ಗಾಜಿಯಾಬಾದ್: ಮನೆಯಲ್ಲಿ ದರೋಡೆಗೆಂದು ಬಂದು ಇಬ್ಬರನ್ನು ನಿರ್ದಾಕ್ಷಿಣ್ಯವಾಗಿ ಕೊಂದ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್ನ ಟ್ರೋನಿಕಾ ಸಿಟಿ ಪ್ರದೇಶದಲ್ಲಿ ನಡೆದಿದೆ. ಘಟನೆಯಲ್ಲಿ ಇಬ್ಬರನ್ನು ಗುಂಡಿಕ್ಕಿ ಹತ್ಯೆಗೈಯಲಾಗಿದೆ. ಇನ್ನೊಬ್ಬ ವ್ಯಕ್ತಿಗೆ ಗಂಭೀರ ಗಾಯಗಳಾಗಿವೆ ಎಂದು ಹೇಳಲಾಗಿದೆ.
ಟ್ರೋನಿಕಾ ನಗರದ ಕಿಡ್ವಾಯ್ ನಗರದಲ್ಲಿ ದರೋಡೆಕೋರರು ಧರಮ್ವೀರ್ ಅವರನ್ನು ಗುಂಡಿಕ್ಕಿ ಕೊಂದಿದ್ದಾರೆ. ದರೋಡೆ ಯತ್ನದಲ್ಲಿದ್ದಾಗ ಅವರ ಮೇಲೆ ಗುಂಡು ಹಾರಿಸಿದ್ದಾರೆ ಎಂದು ವರದಿಯಾಗಿದೆ. ಮೃತರನ್ನು ಧರಮ್ವೀರ್ ಮತ್ತು ಸೋನು ಎಂದು ಗುರುತಿಸಲಾಗಿದೆ. ತೀವ್ರವಾಗಿ ಗಾಯಗೊಂಡ ಗುರು ಎಂಬುವವರು ತೇಜ್ ಬಹದ್ದೂರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಭಾನುವಾರ ರಾತ್ರಿ, ಆರು ಮಂದಿ ಶಸ್ತ್ರಸಜ್ಜಿತರು ಧರಮ್ವೀರ್ ಅವರ ಮನೆಗೆ ನುಗ್ಗಿ, ಕುಟುಂಬದ ಎಲ್ಲ ಸದಸ್ಯರನ್ನು ಗನ್ಪಾಯಿಂಟ್ನಲ್ಲಿ ಹಿಡಿದಿದ್ದರು. ಧರ್ಮವೀರ್ ಅವರ ಪತ್ನಿ ಮತ್ತು ಇಬ್ಬರು ಗಂಡು ಮಕ್ಕಳೊಂದಿಗೆ ಅವರ ಮನೆಯಲ್ಲಿದ್ದರು.
ಶಬ್ದ ಮಾಡಿದರೆ ಅವರಿಗೆ ಭೀಕರ ಪರಿಣಾಮ ಎದುರಿಸಬೇಕಾದೀತು ಎಂದು ದುಷ್ಕರ್ಮಿಗಳು ಕುಟುಂಬದವರಿಗೆ ಬೆದರಿಕೆ ಹಾಕಿದರು. ಕಿರುಚಿದ ಶಬ್ದ ಕೇಳಿ, ಧರಮ್ವೀರ್ನ ನೆರೆಹೊರೆಯ ಸೋನು ಮತ್ತು ಅವನ ಸಹೋದರ ಮನೆಗೆ ಬಂದರು. ಇದರ ಬೆನ್ನಲ್ಲೇ, ಹಲ್ಲೆಕೋರನು ನಿರ್ದಾಕ್ಷಿಣ್ಯವಾಗಿ ಗುಂಡು ಹಾರಿಸಲಾರಂಭಿಸಿದರು. ಈ ಸಮಯದಲ್ಲಿ ಧರಮ್ವೀರ್, ಸೋನು ಮತ್ತು ಅವನ ಸಹೋದರನಿಗೆ ಗುಂಡು ಹಾರಿಸಲಾಯಿತು.
ಧರಮ್ವೀರ್ ಅದೇ ಕಟ್ಟಡದಲ್ಲಿ ಪಡಿತರ ಅಂಗಡಿಯೊಂದನ್ನು ನಡೆಸುತ್ತಿದ್ದರು. ಅವನ ಅಂಗಡಿಯ ಶಟರ್ ಸರಿಯಾಗಿ ಕಾರ್ಯನಿರ್ವಹಿಸದ ಕಾರಣ, ಆತ ತನ್ನ ಅಂಗಡಿಯ ರಕ್ಷಣೆಗಾಗಿ ಹೊರಗೆ ಮಲಗಿದ್ದರು ಎನ್ನಲಾಗಿದೆ. ದುಷ್ಕರ್ಮಿಗಳು ಸ್ಥಳಕ್ಕೆ ತಲುಪಿದಾಗ, ಅವರು ಧರಮ್ವೀರ್ಗೆ ನೀರು ಕೇಳಿದ್ದಾರೆ. ಧರಮ್ವೀರ್ ನೀರು ತರಲೆಂದು ಮನೆಗೆ ಹೋದ ಬೆನ್ನಲ್ಲೇ ದರೋಡೆಕೋರರು ಒಳಗೆ ನುಗ್ಗಿದ್ದಾರೆ. ಬಳಿಕ ಈ ದುರ್ಘಟನೆ ಸಂಭವಿಸಿದೆ.
ಪೊಲೀಸರು ಸೋಮವಾರ ಮುಂಜಾನೆ ಸ್ಥಳಕ್ಕೆ ತಲುಪಿ ಘಟನೆಯ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಕುಮಾರ್ ಅವರ ಪ್ರಕಾರ, ಯಾವುದೋ ಹಳೆಯ ವೈರತ್ವವೇ ಈ ಘಟನೆ ಹಿಂದಿನ ಕಾರಣ ಇರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದು, ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿಸಿದರು.