ವಾಷಿಂಗ್ಟನ್: ಇಸ್ರೇಲ್ ರಾಜಧಾನಿಯಾಗಿ ಜೆರುಸಲೆಮ್ ಅನ್ನು ಗುರುತಿಸಲು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಇತ್ತೀಚಿನ ನಿರ್ಧಾರವನ್ನು ವಿರೋಧಿಸಿ ಭಾರತ ಸೇರಿದಂತೆ ಒಟ್ಟು 128 ರಾಷ್ಟ್ರಗಳು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮತ ಚಲಾಯಿಸಿತು.
ಒಂಬತ್ತು ದೇಶಗಳು ನಿರ್ಣಯದ ವಿರುದ್ಧ ಮತ ಚಲಾಯಿಸಿದರೆ, ಇತರ 35 ದೇಶಗಳು ಇದನ್ನು ನಿರಾಕರಿಸಿವೆ.
ಅಚ್ಚರಿಯ ವಿಚಾರವೆಂದರೆ, ಮತದಾನಕ್ಕೂ ಮುನ್ನ ಟ್ರಂಪ್ ನೇತೃತ್ವದ ಅಮೆರಿಕ ಸರ್ಕಾರ ತನ್ನ ಮಿತ್ರ ರಾಷ್ಚ್ರಗಳಿಗೆ ತನ್ನ ವಿರುದ್ಧ ಮತಹಾಕದಂತೆ ಪರೋಕ್ಷವಾಗಿ ಎಚ್ಚರಿಕೆ ನೀಡಿತ್ತು. ಒಂದು ವೇಳೆ ತನ್ನ ವಿರುದ್ಧ ಮತ ಹಾಕಿದ್ದೇ ಆದರೆ ತಾನು ವಿವಿಧ ರಾಷ್ಟ್ರಗಳಿಗೆ ನೀಡುತ್ತಿರುವ ಆರ್ಥಿಕ ನೆರವನ್ನು ಕಡಿತಗೊಳಿಸುವ ಕುರಿತು ಅಮೆರಿಕ ಈ ಹಿಂದೆಯೇ ಎಚ್ಚರಿಕೆ ನೀಡಿತ್ತು. ಇದರ ಹೊರತಾಗಿಯೂ 128 ರಾಷ್ಟ್ರಗಳು ಅಮೆರಿಕದ ನಿರ್ಧಾರದ ವಿರುದ್ಧ ಮತ ಹಾಕುವ ಮೂಲಕ ಅಮೆರಿಕ ನಿರ್ಧಾರ ತಪ್ಪು ಎಂದು ಸಾರಿವೆ.
ಜೆರುಸಲೇಂ ಅನ್ನು ಇಸ್ರೇಲ್ನ ರಾಜಧಾನಿ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದರು. ಅಲ್ಲದೆ, ಟೆಲ್ ಅವಿವ್ನಲ್ಲಿರುವ ತಮ್ಮ ದೇಶದ ದೂತವಾಸ ಕಚೇರಿಯನ್ನು ಜೆರುಸಲೇಂಗೆ ಸ್ಥಳಾಂತರಿಸಿದ್ದರು. ಆ ಮೂಲಕ ಅಂತಾರರಾಷ್ಟ್ರೀಯ ಒಪ್ಪಂದವನ್ನು ಅವರು ಮುರಿದಿದ್ದರು. ಇದಕ್ಕೆ ಸಾಕಷ್ಟು ಖಂಡನೆ ಮತ್ತು ಪ್ರತಿಭಟನೆಗಳು ವ್ಯಕ್ತವಾಗಿತ್ತು.