ಬೆಂಗಳೂರು: ಮಹದಾಯಿ ನದಿ ನೀರಿಗಾಗಿ ಆಗ್ರಹಿಸಿ ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಗದಗ, ಬಾಗಲಕೋಟೆ ಸೇರಿದಂತೆ ಆ ಭಾಗದ ಜನರು ಬೆಂಗಳೂರಿನ ಮಲ್ಲೇಶ್ವರಂ ಬಿಜೆಪಿ ಕಚೇರಿ ಎದುರು ನಡೆಸುತ್ತಿರುವ ಹೋರಾಟ ಇಂದು ಮೂರನೇ ದಿನಕ್ಕೆ ಕಾಲಿಟ್ಟಿದೆ. ಈ ಹೋರಾಟಗಾರರಿಗೆ ರಸ್ತೆ, ಪುಟ್ ಪಾತ್ನಲ್ಲೆ ಅಶ್ರಯ ದೊರೆತಿದೆ. ಕೊರೆಯುವ ಚಳಿಯಲ್ಲಿ ರಸ್ತೆಯಲ್ಲಿ ರಾತ್ರಿಗಳನ್ನು ಕಳೆಯುತ್ತಿರುವ ಹೋರಾಟಗಾರರ ಅಳುವನ್ನು ಕೇಳುವವರು ಮಾತ್ರ ಯಾರು ಇಲ್ಲ.
ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲೆಯ ನದಿ ನೀರಿಗಾಗಿ ರೈತರು ನಡೆಸುತ್ತಿರುವ ಹೋರಾಟ ಇಂದು ನಿನ್ನೆಯದಲ್ಲ, ಅವರು ಹೋರಾಟವು ಇಂದಿಗೆ 895ನೇ ದಿನಕ್ಕೆ ಕಾಲಿಟ್ಟಿದೆ. ಇದೀಗ ಅವರು ಮಹದಾಯಿ ನದಿ ನೀರಿನ ಹಂಚಿಕೆಯನ್ನು ಬಗೆಹರಿಸುವಂತೆ ಆಗ್ರಹಿಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಜೊತೆ ಸಮಸ್ಯೆಗಳನ್ನು ಕುರಿತು ಸಮಾಲೋಚನೆ ನಡೆಸಬೇಕಿದೆ. ಬಿಎಸ್ವೈ ತಮ್ಮ ಜೊತೆ ಸಮಸ್ಯೆಗಳ ಕುರಿತು ಚರ್ಚಿಸದಿದ್ದರೆ ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ರೈತ ಮುಖಂಡರು ಕಳೆದ ಎರಡು ವರ್ಷಗಳಿಂದ ನಾವು ಹೋರಾಟ ಮಾಡುತ್ತಲೇ ಇದ್ದೇವೆ. ಆದರೆ ಜನಪ್ರತಿನಿಧಿಗಳು ಕಿವಿಗೊಡದೆ ಓಡಾಡುತ್ತಿದ್ದಾರೆ. ನ.15 ರಂದು ಜಗದೀಶ್ ಶೆಟ್ಟರ್ ಮನೆ ಮುಂದೆ ಪ್ರತಿಭಟನೆ ಮಾಡಿದ್ದೆವು. ಆಗ ಬಿಎಸ್ವೈ ಒಂದು ತಿಂಗಳಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದರು. ಹುಬ್ಬಳ್ಳಿಯಲ್ಲಿ ಅವರು ನೀಡಿದ್ದ ಭರವಸೆ ಈಡೇರುವುದೆಂಬ ನಂಬಿಕೆಯಿಂದ ನಾವು ಕಾತುರರಾಗಿದ್ದೆವು, ಆದರೆ ಆ ನಂಬಿಕೆ ಹುಸಿಯಾಗಿದೆ. ಕೇಂದ್ರದಲ್ಲಿ ಹಾಗೂ ಗೋವಾದಲ್ಲಿ ಬಿಜೆಪಿ ಸರ್ಕಾರ ಇದೆ. ರೈತರ ಜೊತೆ ಚೆಲ್ಲಾಟ ಆಡುವುದನ್ನು ಬಿಟ್ಟು, ಈಗಲಾದರೂ ವಿವಾದ ಬಗೆಹರಿಸಿ. ನಮಗೆ ನೀರು ಮಾತ್ರ ಕೊಡಿ ಮತ್ತೇನು ಬೇಡ. ನಮ್ಮ ಬೇಡಿಕೆಯನ್ನು ಈಡೇರಿಸುವವರೆಗೂ ನಮ್ಮ ಈ ಹೋರಾಟಕ್ಕೆ ಕೊನೆಯಿಲ್ಲ ಎಂದು ತಿಳಿಸಿದ್ದಾರೆ.