ನವದೆಹಲಿ: ಫೆಬ್ರವರಿಯಲ್ಲಿ ನಡೆದ ಬಾಲಕೋಟ್ ವೈಮಾನಿಕ ದಾಳಿಯ ನಂತರ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಪಾಕ್ ವಾಯುಪ್ರದೇಶದ ಮೂಲಕ ದ್ವಿಪಕ್ಷೀಯ ಸಭೆಗಾಗಿ ಫ್ರಾನ್ಸ್ಗೆ ಪ್ರಯಾಣ ಬೆಳೆಸಿದರು.
ಫೆಬ್ರವರಿ 26 ರಂದು ಭಾರತೀಯ ವಾಯುಪಡೆ (ಐಎಎಫ್) ನಡೆಸಿದ ವೈಮಾನಿಕ ದಾಳಿಯ ನಂತರ ವಾಯುಪ್ರದೇಶವನ್ನು ಮುಚ್ಚಲಾಗಿತ್ತು. ಫೆಬ್ರವರಿ 14 ರ ಪುಲ್ವಾಮಾ ಭಯೋತ್ಪಾದಕ ದಾಳಿಯ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ 40 ಕ್ಕೂ ಹೆಚ್ಚು ಸಿಆರ್ಪಿಎಫ್ ಸಿಬ್ಬಂದಿಯನ್ನು ಕೊಂದ ನಂತರ ಐಎಎಫ್ ವಿಮಾನಗಳು ಪಾಕಿಸ್ತಾನದ ಬಾಲಕೋಟ್ ಪ್ರದೇಶದಲ್ಲಿ ಭಯೋತ್ಪಾದಕ ಶಿಬಿರಗಳನ್ನು ನಾಶಪಡಿಸಿದವು.
ಪ್ರಧಾನಿ ಮೋದಿ ಮೂರು ರಾಷ್ಟ್ರಗಳ ಭೇಟಿಯ ಮೊದಲ ನಿಲುಗಡೆ ಸಂದರ್ಭದಲ್ಲಿ, ಗುರುವಾರ ಸಂಜೆ ಅವರು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಆಗಸ್ಟ್ 23 ರಂದು, ತಮ್ಮ ಭೇಟಿಯ ಎರಡನೇ ಹಂತದಲ್ಲಿ ಯುಎಇಗೆ ದ್ವಿಪಕ್ಷೀಯ ಭೇಟಿಗೆ ತೆರಳಲಿದ್ದಾರೆ.ಆಗ ಅಬುಧಾಬಿಯ ರಾಜಕುಮಾರ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ.
ತದನಂತರ ಆಗಸ್ಟ್ 24 ರಂದು ಮೋದಿ ಅವರು ಬಹ್ರೇನ್ ಗೆ ಭೇಟಿ ನೀಡಲಿದ್ದು, ಅಲ್ಲಿ ಅವರು ಪ್ರಧಾನಿ ರಾಜಕುಮಾರ ಶೇಖ್ ಖಲೀಫಾ ಬಿನ್ ಸಲ್ಮಾನ್ ಅಲ್ ಖಲೀಫಾ ಅವರನ್ನು ಭೇಟಿ ಮಾಡಲಿದ್ದಾರೆ. ಬಹ್ರೇನ್ ರಾಜ ಶೇಖ್ ಹಮದ್ ಬಿನ್ ಇಸಾ ಅಲ್ ಖಲೀಫಾ ಮತ್ತು ಇತರ ನಾಯಕರ ಜೊತೆ ಮಾತುಕತೆ ನಡೆಸಲಿದ್ದಾರೆ. ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ಅವರ ಆಹ್ವಾನದ ಮೇರೆಗೆ ಜಿ -7 ಶೃಂಗಸಭೆ ಸಭೆಗಳಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಮತ್ತೆ ಆಗಸ್ಟ್ 25 ರಿಂದ ಆಗಸ್ಟ್ 26 ರವರೆಗೆ ಫ್ರಾನ್ಸ್ ಗೆ ಪ್ರಯಾಣ ಬೆಳೆಸಲಿದ್ದಾರೆ.