ಬೆಂಗಳೂರು: ದಕ್ಷಿಣ ಕರ್ನಾಟಕದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿರುವ ಭಾರತೀಯ ಹವಾಮಾನ ಕೊಡಗು, ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಿದೆ.
"ಮುಂದಿನ ಎರಡು ದಿನಗಳು ಪಶ್ಚಿಮ ಕರಾವಳಿಯ ಕೊಡಗು, ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಬಿರುಸಾದ ಗಾಳಿಯೊಂದಿಗೆ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ಬುಲೆಟಿನ್ ನಲ್ಲಿ ತಿಳಿಸಿದೆ. ಉಳಿದಂತೆ ರಾಜ್ಯದ ಇತರ ಪ್ರದೇಶಗಳಲ್ಲಿ ಮಳೆ ಕಡಿಮೆಯಾಗಲಿದೆ ಎನ್ನಲಾಗಿದೆ.
ಕೊಡಗಿನ ಹಲವೆಡೆ ಪ್ರವಾಹ, ಭೂಕುಸಿತ ಮತ್ತು ರಸ್ತೆಗಳಿಗೆ ಹಾನಿಯಾದ ಕಾರಣ ಶನಿವಾರದವರೆಗೆ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
"ಕೆಲವೆಡೆ ಮಳೆ ಕಡಿಮೆಯಾಗಿದ್ದು, ನೀರಿನ ಮಟ್ಟ ಕಡಿಮೆಯಾಗುತ್ತಿದ್ದಂತೆ, ರಕ್ಷಣಾ ಮತ್ತು ಪರಿಹಾರ ಕಾರ್ಯಗಳು ಭರದಿಂದ ಸಾಗಿದೆ. ಜಲಾಶಯಗಳ ಒಳಹರಿವು ಕ್ರಮೇಣ ಕಡಿಮೆಯಾಗುತ್ತಿದ್ದು, ಪ್ರವಾಹ ಪರಿಸ್ಥಿತಿ ಸುಧಾರಿಸಿದೆ" ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದ ಪ್ರಕಟಣೆ ತಿಳಿಸಿದೆ.
ಮಳೆ ಮತ್ತು ಪ್ರವಾಹದಿಂದಾಗಿ ರಾಜ್ಯದಲ್ಲಿ ಮೃತಪಟ್ಟವರ ಸಂಖ್ಯೆ 61ಕ್ಕೆ ಏರಿಕೆಯಾಗಿದ್ದು, 50ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ. ರಾಜ್ಯಾದ್ಯಂತ ಪೀಡಿತ 22 ಜಿಲ್ಲೆಗಳಲ್ಲಿ ಸುಮಾರು 7 ಲಕ್ಷ ಜನರನ್ನು ಸ್ಥಳಾಂತರಿಸಲಾಗಿದ್ದು, 51,460 ಪ್ರಾಣಿಗಳನ್ನು ರಕ್ಷಿಸಲಾಗಿದೆ. ಪ್ರಾಥಮಿಕ ಮೌಲ್ಯಮಾಪನದ ಪ್ರಕಾರ, 4.69 ಹೆಕ್ಟೇರ್ ಭೂಮಿಯಯಲ್ಲಿನ ಕೃಷಿ ಮತ್ತು ತೋಟಗಾರಿಕೆ ಬೆಳೆ ನಷ್ಟವಾಗಿದೆ ಎಂದು ಅಂದಾಜಿಸಲಾಗಿದ್ದು, 58,620 ಮನೆಗಳಿಗೆ ಹಾನಿಯಾಗಿದೆ.