ಆಂಗ್ಲ ಮಾಧ್ಯಮ ಶಾಲೆ ಆದೇಶ ಹಿಂಪಡೆಯಲು ಸಾಹಿತಿಗಳ ಮನವಿ

ಈ ಹಿಂದೆ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಜಾರಿಗೆ ತಂದಿದ್ದ ಆಂಗ್ಲ ಮಾಧ್ಯಮ ಶಾಲೆ ಆದೇಶವನ್ನು ಹಿಂಪಡೆಯಲು ಸಾಹಿತಿಗಳು ಸಿಎಂ ಯಡಿಯೂರಪ್ಪನವರಲ್ಲಿ ಮನವಿ ಮಾಡಿದ್ದಾರೆ.

Last Updated : Sep 7, 2019, 08:02 PM IST
ಆಂಗ್ಲ ಮಾಧ್ಯಮ ಶಾಲೆ ಆದೇಶ ಹಿಂಪಡೆಯಲು ಸಾಹಿತಿಗಳ ಮನವಿ  title=
Photo courtesy: Twitter

ಬೆಂಗಳೂರು: ಈ ಹಿಂದೆ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಜಾರಿಗೆ ತಂದಿದ್ದ ಆಂಗ್ಲ ಮಾಧ್ಯಮ ಶಾಲೆ ಆದೇಶವನ್ನು ಹಿಂಪಡೆಯಲು ಸಾಹಿತಿಗಳು ಸಿಎಂ ಯಡಿಯೂರಪ್ಪನವರಲ್ಲಿ ಮನವಿ ಮಾಡಿದ್ದಾರೆ.

ಇಂದು ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿ ಮಾಡಿದ ಹಿರಿಯ ಸಾಹಿತಿ ಚಿದಾನಂದಮೂರ್ತಿ ನೇತೃತ್ವದ ಆಯೋಗವು ಭೇಟಿ ಮಾಡಿ ಆಂಗ್ಲ ಮಾಧ್ಯಮ ಶಾಲೆ ಆದೇಶ ಹಿಂಪಡೆಯಲು ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ಸಾಹಿತಿ ದೊಡ್ಡ ರಂಗೇಗೌಡರು ಮಾತನಾಡಿ 'ಹಿಂದಿನ ಸರ್ಕಾರ ಜಾರಿ‌ ಮಾಡಿದ ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಮಾದ್ಯಮ ಶಿಕ್ಷಣ ವ್ಯವಸ್ಥೆಯನ್ನು ಹಿಂಪಡೆಯಬೇಕು' ಎಂದು ಮನವಿ ಮಾಡಿದರು. 'ಇಂಗ್ಲೀಷ್ ಮಾಧ್ಯಮದಿಂದ ಕನ್ನಡ ಭಾಷೆ ಅವನತಿಯತ್ತ ಸಾಗುತ್ತಿದೆ. ಹಾಗಾಗಿ ಕೂಡಲೇ ಹಿಂದಿನ ಸರ್ಕಾರದ ನಿರ್ಧಾರವನ್ನು ಹಿಂದಕ್ಕೆ ಪಡೆದು ಕನ್ನಡ ಉಳಿಸಬೇಕು' ಅಂತ ಒತ್ತಾಯ ಮಾಡಿದರು. 'ನಾವು ಯಾರು ಇಂಗ್ಲಿಷ್ ಭಾಷೆಯ ವಿರೋಧಿಗಳಲ್ಲ, ಆದರೆ ಒಂದು ಶಿಕ್ಷಣ ಮಾದ್ಯಮವಾಗಿ ಕಲಿಯಲು ನಮ್ಮ ವಿರೋಧವಿದೆ' ಎಂದು ಹೇಳಿದರು.

ಹಿರಿಯ ಸಾಹಿತಿ ಹಾಗು ಚಿಂತಕರಾದ ಚಿದಾನಂದ ಮೂರ್ತಿ ಅವರು ಮಾತನಾಡಿ 'ಖಾಸಗಿ ಶಾಲೆಗಳಿಗೆ ಹೋಗುವ ವಿದ್ಯಾರ್ಥಿಗಳ ಸಂಖ್ಯೆಗಿಂತ ಸರ್ಕಾರಿ ಶಾಲೆಗಳಿಗೆ ಹೋಗುವವರ ವಿದ್ಯಾರ್ಥಿಗಳ ಸಂಖ್ಯೆ ತುಂಬ ಕಡಿಮೆ ಇದೆ, ಹಾಗಾಗಿ ಖಾಸಗಿ ಶಾಲೆಗಳು ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡುವ ವ್ಯವಸ್ಥೆ ಮಾಡುವತ್ತ ಸರ್ಕಾರ ಗಮನ ಹರಿಸಬೇಕು' ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.

ಸಾಹಿತಿ ಗೊ.ರು.ಚನ್ನಬಸಪ್ಪ ಅವರು ಮಾತನಾಡಿ 'ಶಿಕ್ಷಣ ಕ್ಷೇತ್ರದಲ್ಲಿ ಯಾವುದೇ ರೀತಿಯ ಪ್ರಯೋಗಗಳನ್ನು ಮಾಡದೆ ಒಂದನೇ ತರಗತಿಯಿಂದ 7ನೇ ತರಗತಿವರೆಗೆ ಯಾವುದೇ ರೀತಿಯ ಭಾಷೆ ಬದಲಾವಣೆ ಆಗದಂತೆ ಹೊಸ ಕಾನೂನು ರಚನೆ ಮಾಡಬೇಕು ಎಂದು ತಿಳಿಸಿದರು. ಸಾಹಿತಿಗಳ ಅಭಿಪ್ರಾಯಗಳನ್ನು ಆಲಿಸಿದ ಮುಖ್ಯಮಂತ್ರಿಗಳು ಶೀಘ್ರವೇ ಶಿಕ್ಷಣ ತಜ್ಞರು, ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಈ ಹಿಂದೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರಾಜ್ಯದಲ್ಲಿ ಒಂದು ಸಾವಿರ ಶಾಲೆಗಳನ್ನು ಪಬ್ಲಿಕ್ ಶಾಲೆ ಮಾದರಿಯಲ್ಲಿ ತೆರೆಯಲು ಆದೇಶ ಹೊರಡಿಸಿದ್ದರು.ಈ ಶಾಲೆಗಳಿಗೆ ಕೇಂದ್ರೀಯ ವಿದ್ಯಾಲಯಗಳ ಮಾದರಿಯಲ್ಲಿ ಪಠ್ಯಕ್ರಮ ಸಿದ್ದಪಡಿಸಲು ಘೋಷಿಸಿದ್ದರು. ಈ ಶಾಲೆಗಳನ್ನು ಹೋಬಳಿ ಮಟ್ಟದಲ್ಲಿ ತೆರೆಯುವುದಾಗಿ ಸರ್ಕಾರ ಫೆಬ್ರುವರಿ ಬಜೆಟ್ ನಲ್ಲಿ ಘೋಷಣೆ ಹೊರಡಿಸಿತ್ತು.

ಸರ್ಕಾರದ ಈ ನಿರ್ಧಾರವನ್ನು ಹಲವರು ಸ್ವಾಗತಿಸಿದರೆ ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ಗ್ರಾಮೀಣ ಮಟ್ಟದಲ್ಲಿ ಇಂಗ್ಲಿಶ್ ಕಲಿಕೆಯಲ್ಲಿ ಹಿಂದುಳಿಯುತ್ತಿರುವ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆಯನ್ನು ಘೋಷಿಸಲಾಗಿತ್ತು. 

Trending News