್ರಶಸ್ತಿಯನ್ನು ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿ (ಯುಎನ್ಜಿಎ) ಯಲ್ಲಿ ಪಿಎಂ ಮೋದಿಗೆ ನೀಡಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪ್ರಧಾನಿ ಮೋದಿ, "ಈ ಗೌರವ ನನಗಲ್ಲ, ಸ್ವಚ್ಛ ಭಾರತದ ಕನಸನ್ನು ಈಡೇರಿಸಿದ್ದಲ್ಲದೆ, ಅದನ್ನು ತಮ್ಮ ದೈನಂದಿನ ಜೀವನದ ಒಂದು ಭಾಗವನ್ನಾಗಿ ಅಳವಡಿಸಿಕೊಂಡಿರುವ ಕೋಟ್ಯಂತರ ಭಾರತೀಯರಿಗೆ" ಎಂದು ಹೇಳಿದರು.
ಇದರೊಂದಿಗೆ ಮಹಾತ್ಮ ಗಾಂಧಿಯವರ 150 ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಈ ಗೌರವವನ್ನು ಪಡೆಯುತ್ತಿರುವುದು ನನಗೆ ವೈಯಕ್ತಿಕವಾಗಿ ಮಹತ್ವದಾಗಿದೆ ಎಂದು ತಿಳಿಸಿದ ಪ್ರಧಾನಿ ಮೋದಿ, 130 ಕೋಟಿ ಜನರು ಮನಸ್ಸು ಮಾಡಿದರೆ ಯಾವುದೇ ಸವಾಲನ್ನು ಜಯಿಸಬಹುದು ಎಂಬುದಕ್ಕೆ ಇದು ಸಾಕ್ಷಿ ಎಂದರು.
"ಸ್ವಚ್ಛ ಭಾರತ ಅಭಿಯಾನ"ವನ್ನು ಒಂದು ಬೃಹತ್ ಆಂದೋಲನವನ್ನಾಗಿ ಪರಿವರ್ತಿಸಿ, ಅವರ ದೈನಂದಿನ ಜೀವನದಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಲು ಮುಂದಾದ ಭಾರತೀಯರಿಗೆ ಈ ಗೌರವ ಅರ್ಪಿಸುತ್ತೇನೆ. ಇತ್ತೀಚಿನ ದಿನಗಳಲ್ಲಿ ಯಾವುದೇ ದೇಶದಲ್ಲಿ ಇಂತಹ ಅಭಿಯಾನಗಳು ಕಂಡುಬಂದಿಲ್ಲ. ನಮ್ಮ ಸರ್ಕಾರ ಈ ಅಭಿಯಾನವನ್ನು ಪ್ರಾರಂಭಿಸಿತು, ಆದರೆ ಜನರು ಅದನ್ನು ಸ್ವತಃ ವಹಿಸಿಕೊಂಡರು. ಇದರ ಪರಿಣಾಮವಾಗಿ ಕಳೆದ ಐದು ವರ್ಷಗಳಲ್ಲಿ 10 ದಶಲಕ್ಷ ಶೌಚಾಲಯಗಳನ್ನು ನಿರ್ಮಿಸಲಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೆಮ್ಮೆಯಿಂದ ನುಡಿದರು.